ಇಂಡಿಯಾ ಒಕ್ಕೂಟದ ಮೈತ್ರಿ ಠುಸ್ –ಲೋಕ ಸಮರದಲ್ಲಿ ಏಕಾಂಗಿ ಸ್ಪರ್ಧೆ ಎಂದ ಮಮತಾ ಬ್ಯಾನರ್ಜಿ
ಮಹಾಮೈತ್ರಿಯ ಮತ್ತೊಬ್ಬ ಪ್ರಮುಖ ನಾಯಕಿ ಮಮತಾ ಬ್ಯಾನರ್ಜಿ ಮೇಲೂ ಎಲ್ಲರ ಫೋಕಸ್ ನೆಟ್ಟಿರುವಾಗಲೇ ಈಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದುಮ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಮೈತ್ರಿಯಲ್ಲಿ ಮುನಿಸು! – ಕ್ಷೇತ್ರಕ್ಕಾಗಿ ಇಂಡಿಯಾ ಕೂಟದಲ್ಲಿ ಕಚ್ಚಾಟ
ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳಿವೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಟಿಎಂಸಿ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸೋಕೆ ಈಗಾಗ್ಲೇ ತೀರ್ಮಾನ ಮಾಡಿದೆ. ಅಂದ್ರೆ ಇಂಡಿಯಾ ಮೈತ್ರಿಕೂಟದಲ್ಲಿರೋ ಕಾಂಗ್ರೆಸ್ ಮತ್ತು ಎಡಪಕ್ಷಕ್ಕೆ ಯಾವುದೇ ಸೀಟುಬಿಟ್ಟುಕೊಡದೆ ಇರಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ಮಮತಾರದ್ದು ಈಗ ಏನಿದ್ರೂ ಒಂದೇ ಹಠ. ಕಾಂಗ್ರೆಸ್ ಬೇಕಿದ್ರೆ ದೇಶಾದ್ಯಂತ 300 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿ. ಅದಕ್ಕೆ ನಾನು ಕೂಡ ಸಹಕಾರ ನೀಡುವೆ. ಆದ್ರೆ ಎಲ್ಲಿ ಸ್ಥಳೀಯ ಪಕ್ಷಗಳು ಬಲಿಷ್ಠವಾಗಿವೆಯೋ ಅಲ್ಲಿ ಆ ಪಾರ್ಟಿಗಳಿಗೇ ಸ್ಪರ್ಧೆಗೆ ಅವಕಾಶ ನೀಡಬೇಕು. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಬಲಿಷ್ಠವಾಗಿರೋದೆ ನಾವು. ಇಲ್ಲಿ ಬಿಜೆಪಿಯನ್ನ ಎದುರಿಸೋಕೆ ನಮಗಷ್ಟೇ ಸಾಧ್ಯ. ಹೀಗಾಗಿ ಯಾರಿಗೂ ಸೀಟು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಅನ್ನೋ ಧಾಟಿಯಲ್ಲಿ ಮಮತಾ ಬ್ಯಾನರ್ಜಿ ಹೇಳಿಕೆಗಳನ್ನ ನೀಡ್ತಾ ಇದ್ದಾರೆ. ಇದ್ರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನ ಅವಕಾಶವಾದಿ ರಾಜಕಾರಣಿ ಅಂತಾ ಟೀಕಿಸಿದ್ದಾರೆ. ಅಷ್ಟೇ ಅಲ್ಲ, ಮಮತಾ ಬ್ಯಾನರ್ಜಿಯ ಸಹಕಾರವಿಲ್ಲದೆಯೇ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಲಿದೆ. ಮಮತಾರ ನೆರವು ನಮಗೆ ಬೇಕಾಗಿಯೇ ಇಲ್ಲ. ಆದ್ರೆ ಕಾಂಗ್ರೆಸ್ನ ಬೆಂಬಲದೊಂದಿಗೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೇರಿದ್ದಾರೆ ಅನ್ನೋದನ್ನ ಮರೀಬಾರ್ದು ಅಂತಾ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಅಂತೂ ಲೋಕಸಭೆ ಚುನಾವಣೆ ಸೀಟು ಹಂಚಿಕೆಗೆ ಸಂಬಂಧಿಸಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿರೋದು ಇಲ್ಲಿ ಸ್ಪಷ್ಟವಾಗಿದೆ.
ಇದಿಷ್ಟೇ ಅಲ್ಲ, ಮಹಾಮೈತ್ರಿಯೊಳಗಿರೋ ಪಶ್ಚಿಮ ಬಂಗಾಳದ ಇನ್ನೊಂದು ಪಕ್ಷ ಸಿಪಿಎಂ ವಿರುದ್ಧವೂ ಮಮತಾ ಬ್ಯಾನರ್ಜಿ ರೊಚ್ಚಿಗೆದ್ದಿದ್ದಾರೆ. ಮೈತ್ರಿಕೂಟಕ್ಕೆ ಇಂಡಿಯಾ ಅನ್ನೋ ಹೆಸರಿಟ್ಟಿದ್ದೇ ನಾವು. ಆದ್ರೆ ಮೈತ್ರಿಕೂಟದ ಮೀಟಿಂಗ್ ವೇಳೆ ಸಿಪಿಎಂ ಇಡೀ ಸಭೆಯನ್ನ ಕಂಟ್ರೋಲ್ ಮಾಡುತ್ತೆ. ದಶಕಗಳಿಂದ ಸಿಪಿಂ ವಿರುದ್ಧ ನಾವು ಹೋರಾಡ್ತಾ ಬಂದಿದ್ದೇವೆ. ಅವರ ಸಲಹೆಯನ್ನ ನಾವು ಸ್ವೀಕರಿಸಬೇಕಾ? ಅದು ಸಾಧ್ಯವೇ ಇಲ್ಲ ಅಂತಾ ಮಮತಾ ಬ್ಯಾನರ್ಜಿ ನೇರಾನೇರವಾಗಿಯೇ ಹೇಳಿದ್ದಾರೆ. ಇಲ್ಲಿ ಮಮತಾ ಬ್ಯಾನರ್ಜಿಯ ಕೆಲವು ಪಾಯಿಂಟ್ಗಳನ್ನ ಒಪ್ಪಿಕೊಳ್ಳಲೇಬೇಕಾಗುತ್ತೆ. ಎಲ್ಲಿ ಸ್ಥಳೀಯ ಪಕ್ಷಗಳು ಬಲಿಷ್ಠವಾಗಿವೆಯೋ ಅಲ್ಲಿ ಬಿಜೆಪಿ ವಿರುದ್ಧ ಹೋರಾಡೋಕೆ ರಾಷ್ಟ್ರೀಯ ಪಕ್ಷಗಳು ಮುಂದಾಗಬಾರದು ಅನ್ನೋದು. ಅದ್ರಲ್ಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನ ಎದುರಿಸೋಕೆ ಮಮತಾ ಬ್ಯಾನರ್ಜಿಗಿಂತ ಸ್ಟ್ರಾಂಗ್ ಲೀಡರ್ ಮತ್ತೊಬ್ಬರಿಲ್ಲ. ವಿಧಾನಸಭೆ ಚುನಾವಣೆಯಲ್ಲಂತೂ ಮಮತಾ ಏಕಾಂಗಿಯೇ ಕೇಸರಿ ಪಡೆಯನ್ನ ಮಕಾಡೆ ಮಲಗಿಸಿದ್ರು. ಹೀಗಿರೋವಾಗ ನಿಜವಾಗಿಯೂ ಲೋಕಸಭೆ ಚುನಾವಣೆಯನ್ನ ಮೋದಿಯನ್ನ ತಡೀಬೇಕು ಅಂತಿದ್ರೆ ಕಾಂಗ್ರೆಸ್ನಂಥಾ ರಾಷ್ಟ್ರೀಯ ಪಕ್ಷ ಕೆಲ ತ್ಯಾಗಕ್ಕೆ ಸಿದ್ಧವಾಗಿರಲೇಬೇಕಾಗುತ್ತೆ. ಸ್ವಪ್ರತಿಷ್ಠೆಯನ್ನ ಬದಿಗಿಟ್ಟು ಸ್ಥಳೀಯ ಪಕ್ಷಗಳ ಜೊತೆಗೆ ಹೊಂದಿಕೊಳ್ಳಲೇಬೇಕಾಗುತ್ತೆ. ಇಲ್ಲವಾದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಅರ್ಥವೇ ಇರೋದಿಲ್ಲ. ಮಹಾಮೈತ್ರಿಯ ಮೂಲ ಉದ್ದೇಶವನ್ನ ಅವರೇ ಕೈಯ್ಯಾರೆ ಕೊಂದಾಂತಾಗುತ್ತೆ. ಇನ್ನೇನು ಚುನಾವಣೆಗೆ ಬೆರಳೆಣಿಯ ವಾರಗಳಷ್ಟೇ ಬಾಕಿ ಇರೋದು. ಇದು ಅತ್ಯಂತ ಕ್ರೂಶಿಯಲ್ ಟೈಮ್. ರಾಷ್ಟ್ರ ರಾಜಕೀಯದಲ್ಲಿ, ಜನರ ಮನಸ್ಸಲ್ಲಿ ಟ್ರೆಂಡ್ ಸೆಟ್ ಮಾಡಬೇಕಿರೋದೆ ಈಗ. ಮೋದಿ ಕೈಯಲ್ಲಿ ಈಗಾಗ್ಲೇ ರಾಮಬಾಣವಿದೆ. ಹೀಗಾಗಿ ಬಿಜೆಪಿಯನ್ನ ಎದುರಿಸಲೇಬೇಕು ಅನ್ನೋದಾದ್ರೆ ಇಂಡಿಯಾ ಮೈತ್ರಿಕೂಟದ ನಾಯಕರು ಸ್ವಹಿತಾಸಕ್ತಿ ಸೈಡಿಗಿಟ್ಟು ಒಗ್ಗಟ್ಟಾಗಲೇಬೇಕಿದೆ. ಆದಷ್ಟು ಬೇಗ ಸೀಟು ಹಂಚಿಕೆ ಕುರಿತಾಗಿ ಒಮ್ಮತದ ನಿರ್ಧಾರಕ್ಕೆ ಬಂದು, ಒಟ್ಟಾಗಿ ಅಖಾಡಕ್ಕಿಳಿದ್ರಷ್ಟೇ ಬಿಜೆಪಿಗೆ ಸೆಡ್ಡು ಹೊಡೆಯೋಕೆ ಸಾಧ್ಯ ಅನ್ನೋದು ಇಲ್ಲಿರುವ ರಿಯಾಲಿಟಿ. ಅದು ಬಿಟ್ಟು ಚುನಾವಣೆ ಹತ್ತಿರವಾಗ್ತಿರೋವಾಗಲೇ ಸೀಟು ಹಂಚಿಕೆಯನ್ನೇ ಇನ್ನಷ್ಟು ಜಟಿಲ ಮಾಡಿಕೊಂಡ್ರೆ, ಈ ರೀತಿ ಓಪನ್ ಆಗಿಯೇ ಕಿತ್ತಾಡ್ತಿದ್ರೆ ಕೇಸರಿ ಕಲಿಗಳು ನುಂಗಿ ನೀರು ಕುಡೀತಾರೆ ಅಷ್ಟೇ. ಅಂತೂ ಇಂಡಿಯಾ ಮೈತ್ರಿಕೂಟದ ಭವಿಷ್ಯ ಈಗ ಅವರ ಕೈಯಲ್ಲೇ ಇದೆ. ಮೈತ್ರಿಯಲ್ಲಿ ಎಲ್ಲವೂ ಸರಿಯಾದ್ರೆ, ತಮ್ಮ ಉದ್ದೇಶವನ್ನ ಜನರಿಗೆ ತಲುಪಿಸುವಲ್ಲಿ, ಜನಮನಗೆಲ್ಲುವಲ್ಲಿ ಯಶಸ್ವಿಯಾದ್ರೆ ವೋಟ್ ಕೂಡ ಮೈತ್ರಿಕೂಟದ ಬುಟ್ಟಿಗೆ ಬೀಳಬಹುದು. ಅಂತೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಏನಾಗಬಹುದು ಅನ್ನೋ ಬಗ್ಗೆ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಫೈನಲ್ ಆದಾಗಲೇ ಒಂದು ಹಿಂಟ್ ಸಿಗೋದು ಗ್ಯಾರಂಟಿ. ಹಾಗಿಗೆ ಸದ್ಯಕ್ಕೆ ಲೋಕಸಭೆ ಚುನಾವಣೆ, ರಾಷ್ಟ್ರ ರಾಜಕೀಯದ ಭವಿಷ್ಯ ಇಂಡಿಯಾ ಮೈತ್ರಿಕೂಟದ ಬಳಿಯೇ ಇದೆ. ಮೈತ್ರಿಕೂಟಕ್ಕೆ ಪಾಯಿಂಟ್ ಬರುವಂತೆ ಗೋಲ್ ಹೊಡೀತಾರಾ, ಇಲ್ಲಾ ಬಿಜೆಪಿಗೆ ಪಾಯಿಂಟ್ ಸಿಗುವಂತೆ ಸೆಲ್ಫ್ ಗೋಲ್ ಹೊಡೀತಾರಾ ಅನ್ನೋದನ್ನ ನೋಡ್ಬೇಕಿದೆ.