ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಸುರಂಗ ಮಾರ್ಗ – ಮೊದಲ ಹಂತದಲ್ಲಿ ಹೆಬ್ಬಾಳದಿಂದಲೇ ರಸ್ತೆ ನಿರ್ಮಾಣ!
ಬೆಂಗಳೂರಿನಲ್ಲಿ ವಾಹನ ದಟ್ಟನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದೀಗ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದೆ.
ಹೌದು, 1.10 ಕೋಟಿಗಿಂತ ಅಧಿಕ ವಾಹನಗಳ ಒತ್ತಡ ಎದುರಿಸುತ್ತಿರುವ ಬೆಂಗಳೂರು ನಗರದ ರಸ್ತೆಗಳು ದಟ್ಟಣೆ ಅವಧಿಯಲ್ಲಿಅಕ್ಷರಶಃ ಪಾರ್ಕಿಂಗ್ ತಾಣಗಳಂತಾಗುತ್ತಿವೆ. ಟ್ರಾಫಿಕ್ ಜಾಮ್ನಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿಕುಖ್ಯಾತಿಗೊಳಗಾಗುತ್ತಿದೆ. ಇದರಿಂದ ಮುಕ್ತಿ ಪಡೆಯಲು ರಾಜ್ಯ ಸರಕಾರ ಮತ್ತು ಪಾಲಿಕೆಯು ನಾನಾ ಕಸರತ್ತುಗಳನ್ನು ನಡೆಸುತ್ತಲೇ ಇವೆ. ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಗ್ರೇಡ್ ಸೆಪರೇಟರ್ಗಳ ನಿರ್ಮಾಣದಿಂದಲೂ ನಗರವನ್ನು ದಟ್ಟಣೆಯಿಂದ ಪಾರು ಮಾಡಲು ಸಾಧ್ಯವಾಗುತ್ತಿಲ್ಲ. ಟ್ರಾಫಿಕ್ ನಿರ್ವಹಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇದೀಗ ನಗರ ಟ್ರಾಫಿಕ್ ನಿರ್ವಹಣೆಗೆ ಸುರಂಗ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: ಟ್ರಾಫಿಕ್ ನಲ್ಲೂ ಪೆಟ್ರೋಲ್ ಉಳಿಸಲಿದೆ ಗೂಗಲ್ ಮ್ಯಾಪ್!
ನಗರದಲ್ಲಿ ಟ್ರಾಫಿಕ್ಜಾಮ್ ನಿಯಂತ್ರಣಕ್ಕೆ ಸಮಗ್ರ ರಸ್ತೆ ಮೂಲಸೌಕರ್ಯ ಯೋಜನೆ ರೂಪಿಸಲು ಹಾಗೂ ಆಯ್ದ ಕಾರಿಡಾರ್ಗಳಲ್ಲಿ ಸಂಚಾರ ನಿರ್ವಹಣೆಗೆ ಸುರಂಗ, ಗ್ರೇಡ್ ಸೆಪರೇಟರ್, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಕೊಡಲು ಬಿಬಿಎಂಪಿಯು ಅಲ್ಪಾವಧಿ ಟೆಂಡರ್ ಕರೆದಿತ್ತು. ಟರ್ಕಿ ಮೂಲದ ಅಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಕಂಪನಿಯು ಗುತ್ತಿಗೆ ಪಡೆದಿದ್ದು, ಈ ಕಂಪನಿಗೆ ಪಾಲಿಕೆಯು 4.70 ಕೋಟಿ ರೂ. ಪಾವತಿಸುತ್ತಿದೆ ಎಂದು ವರದಿಯಾಗಿದೆ.
ಈ ಕಂಪನಿಯು ಆಯ್ದ 12 ಹೈಡೆನ್ಸಿಟಿ ಕಾರಿಡಾರ್ಗಳ 193 ಕಿಮೀಉದ್ದದ ಮಾರ್ಗದಲ್ಲಿಅಧ್ಯಯನ ನಡೆಸಿ ಸುರಂಗ ರಸ್ತೆ, ಗ್ರೇಡ್ ಸೆಪರೇಟರ್ ನಿರ್ಮಾಣ ಇಲ್ಲವೇ ರಸ್ತೆ ವಿಸ್ತರಣೆ ಸೂಕ್ತವೇ ಎಂಬುದರ ಕುರಿತು ವರದಿ ಸಲ್ಲಿಸಲಿದೆ. ಸದ್ಯ ಮಧ್ಯಂತರ ವರದಿ ಸಲ್ಲಿಸಿರುವ ಕಂಪನಿಯು ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ನಿರ್ಮಿಸಬಹುದೆಂದು ತಿಳಿಸಿದೆ.
ಮೊದಲ ಹಂತದಲ್ಲಿ ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗಿನ 3 ಕಿಮೀ ಉದ್ದದ ಮಾರ್ಗದಲ್ಲಿಸುರಂಗ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರ ಸಾಧಕ ಬಾಧಕಗಳನ್ನು ಆಧರಿಸಿ, ಸಿಲ್ಕ್ ಬೋರ್ಡ್ವರೆಗೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ.
ಹೆಬ್ಬಾಳ ಜಂಕ್ಷನ್ನಲ್ಲಿ ವಾಹನ ಸಂಚಾರವನ್ನು ಸರಾಗಗೊಳಿಸುವ ಸಲುವಾಗಿ ಪ್ರಾಯೋಗಿಕವಾಗಿ ಸುರಂಗ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಸುರಂಗ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನದ ಅಗತ್ಯವಿಲ್ಲ. ಆದರೆ, ಒಂದು ಕಿಮೀ ಉದ್ದದ ಸುರಂಗ ನಿರ್ಮಾಣಕ್ಕೆ ಕನಿಷ್ಠ 500 ಕೋಟಿ ರೂ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಈ ಲೆಕ್ಕಾಚಾರದಂತೆ 3 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ 1500 ರಿಂದ 2000 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ದ್ವಿಮುಖ ಸುರಂಗ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು, ಇದು 4 ಪಥವಿರಲಿದೆ. ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದ್ದು, 2024-25ನೇ ಸಾಲಿನ ಬಜೆಟ್ನಲ್ಲಿಅನುದಾನ ಒದಗಿಸುವ ಸಾಧ್ಯತೆ ಇದೆ.