ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿಗೆ ಸುಮಲತಾ ಎಚ್ಚರಿಕೆ- ಮಂಡ್ಯದಿಂದ ಕಣಕ್ಕಿಳಿಯುತ್ತಾರಾ ಕುಮಾರಸ್ವಾಮಿ?

ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿಗೆ ಸುಮಲತಾ ಎಚ್ಚರಿಕೆ- ಮಂಡ್ಯದಿಂದ ಕಣಕ್ಕಿಳಿಯುತ್ತಾರಾ ಕುಮಾರಸ್ವಾಮಿ?

ಜೆಡಿಎಸ್-ಬಿಜೆಪಿ ನಾಯಕರು ಒಟ್ಟಾಗಿ ಲೋಕಸಭಾ ಚುನಾವಣೆಗೆ ಮೈತ್ರಿ ಮಂತ್ರ ಜಪಿಸುತ್ತಿದ್ದಾರೆ. ಕರ್ನಾಟಕದ 28 ಕ್ಷೇತ್ರಗಳನ್ನೂ ಗೆಲ್ಲಬೇಕೆಂದು ರಣತಂತ್ರ ರೂಪಿಸುತ್ತಿದ್ದಾರೆ. ಆದ್ರೆ ರಾಜ್ಯದ ಎಲ್ಲಾ ಕ್ಷೇತ್ರಗಳದ್ದೇ ಒಂದು ಲೆಕ್ಕ ಆದ್ರೆ ಮಂಡ್ಯ ಮಾತ್ರ ಕಗ್ಗಂಟಾಗುತ್ತಲೇ ಹೋಗ್ತಿದೆ. ಸಕ್ಕರೆ ನಗರಿ ಬಿಜೆಪಿಗೋ ಅಥವಾ ದಳಕ್ಕೋ ಅನ್ನೋದು ಡಿಸೈಡ್ ಆಗೋ ಮೊದ್ಲೇ ಅಖಾಡ ರಣರಂಗವಾಗ್ತಿದೆ. ಸಂಸದೆ ಸುಮಲತಾ ಅಂಬರೀಶ್ ಸಿಡಿಸಿರುವ ಬಾಂಬ್ ಮೈತ್ರಿ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ಸುಮಲತಾ ಹೇಳಿದ್ದೇನು..? ಬಿಜೆಪಿಗೆ ತಲೆಬಿಸಿ ಶುರುವಾಗಿದ್ದೇಕೆ..? ಕುಮಾರಣ್ಣನ ಪ್ಲ್ಯಾನ್ ವರ್ಕೌಟ್ ಆಗುತ್ತಾ..? ಕಾಂಗ್ರೆಸ್ ಲಾಭ ಪಡೆದುಕೊಳ್ಳುತ್ತಾ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸುಮಲತಾ ಮುಂದೆ ಟಿಕೆಟ್ ಸವಾಲು – ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಮಾಡ್ತಾರಾ..?

ಸ್ವಾಭಿಮಾನ, ಸ್ವಾಭಿಮಾನ ಎನ್ನುತ್ತಲೇ 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಘಟಾನುಘಟಿ ನಾಯಕರಿಗೆ ನೀರು ಕುಡಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಸಂಸದೆಯಾಗಿ ಆಯ್ಕೆ ಆಗಿದ್ರು. ಅಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸೋತು ಸುಣ್ಣವಾಗಿದ್ರು. ಆ ಸೋಲಿನ ಸೇಡು ಕುಮಾರಣ್ಣನ ಎದೆಯಲ್ಲಿ ಕುದಿಯುತ್ತಲೇ ಇದೆ. ಸೋಲಿನ ಪ್ರತೀಕಾರಕ್ಕಾಗಿ ಕಾಯ್ತಿದ್ದಾರೆ. ಇತ್ತ ಬಿಜೆಪಿ ನಾಯಕರು ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯೇ ಗೆಲ್ಲಬೇಕು ಅನ್ನೋ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಆದ್ರೆ ಸುಮಲತಾ ಅಂಬರೀಶ್ ನಡೆ ಈಗ ಬಿಜೆಪಿ ಬುಡವನ್ನೇ ಅಲುಗಾಡಿಸ್ತಿದೆ.

ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿದ್ದ ಸುಮಲತಾ ಅಂಬರೀಶ್ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗ್ತಿದ್ರು. ಪ್ರಧಾನಿ ಮೋದಿ ಆದಿಯಾಗಿ ರಾಜ್ಯದ ನಾಯಕರು ಸುಮಲತಾ ಬೆನ್ನಿಗೆ ನಿಂತಿದ್ದರು. ಆದ್ರೆ ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಂಡಿವೆ. ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗೋದು ಬಹುತೇಕ ಪಕ್ಕಾ ಆಗಿದೆ. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಟಿಕೆಟ್ ಸಿಗಲ್ಲ ಅನ್ನೋದು ಕನ್ಫರ್ಮ್ ಆಗ್ತಿದೆ. ಹೀಗಾಗಿ ಮಂಡ್ಯ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ಆಪ್ತರನ್ನ ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿರುವ ಸುಮಲತಾ, ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ನಾನು ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದೇನೆ. ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಚುನಾವಣೆಯಲ್ಲಿ ಓಡಾಡಿದ್ದೇನೆ. ಹೀಗೆ ಬಿಜೆಪಿ ಪರ ನಿಂತ ನನಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ಆಯ್ಕೆ ಇಲ್ಲ. ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಗುಡುಗಿದ್ದಾರೆ. ಇದೇ ವೇಳೆ ದಿವಂಗತ ಅಂಬರೀಶ್ ಅವರ ವಿಚಾರವನ್ನು  ಪ್ರಸ್ತಾಪಿಸಿ ಅವರ ತವರು ಭೂಮಿ ಮಂಡ್ಯ. ಮಂಡ್ಯ ಬಿಟ್ಟರೆ ನನಗೆ ರಾಜಕೀಯವೇ ಬೇಡ. ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಗುಡುಗಿದ್ದಾರೆ.

ಸುಮಲತಾ ಅಂಬರೀಶ್ ಗೆ ಹೆಚ್ಚಿನ ಜನಬಲ ಇದೆ ಅನ್ನೋದನ್ನ ಅರಿತಿದ್ದ ಬಿಜೆಪಿ ನಾಯಕರು ಸಾಕಷ್ಟು ಪ್ಲ್ಯಾನ್​ಗಳನ್ನ ಮಾಡಿಕೊಂಡಿದ್ರು. ಮಂಡ್ಯ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಸುಮಲತಾರನ್ನ ಬೇರೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಬಹುದು ಅಂತಾ. ಆದ್ರೆ ಇದಕ್ಕೆಲ್ಲಾ ತಿರುಗೇಟು ಎನ್ನುವಂತೆ ಸುಮಲತಾ ಸಭೆ ನಡೆಸಿ ಬಿಜೆಪಿಗೇ ಶಾಕ್ ಕೊಟ್ಟಿದ್ದಾರೆ. ಮಂಡ್ಯದ ಬಿಜೆಪಿ ನಾಯಕರು ಕೂಡ ಸಂಸದೆಗೆ ಸಪೋರ್ಟ್ ಮಾಡೋದಾಗಿ ಹೇಳಿದ್ದಾರೆ. ಮಂಡ್ಯದ ಬಿಜೆಪಿ ಮಾಜಿ ಸಚಿವ ನಾರಾಯಣಗೌಡ ಕೂಡ ಸುಮಲತಾ ಪರ ಬ್ಯಾಟ್ ಬೀಸಿದ್ದಾರೆ. ಆದ್ರಿಲ್ಲಿ ಬಿಜೆಪಿ ಐಡಿಯಾವೇ ಬೇರೆ ಇದೆ.

ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ಪರ್ಧೆ?

ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರೋದ್ರಿಂದ ಮಂಡ್ಯ ಲೋಕಸಭಾ ಕ್ಷೇತ್ರವು ಜೆಡಿಎಸ್ ಪಾಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇದೇ ಕಾರಣಕ್ಕೆ ಸುಮಲತಾರಿಗೆ ಕ್ಷೇತ್ರ ಬದಲಾವಣೆ ವಿಚಾರ ಬಿಜೆಪಿಯಲ್ಲಿ ಭಾರೀ ಚರ್ಚೆಯಾಗ್ತಿದೆ. ಅದ್ರಲ್ಲೂ ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಬಿಜೆಪಿ – ಜೆಡಿಎಸ್ ಮೈತ್ರಿಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲು ಬಿಜೆಪಿ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ, ಕುಮಾರಸ್ವಾಮಿಯವರು ಮಂಡ್ಯ ಕ್ಷೇತ್ರಕ್ಕಾಗಿಯೇ ಪಟ್ಟು ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕುಮಾರಸ್ವಾಮಿಯ ಕೂಡ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ತಾವೇ ಖುದ್ದಾಗಿ ಸುಮಲತಾರನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಹೇಳಿದ್ದಾರೆ. ಇದರ ನಡುವೆಯೇ, ಸುಮಲತಾರಿಗೆ ಬೆಂಗಳೂರು ಉತ್ತರ ಅಥವಾ ರಾಮನಗರ ಕೇತ್ರಗಳನ್ನು ಕೊಡಲು ಬಿಜೆಪಿ ಆಲೋಚಿಸಿದೆ ಎಂದೂ ಹೇಳಲಾಗಿದೆ.

ಅಸಲಿಗೆ ಸುಮಲತಾರಿಗೆ ಈ ಬಾರಿಯೂ ಪಕ್ಷೇತರಾಗಿ ಕಣಕ್ಕಿಳಿಯಲು ಅವಕಾಶವಿದೆ. ಹೀಗೆ ಮಾಡಿದ್ರೆ ಬಿಜೆಪಿ ವಿರುದ್ಧ ಸೆಡ್ಡು ಹೊಡೆದ ಹಾಗಾಗುತ್ತದೆ. ಒಂದು ವೇಳೆ, ಪಕ್ಷೇತರರಾಗಿ ಸ್ಪರ್ಧಿಸಿದರೂ ಅದರಿಂದ ಜೆಡಿಎಸ್ – ಬಿಜೆಪಿಗೆ ಖಂಡಿತವಾಗಿಯೂ ನಷ್ಟವಾಗಬಹುದು. ಮತಗಳು ಒಡೆದರೆ ಅದು ಸುಮಲತಾರಿಗೂ ನಷ್ಟ ಉಂಟು ಮಾಡಬಹುದು. ಇದೇ ಕಾರಣಕ್ಕಾಗಿ, ಸುಮಲತಾ ಅವರು, ತಾವು ಕ್ಷೇತ್ರ ಬದಲಾವಣೆ ಮಾಡಲ್ಲ. ಬಿಜೆಪಿಯು ಮಂಡ್ಯ ಕ್ಷೇತ್ರವನ್ನು ತನ್ನಲ್ಲೇ ಇಟ್ಟುಕೊಳ್ಳುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ಹೈಕಮಾಂಡ್ ಗೆ ಪರೋಕ್ಷವಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

 

Sulekha