ಆಫ್ನ 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ಬಿಗ್ ಪ್ಲಾನ್!– ಹೊಸ ಬಾಂಬ್ ಸಿಡಿಸಿದ ಕೇಜ್ರಿವಾಲ್!
ಲೋಕಸಭಾ ಚುನಾವಣೆಗೆ ತಯಾರಿ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿಯಾಗಿಯೇ ತಯಾರಿ ನಡೆಸ್ತಾ ಇವೆ. ಇದೀಗ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಆಪ್ ಸರ್ಕಾರವನ್ನು ಕೆಡವಲು ಸಂಚು ರೂಪಿಸಿದೆ. 7 ಆಮ್ ಆದ್ಮಿ ಪಕ್ಷದ ಶಾಸಕರನ್ನ ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಇನ್ನೇನು ಬಿಸಿಬಿಸಿ ಮೀನಿನ ಸಾರು ತಿನ್ನಬೇಕಿತ್ತು ಈ ಸಹೋದರರು! – ಕೆಲವೇ ಕ್ಷಣಗಳದಲ್ಲಿ ಹಾರಿಹೋಯ್ತು ಅಣ್ಣನ ಪ್ರಾಣ!
ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಬಿಜೆಪಿ ಆಪ್ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಪ್ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಪ್ಲ್ಯಾನ್ ಮಾಡಿದೆ. ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದು ಕಿಡಿ ಕಾರಿದ್ದಾರೆ.
ಇತ್ತೀಚೆಗೆ ಬಿಜೆಪಿ ನಾಯಕರು ಎಎಪಿಯ 7 ಶಾಸಕರನ್ನ ಸಂಪರ್ಕಿಸಿದ್ದಾರೆ. ಕೆಲ ದಿನಗಳ ನಂತರ ನಾವು ಕೇಜ್ರಿವಾಲ್ ಅವರನ್ನ ಬಂಧಿಸುತ್ತೇವೆ. ನಂತರ ಶಾಸಕರನ್ನ ಇಬ್ಭಾಗ ಮಾಡುತ್ತೇವೆ. ದೆಹಲಿಯ ಆಪ್ ಸರ್ಕಾರವನ್ನ ಸಂಪೂರ್ಣವಾಗಿ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ಕೊಡುತ್ತೇವೆ. ಜೊತೆಗೆ ಬಿಜೆಪಿಯಿಂದ ಟಿಕೆಟ್ ನೀಡುತ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದು ಬಿಜೆಪಿಯ ನಡವಳಿಕೆಯನ್ನು ತೋರಿಸುತ್ತದೆ. ಮದ್ಯ ನೀತಿ ಹಗರಣ ತನಿಖೆಯಲ್ಲಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಆದ್ದರಿಂದ ಆಪ್ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದ್ದಾರೆ. ಅವರ ಷಡ್ಯಂತ್ರ ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದಲೂ ಇಂತಹ ಅನೇಕ ಷಡ್ಯಂತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಯಾವುದೂ ಸಕ್ಸಸ್ ಆಗಿಲ್ಲ. ಏಕೆಂದರೆ ದೇವರು ಮತ್ತು ಈ ರಾಜ್ಯದ ಜನತೆ ಸದಾ ನಮ್ಮನ್ನ ಬೆಂಬಲಿಸಿದ್ದಾರೆ. ನಮ್ಮ ಎಲ್ಲ ಶಾಸಕರೂ ಬಲವಾಗಿ ಜೊತೆಯಲ್ಲಿದ್ದು ಆಫರ್ ಅನ್ನು ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.