ಸಾಲು ಸಾಲು ರಜೆ ಅಂತಾ ಊರಿಗೆ ಹೊರಟವರಿಗೆ ಬಿಗ್ ಶಾಕ್ – ಟಿಕೆಟ್ ದರ ದುಪ್ಪಟ್ಟು ಮಾಡಿದ ಖಾಸಗಿ ಬಸ್ ಮಾಲಕರು!
ಗಣರಾಜ್ಯೋತ್ಸದ ಹಿನ್ನೆಲೆ ಉದ್ಯೋಗಿಗಳಿಗೆ ಮೂರು ದಿನಗಳ ಕಾಲ ರಜೆ ಇದೆ. ಸಾಲು ಸಾಲು ರಜೆ ಇರುವ ಕಾರಣ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ. ಬಸ್ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ಶುಕ್ರವಾರದಿಂದ ಮೂರು ದಿನಗಳ ಕಾಲ ರಜೆ ಇರುವ ಹಿನ್ನೆಲೆ ಉದ್ಯೋಗ ಸೇರಿದಂತೆ ಇನ್ನಿತರ ಜೀವನಕ್ಕಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಜನರು ತಮ್ಮ ಊರಿನತ್ತ ಹೊರಟ್ಟಿದ್ದಾರೆ. ಅನೇಕರು ಪ್ರವಾಸಿ ತಾಣಗಳಿಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದಾರೆ. ರಜೆ ಅಂತ ಊರಿನ ಕಡೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಮತ್ತೆ ಶಾಕ್ ಕೊಟ್ಟಿದ್ದಾರೆ. ಮಾಲೀಕರು ಟಿಕೆಟ್ ದರವನ್ನು ಡಬಲ್ ಮಾಡಿದ್ದಾರೆ. ಆದರೂ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್ಗಳು ಬಹುತೇಕ ಭರ್ತಿಯಾಗಿವೆ.
ಶುಕ್ರವಾರ ಗಣರಾಜೋತ್ಸ ಇದೆ, ಜ.27 ರಂದು ನಾಲ್ಕನೇ ಶನಿವಾರ, 28ನೇ ತಾರೀಕು ಭಾನುವಾರ. ಹೀಗಾಗಿ ಎರಡರಿಂದ ಮೂರು ಪಟ್ಟು ಟಿಕೆಟ್ ದರವನ್ನು ಏರಿಸುವ ಮೂಲಕ ಖಾಸಗಿ ಬಸ್ ಮಾಲೀಕರು ಹೆಚ್ಚಿನ ಹಣ ಗಳಿಸಲು ಮುಂದಾಗಿದ್ದಾರೆ. ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿದ್ದಾರೆ. ಖಾಸಗಿ ಬಸ್ಗಳು ಇಂತಹ ಸುಲಿಗೆ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.
ಖಾಸಗಿ ಬಸ್ ಟಿಕೆಟ್ ದರ ಎಷ್ಟು ಹೆಚ್ಚಳ?
ಎಲ್ಲಿಂದ ಎಲ್ಲಿಗೆ ಸಾಮಾನ್ಯ ದಿನದ ದರ ಇಂದಿನ ಟಿಕೆಟ್ ದರ
- ಬೆಂಗಳೂರು-ಶಿವಮೊಗ್ಗ ₹450-₹600 ₹1250- ₹1600
- ಬೆಂಗಳೂರು- ಹುಬ್ಬಳಿ ₹600- ₹1000 ₹1700-₹2500
- ಬೆಂಗಳೂರು-ಮಂಗಳೂರು ₹500-₹1000 ₹1550-₹2000
- ಬೆಂಗಳೂರು-ಕಲಬುರುಗಿ ₹900-₹1500 ₹1900-₹2300
- ಬೆಂಗಳೂರು-ಮಡಿಕೇರಿ ₹500-₹600 ₹950-₹1600
- ಬೆಂಗಳೂರು – ಉಡುಪಿ ₹600-₹950 ₹1700-₹2200
- ಬೆಂಗಳೂರು-ಧಾರವಾಡ ₹650-₹800 ₹1400-₹1850
- ಬೆಂಗಳೂರು-ಬೆಳಗಾವಿ ₹500-₹800 ₹1300-₹1800
- ಬೆಂಗಳೂರು – ದಾವಣಗೆರೆ ₹450 -₹600 ₹900-₹1300
- ಬೆಂಗಳೂರು – ಚಿಕ್ಕಮಗಳೂರು ₹550 -₹600 ₹1100-₹1300
- ಬೆಂಗಳೂರು – ಬೀದರ್ ₹850-₹1200 ₹1600-₹2000
- ಬೆಂಗಳೂರು – ರಾಯಚೂರ ₹600 -₹900 ₹1250-₹1600