ಕಾಂಗ್ರೆಸ್ಗೆ ಹೋದಷ್ಟೇ ಸ್ಪೀಡ್ ಆಗಿ ವಾಪಸ್ ಆದ ಜಗದೀಶ್ ಶೆಟ್ಟರ್ – ‘ಕೈ’ಗೆ ಬೈ ಬೈ ಹೇಳಲು ಕಾರಣವೇನು?
ರಾಜಕಾರಣಿಗಳನ್ನ ನಾಯಕರು ಅನ್ನೋದಕ್ಕಿಂತ ಜಂಪಿಂಗ್ ಸ್ಟಾರ್ಸ್ ಅನ್ನಬಹುದು. ಗಾಳಿ ಬಂದ ಕಡೆ ತೂರಿಕೋ ಅಂತಾರಲ್ಲ ಹಾಗೇ ಯಾವ ಕ್ಷಣದಲ್ಲಿ ಯಾವ ಪಕ್ಷಕ್ಕೆ ಹಾರುತ್ತಾರೋ ಹೇಳೋಕೆ ಆಗಲ್ಲ. ಇದೀಗ ಈ ಸಾಲಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರ್ಪಡೆಯಾಗಿದ್ದಾರೆ. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನಾಯಕರ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರಿದ್ದ ಶೆಟ್ಟರ್, ಹೋದಷ್ಟೇ ಸ್ಪೀಡಾಗಿ ಬಿಜೆಪಿಗೆ ಮರಳಿದ್ದಾರೆ. ನಿನ್ನೆ, ಮೊನ್ನೆವರೆಗೂ ಕಾಂಗ್ರೆಸ್ ಬಿಡುವ ಮಾತೇ ಇಲ್ಲ ಎನ್ನುತ್ತಿದ್ದ ಶೆಟ್ಟರ್, ದಿಢೀರನೆ ಬಿಜೆಪಿ ಸೇರಿ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಕೈ ನಾಯಕರಿಗೆ ಶೆಟ್ಟರ್ ನಡೆ ಬಗ್ಗೆ ಕ್ಲಾರಿಟಿ ಸಿಗೋ ಮುನ್ನವೇ ಕೈ ಬಿಟ್ಟು ಕಮಲ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಶೆಟ್ಟರ್ ಮರಳಿ ಬಿಜೆಪಿ ಸೇರಿದ್ದೇಕೆ..? ಅಮಿತ್ ಶಾ, ವಿಜಯೇಂದ್ರ ತಂತ್ರ ವರ್ಕೌಟ್ ಆಯ್ತಾ..? ಲೋಕಸಭಾ ಚುನಾವಣೆಗೆ ಎಫೆಕ್ಟ್ ಆಗುತ್ತಾ..? ಕಾಂಗ್ರೆಸ್ ನಾಯಕರು ಹೇಳೋದೇನು..? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರಿದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಶಾಕಿಂಗ್ ಹೇಳಿಕೆ! – ಮತ್ತೆ ಕಮಲಕ್ಕೆ ಜೈ ಅಂತಾರಾ ಸವದಿ?
ಜನವರಿ 25ರ ಗುರುವಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ಮರು ಸೇರ್ಪಡೆಗೊಂಡಿದ್ದಾರೆ. ಶೆಟ್ಟರ್ ನಿರ್ಧಾರದಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಹಲವು ಲೆಕ್ಕಾಚಾರಗಳು ಶುರುವಾಗಿವೆ. ರಾಜಕೀಯ ರಣತಂತ್ರಗಳು ಹಾಗೂ ಸಮೀಕರಣಗಳು ಬದಲಾಗುವ ನಿರೀಕ್ಷೆ ಇದೆ. ಜೊತೆಯಲ್ಲೇ ಶೆಟ್ಟರ್ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರವನ್ನ ದಿಢೀರ್ ಎಂದು ಪ್ರಕಟಿಸಿದ್ದೇಕೆ ಎಂಬ ಪ್ರಶ್ನೆಯೂ ಎದ್ದಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಬಿಜೆಪಿ ತನ್ನ ಹಳೇ ಗೆಳೆಯರಿಗೆ ಗಾಳ ಹಾಕ್ತಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ಸೇರ್ಪಡೆಯಾದ ನಾಯಕರನ್ನ ಮತ್ತೆ ಪಕ್ಷಕ್ಕೆ ಕರೆತರುತ್ತಿದೆ. ಇದೀಗ ಜಗದೀಶ್ ಶೆಟ್ಟರ್ ಬೇಟೆ ಸಕ್ಸಸ್ ಆಗಿದೆ. ಬುಧವಾರವೇ ದೆಹಲಿಗೆ ಹಾರಿದ್ದ ಶೆಟ್ಟರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ಚರ್ಚೆ ನಡೆಸಿದ್ದರು. ಮಾತುಕತೆ ವೇಳೆ ಶೆಟ್ಟರ್ ಮನವೊಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಬಳಿಕ ಬಿಜೆಪಿ ಪಕ್ಷದ ನಾಯಕರ ಸಮ್ಮುಖದಲ್ಲಿ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ನಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಕರೆ ಮಾಡಿ ರಾಜೀನಾಮೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಸೇರ್ಪಡೆಗೂ ಮುನ್ನ ಕಾಂಗ್ರೆಸ್ ಪಕ್ಷ ಹಾಗೂ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದ ವಿಚಾರವಾಗಿ ಕೈ ನಾಯಕರು ಆಕ್ರೋಶಗೊಂಡಿದ್ದಾರೆ. ಹಿರಿಯ ನಾಯಕರು ಅನ್ನೋ ಕಾರಣಕ್ಕೆ ಎಲ್ಲ ಸ್ಥಾನಮಾನ ನೀಡಿದ್ದರೂ ಕೂಡಾ ಶೆಟ್ಟರ್ ಪಕ್ಷ ಬಿಟ್ಟು ಹೋದರು. ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದ್ರು ಅಂತಾ ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಚುನಾವಣೆಯಲ್ಲಿ ಸೋತ ಶೆಟ್ಟರ್ ಅವರನ್ನು ನಾವು ಎಂಎಲ್ಸಿ ಮಾಡಿದ್ವಿ. ಆದ್ರೂ ಬಿಟ್ಟು ಹೋದ್ರು ಅಂತಾ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಆದ್ರೆ ಶೆಟ್ಟರ್ ಮಾತ್ರ ಕಾಂಗ್ರೆಸ್ ನನ್ನನ್ನು ಚೆನ್ನಾಗಿಯೇ ನಡೆಸಿಕೊಂಡಿದೆ ಎನ್ನುತ್ತಲೇ ಬಿಜೆಪಿಗೆ ಮರಳಿದ್ದಾರೆ. ಶೆಟ್ಟರ್ ಅವ್ರ ರೀ ಎಂಟ್ರಿಯಿಂದ ಹಲವು ಲೆಕ್ಕಾಚಾರಗಳು ಗರಿಗೆದರಿವೆ.
ಲೋಕಸಭೆಗೆ ಶೆಟ್ಟರ್ ಸ್ಪರ್ಧೆ?
ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. 2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಶೆಟ್ಟರ್ ಸತತವಾಗಿ ಗೆದ್ದು ಬಂದಿದ್ರು. ಆದ್ರೆ 2023ರಲ್ಲಿ ಶೆಟ್ಟರ್ಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿತ್ತು. ಇದ್ರಿಂದ ಸಿಟ್ಟಾದ ಶೆಟ್ಟರ್ ಬಿಜೆಪಿ ಜೊತೆ ನಂಟು ಕಡಿದುಕೊಂಡು ದಿಢೀರ್ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರನ್ನು ಗೆಲ್ಲಿಸಿದ್ದರು. ಇದೀಗ ಬದಲಾದ ಕಾಲ ಘಟ್ಟದಲ್ಲಿ ಶೆಟ್ಟರ್ ಮತ್ತೆ ಬಿಜೆಪಿಗೆ ಕಾಲಿಟ್ಟಿದ್ದಾರೆ. ಶೆಟ್ಟರ್ ಬಿಜೆಪಿ ಸೇರ್ಪಡೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹಲವು ರೀತಿಯಲ್ಲಿ ಬಿಜೆಪಿಗೆ ಲಾಭ ತಂದು ಕೊಡುವ ಲೆಕ್ಕಾಚಾರವಿದೆ. ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರವಾಡ ಲೋಕಸಭಾ ಕ್ಷೇತ್ರವನ್ನ ಅವಲೋಕಿಸಿದರೆ, ಈ ಕ್ಷೇತ್ರದ ಹಾಲಿ ಸಂಸದ ಪ್ರಲ್ಹಾದ್ ಜೋಷಿ ಕೇಂದ್ರದ ಪ್ರಭಾವಿ ಸಚಿವರು. ಆದರೆ, ಈ ಬಾರಿ ಧಾರವಾಡದಿಂದ ಶೆಟ್ಟರ್ ಸ್ಪರ್ಧಿಸಬಹುದೇ ಅನ್ನೋ ಮಾತುಗಳು ಕೇಳಿ ಬರ್ತಿವೆ. ಪ್ರಭಾವಿ ಸಚಿವರಾಗಿರುವ ಪ್ರಲ್ಹಾದ್ ಜೋಷಿ ಅವರ ಕ್ಷೇತ್ರ ಬದಲಾವಣೆ ಮಾಡಿ ಧಾರವಾಡದಿಂದ ಲಿಂಗಾಯತ ನಾಯಕ ಶೆಟ್ಟರ್ ಅವರನ್ನು ಕಣಕ್ಕೆ ಇಳಿಸಬಹುದಾ ಅನ್ನೋ ಚರ್ಚೆಗಳೂ ಶುರುವಾಗಿವೆ.
ಶೆಟ್ಟರ್ ಅವ್ರ ಬಿಜೆಪಿ ಸೇರ್ಪಡೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಟಾಂಗ್ ಕೊಟ್ಟಿದ್ದಾರೆ. ಶೆಟ್ಟರ್ ಅನಿವಾರ್ಯತೆ ನಮಗಿಲ್ಲ ಅಂದಿದ್ದಾರೆ. ಇದಾಗ್ಯೂ ಶೆಟ್ಟರ್ ದಿಢೀರನೆ ಬಿಜೆಪಿ ಸೇರೋಕೆ ಕಾರಣ ಲೋಕಸಭಾ ಟಿಕೆಟ್ ಆಫರ್ ಇರಬಹುದೇ ಅನ್ನೋ ಚರ್ಚೆ ಈಗಾಗಲೇ ಶುರುವಾಗಿದೆ. ಹಾವೇರಿ ಅಥವಾ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎನ್ನಲಾಗ್ತಿದೆ. ಆದ್ರೆ ಈವರೆಗೂ ಕ್ಲಾರಿಟಿ ಸಿಕ್ಕಿಲ್ಲ. ಇನ್ನು ಶೆಟ್ಟರ್ ಬಿಜೆಪಿ ಸೇರ್ಪಡೆ ನಡುವೆಯೇ ಲಕ್ಷ್ಮಣ ಸವದಿ ಕೂಡ ಮರಳಿ ಬಿಜೆಪಿಗೆ ಹೋಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಆದ್ರೆ ಸವದಿ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಒಟ್ಟಾರೆ ಚುನಾವಣೆ ಹೊಸ್ತಿಲಲ್ಲೇ ನಾಯಕರ ಪಕ್ಷಾಂತರ ಪರ್ವ ಶುರುವಾಗಿದೆ. ಇದು ಹಲವು ಲೆಕ್ಕಾಚಾರಗಳಿಗೂ ಕಾರಣವಾಗಿದೆ.