ಕೊಲೆ ಮಾಡಲೇಬೇಕು ಎಂದು ಗುಂಡಿ ತೋಡಿ ಇಟ್ಟಿದ್ದ ಪಾತಕಿ – ಶಿಕ್ಷಕಿಯನ್ನು ಕ್ರೂರವಾಗಿ ಕೊಂದವನು ಹೇಳಿದ್ದೇನು?

ಕೊಲೆ ಮಾಡಲೇಬೇಕು ಎಂದು ಗುಂಡಿ ತೋಡಿ ಇಟ್ಟಿದ್ದ ಪಾತಕಿ – ಶಿಕ್ಷಕಿಯನ್ನು ಕ್ರೂರವಾಗಿ  ಕೊಂದವನು ಹೇಳಿದ್ದೇನು?

ಮಂಡ್ಯದಲ್ಲಿ ಶಿಕ್ಷಕಿಯನ್ನು ಹತ್ಯೆಗೈದ ಪಾಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದರೆ, ಆತ ಕೊಲೆ ಮಾಡಲು ನಡೆಸಿರುವ ಪ್ಲ್ಯಾನ್ ಕೇಳಿದರೆ ನಿಜಕ್ಕೂ ಬೆಚ್ಚಿಬೀಳ್ತೀರಾ. ಆತ ಕೊಲೆ ಮಾಡಲೇಬೇಕೆಂದು ತೀರ್ಮಾನಿಸಿಕೊಂಡಿದ್ದ. ಕೊಲ್ಲುವ ಮೊದಲೇ ಗುಂಡಿಯನ್ನೂ ತೋಡಿದ್ದ. ನಂತರ ತಾನು ತೋಡಿದ ಗುಂಡಿಗೆ ಆಕೆಯ ಶವವನ್ನು ಮುಚ್ಚಿ ಡ್ರಾಮ ಶುರುಮಾಡಿದ್ದ. ಆತನ ಪಾಪ ಕೃತ್ಯದ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ರೀಲ್ಸ್ ಟೀಚರ್ ಶವ – ಶಿಕ್ಷಕಿಯ ಬರ್ಬರ ಹತ್ಯೆಗೆ ಕಾರಣವೇನು?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾ ಅವರ ಮೃತದೇಹ ಪತ್ತೆಯಾಗಿತ್ತು. ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣ ನಡೆದ 30 ಗಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ನಿತೀಶ್ ಬಂಧಿತ ಆರೋಪಿಯಾಗಿದ್ದಾನೆ. ಡಿವೈಎಸ್ಪಿ ಮುರಳಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ವಿಚಾರಣೆ ವೇಳೆ ದೀಪಿಕಾರನ್ನು ಪ್ಲ್ಯಾನ್ ಮಾಡಿಯೇ ಕೊಲೆ ಮಾಡಿರುವುದು ತಿಳಿದುಬಂದಿದೆ.

ಕೊಲೆಗೂ ಮುನ್ನ ನಿತೀಶ್ ಗುಂಡಿ ತೆಗೆದಿದ್ದನು. ನಂತರ ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿ ಹೂತು ಹಾಕಿದ್ದನು ಎಂದು ತಿಳಿದುಬಂದಿದೆ. ದೀಪಿಕಾರನ್ನು ಕೊಲೆಗೈದ ನಂತರ ಎರಡು ದಿನ ನಿತೇಶ್ ಗ್ರಾಮದಲ್ಲೇ ಇದ್ದನು. ಪ್ರಕರಣದ ದಿಕ್ಕು ತಪ್ಪಿಸಲು ನಾಟಕವಾಡಿದ್ದ ಆರೋಪಿ ನಿತೇಶ್, ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದನು.  ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ ಎಂದು ವಿಚಾರಿಸಿದ್ದನು. ಆ ಮೂಲಕ ತನ್ನ ಮೇಲೆ ಅನುಮಾನ ಬಾರದಂತೆ ನಿತೇಶ್ ನಾಟಕವಾಡಿದ್ದನು. ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದರೆ, ಆಕೆಯ ತಂದೆಯನ್ನ ಅಪ್ಪಾಜಿ ಎಂದು ನಿತೇಶ್ ಕರೆಯುತ್ತಿದ್ದ. ಯಾವಾಗ ದೀಪಿಕಾಳ ಶವ ಪತ್ತೆಯಾಯ್ತೋ ಅಂದಿನಿಂದ ನಾಪತ್ತೆಯಾಗಿದ್ದನು. ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ನಿತೇಶ್‌ನನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಂಧಿಸಿದ್ದಾರೆ. ಸದ್ಯ, ಆರೋಪಿಯನ್ನು ಮೇಲುಕೋಟೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆ ಮಾಡಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾನೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ನಿವಾಸಿಯಾಗಿದ್ದ ದೀಪಿಕಾ ಅವರು ಜನವರಿ 20 ರಂದು ಎಂದಿನಂತೆ ಶಾಲೆಗೆ ಹೋಗಿದ್ದರು. ಆದರೆ, ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಪತಿ ಲೋಕೇಶ್ ದೂರು ನೀಡಿದ್ದರು. ಅಲ್ಲದೆ, ದೀಪಿಕಾಳಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಆಕೆಯ ಡಿಯೋ ಸ್ಕೂಟರ್ ಪತ್ತೆಯಾಗಿತ್ತು. ಈ ಪ್ರದೇಶದ ಸುತ್ತಮುತ್ತ ತೀವ್ರ ಹುಡುಕಾಟ ನಡೆಸಿದಾಗ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ತಹಶೀಲ್ದಾರ್, ಮೃತದೇಹದ ಹೊರತೆಗೆದಾಗ, ಶವ ದೀಪಿಕಾಳದ್ದಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಪರಾರಿಯಾಗಿದ್ದು, ದೀಪಿಕಾಳ ಪತಿ ಲೋಕೇಶ್, ನಿತೀಶ್ ಮೇಲೆ ಶಂಕೆ ವ್ಯಕ್ತಪಸಿಡಿದ್ದರು. ಅಲ್ಲದೆ ದೀಪಿಕಾಳನ್ನ ಯುವಕನೊಬ್ಬ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಇದನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.

Sulekha