ಬಾಲರಾಮನ ಕಾಣಲು ಜನವೋ ಜನ! – ದೇಗುಲಕ್ಕೆ ಭೇಟಿ ಮಾಡುವ ಮುನ್ನ ಈ ಮಾಹಿತಿ ನಿಮಗೆ ಗೊತ್ತಿರಲಿ

ಬಾಲರಾಮನ ಕಾಣಲು ಜನವೋ ಜನ! – ದೇಗುಲಕ್ಕೆ ಭೇಟಿ ಮಾಡುವ ಮುನ್ನ ಈ ಮಾಹಿತಿ ನಿಮಗೆ ಗೊತ್ತಿರಲಿ

ಶತಮಾನಗಳ ಕನಸು, ಕೋಟ್ಯಂತರ ಭಾರತೀಯರ ಕನವರಿಕೆ, ಸಾಧು ಸಂತರ ಮಹಾತಪಸ್ಸಿನಂತೆ ರಾಮಮಂದಿರ ಲೋಕಾರ್ಪಣೆಗೊಂಡಿದೆ. ಜಗತ್ತೇ ಬೆರಗು ಗಣ್ಣಿನಿಂದ ನೋಡುವಂತೆ ಅಯೋಧ್ಯೆಯಲ್ಲಿ ರಾಮಲಲ್ಲಾ ಜನ್ಮ ತಳೆದಿದ್ದಾನೆ. ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಅದ್ಧೂರಿಯಾಗಿ ನೆರವೇರಿದೆ. ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ರಾಮಮಂದಿರ ಮುಕ್ತಗೊಂಡಿದೆ. ಆದ್ರೆ ಆದಿಪುರುಷನಿಗಾಗಿ ಕಾಯ್ತಿದ್ದ ಭಕ್ತರು ಸುನಾಮಿಯಂತೆ ಅಯೋಧ್ಯೆಗೆ ನುಗ್ಗಿದ್ದಾರೆ. ಪರಿಣಾಮ ಮೊದಲ ದಿನವೇ ದೇಗುಲದ ಗೇಟ್ ಬಂದ್ ಆಗಿದೆ. ಅಷ್ಟಕ್ಕೂ ರಾಮಮಂದಿರದಲ್ಲಿ ಮೊದಲ ದಿನವೇ ಇಂಥಾ ಸಮಸ್ಯೆ ಸೃಷ್ಟಿಯಾಗಿದ್ದೇಕೆ..? ಭಕ್ತರು ತಿಳಿದುಕೊಳ್ಳಬೇಕಾಗಿರೋ ಅಂಶಗಳೇನು..? ಯಾವ ಸಮಯದಲ್ಲಿ ದೇಗುಲ ಓಪನ್ ಇರುತ್ತೆ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮರ್ಯದಾ ಪುರುಷೋತ್ತಮನನ್ನು ಕಣ್ತುಂಬಿಕೊಳ್ಳಲು 2ನೇ ದಿನವೂ ಸೇರಿದ ಭಕ್ತಸಾಗರ – ರಾಮಮಂದಿರದಲ್ಲಿ ಹೈ ಸೆಕ್ಯೂರಿಟಿ

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಳಿಕ ಮಂಗಳವಾರ ಸಾರ್ವಜನಿಕರಿಗೆ ಮೊದಲ ಬಾರಿಗೆ ಬಾಲರಾಮನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೊದಲ ದಿನವೇ ಅಯೋಧ್ಯೆ ರಾಮನ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬಂದಿದೆ. ಕೊರೆವ ಚಳಿಯನ್ನೂ ಲೆಕ್ಕಿಸದೆ ಮುಂಜಾನೆ 3 ಗಂಟೆಯಿಂದಲೇ ಜನ ಕ್ಯೂನಲ್ಲಿ ನಿಂತಿದ್ರು.              ರಾಮ ಮಂದಿರದ ಬಾಗಿಲು ಓಪನ್ ಆಗುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿದೆ.  ಪರಿಣಾಮ ಮೊದಲ ದಿನವೇ ರಾಮಮಂದಿರದ ಗೇಟ್ ಬಂದ್ ಮಾಡಲಾಗಿತ್ತು.

  • ರಾಮಲಲ್ಲಾ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸೋಮವಾರ ರಾತ್ರಿಯಿಂದಲೇ ಕ್ಯೂ
  • ರಾಮಪಥದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು, ಕ್ಷಣಕ್ಷಣಕ್ಕೂ ಭಕ್ತರು ಏರಿಕೆ
  • ಕೆಲ ಐಷಾರಾಮಿ ಕೊಠಡಿಗಳ ಬಾಡಿಗೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿದೆ

ರಾಮಲಲ್ಲಾ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸೋಮವಾರ ತಡರಾತ್ರಿಯಿಂದಲೇ ಭಕ್ತರು ರಾಮಮಂದಿರದ ಸುತ್ತ ಮುತ್ತ ಜಮಾಯಿಸಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಾರಂಭಿಸಿದರು. ನೆರೆದಿದ್ದ ಜನರು ದ್ವಾರದ ಮುಂದೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ. ಜೊತೆಗೆ ಅಯೋಧ್ಯೆಯ ಸ್ಥಳೀಯ ನಿವಾಸಿಗಳು ಕೂಡ ಬಾಲರಾಮನ ದರ್ಶನ ಮತ್ತು ಪೂಜೆಗಾಗಿ ಆಗಮಿಸುತ್ತಿದ್ದಾರೆ. ರಾಮಪಥದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ನೆರೆದಿದ್ದಾರೆ. ಕ್ಷಣಕ್ಷಣಕ್ಕೂ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್‌ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರ ಉದ್ಘಾಟನೆಗೆ ಸುಮಾರು 2 ವಾರ ಇರುವಾಗಲೇ ಅಯೋಧ್ಯೆಯಲ್ಲಿ ಹೋಟೆಲ್ ಬುಕಿಂಗ್ 80%ರಷ್ಟು ಹೆಚ್ಚಾಗಿತ್ತು. ಹೋಟೆಲ್‌ನಲ್ಲಿ ಒಂದು ದಿನದ ಕೋಣೆಯ ಬೆಲೆ ಸಾರ್ವಕಾಲಿಕ ಗರಿಷ್ಠ ದರವನ್ನು ತಲುಪಿದೆ. ಅದು ಈಗ ಐದು ಪಟ್ಟು ಹೆಚ್ಚಾಗಿದೆ. ಕೆಲ ಐಷಾರಾಮಿ ಕೊಠಡಿಗಳ ಬಾಡಿಗೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಅಯೋಧ್ಯೆ ರಾಮ ಮಂದಿರದ ಒಳಗೆ ಭಕ್ತರನ್ನು ಬಿಡುವಾಗ ಸರದಿಯಲ್ಲಿ ಬಿಡಲಾಗುತ್ತಿದ್ದು, ಶಿಸ್ತು, ಸಂಯಮ ಪಾಲನೆಗೆ ಮನವಿ ಮಾಡಲಾಗುತ್ತಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಗಿ ನೂಕು ನುಗ್ಗಲು ಉಂಟಾಗಿತ್ತು. ಹೀಗಾಗಿ ಮಧ್ಯಾಹ್ನ 2 ಗಂಟೆವರೆಗೆ ದೇಗುಲದ ಭೇಟಿಗೆ ಜನರಿಗೆ ನಿಷೇಧ ಹೇರಲಾಗಿತ್ತು. ನೀವೇನಾದ್ರೂ ದೇಗುಲಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಕೆಲವೊಂದು ಮಾಹಿತಿಗಳನ್ನ ತಿಳಿದುಕೊಳ್ಳಬೇಕಾಗುತ್ತೆ.

  • ರಾಮಮಂದಿರ ದರ್ಶನಕ್ಕಾಗಿ ಆಫ್‌ ಲೈನ್ ಮತ್ತು ಆನ್‌ ಲೈನ್ ಟಿಕೆಟ್
  • srjbtkshetra.org ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು
  • ಚಾಲನಾ ಪರವಾನಗಿ, ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಪಾಸ್‌ ಪೋರ್ಟ್
  • ಬುಕಿಂಗ್ ಪ್ರಕ್ರಿಯೆಯಲ್ಲಿ ಮಾನ್ಯವಾದ ಸರ್ಕಾರ ನೀಡಿದ ಐಡಿಯನ್ನು ಒದಗಿಸಬೇಕು
  • ಆಫ್‌ಲೈನ್ ಟಿಕೆಟ್‌, ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಕೇಂದ್ರದ ಬಾಗಿಲು ಓಪನ್
  • ಆರತಿ ಸೆಷನ್‌ ಗಳಲ್ಲಿ ಪ್ರವೇಶಕ್ಕೆ ಅನುಮತಿ, 30 ಜನ ಮಾತ್ರ ಪಾಲ್ಗೊಳ್ಳಲು ಮಿತಿ

ರಾಮಮಂದಿರ ದರ್ಶನಕ್ಕಾಗಿ ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ನೀವು ಟಿಕೆಟ್ ಕಾಯ್ದಿರಿಸಬಹುದು.  ಆನ್‌ಲೈನ್ ಬುಕಿಂಗ್‌ಗಾಗಿ ಭಕ್ತರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ srjbtkshetra.org ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಒಬ್ಬರು ತಮ್ಮ ಆಯ್ಕೆಯ ದಿನಾಂಕ ಮತ್ತು ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಬಹುದು. ಚಾಲನಾ ಪರವಾನಗಿ, ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಸೇರಿದಂತೆ ಬುಕಿಂಗ್ ಪ್ರಕ್ರಿಯೆಯಲ್ಲಿ ಮಾನ್ಯವಾದ ಸರ್ಕಾರ ನೀಡಿದ ಐಡಿಯನ್ನು ಒದಗಿಸಬೇಕು. ಹಾಗೇ ಪ್ರವಾಸಿಗರು ದೇವಾಲಯದ ಸಮೀಪದಲ್ಲಿರುವ ಅಯೋಧ್ಯೆ ರಾಮಮಂದಿರ ವಿಸಿಟರ್ ಸೆಂಟರ್‌ ನಿಂದ ಆಫ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಕೇಂದ್ರದ ಸಮಯವು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಇರುತ್ತದೆ. ಮಾನ್ಯ ಬುಕಿಂಗ್ ಮತ್ತು ಟಿಕೆಟ್‌ಗಳನ್ನು ಹೊಂದಿರುವ ಜನರಿಗೆ ಮಾತ್ರ ಆರತಿ ಸೆಷನ್‌ಗಳಲ್ಲಿ ಪ್ರವೇಶವನ್ನು ಅನುಮತಿಸಲಾಗುವುದು. ಇದಕ್ಕಾಗಿ 30 ಜನ ಮಾತ್ರ ಪಾಲ್ಗೊಳ್ಳಲು ಕಟ್ಟುನಿಟ್ಟಾದ ಮಿತಿ ಇರುತ್ತದೆ. ಇನ್ನು ದೇವಸ್ಥಾನವು ಪ್ರತಿದಿನ ಬೆಳಗ್ಗೆ 7 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 7 ರವರೆಗೆ ದರ್ಶನಕ್ಕೆ ತೆರೆದಿರುತ್ತದೆ. ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ಮಧ್ಯಾಹ್ನ 12.00 ಗಂಟೆಗೆ ಭೋಗ್ ಆರತಿ ಮತ್ತು ಸಂಜೆ 7.30ಕ್ಕೆ ಸಂಧ್ಯಾ ಆರತಿ ನಡೆಯುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆರತಿ ಅವಧಿಗೆ ಹಾಜರಾಗಲು ಪ್ರತ್ಯೇಕ ಪಾಸ್ ಅಗತ್ಯವಿರೋದಿಲ್ಲ. ಇದಿಷ್ಟು ರಾಮಮಂದಿರ ದರ್ಶನದ ಬಗೆಗಿನ ಮಾಹಿತಿ.

ಈಗಾಗಲೇ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಸುಮಾರು 5 ಲಕ್ಷ ಜನ ಭೇಟಿ ನೀಡಿದ್ದರು.

ಆದ್ರೆ ನೀವೇನಾದ್ರೂ ಅಯೋಧ್ಯೆ ಟ್ರಿಪ್ ಪ್ಲ್ಯಾನ್ ಮಾಡ್ತಿದ್ರೆ ಸ್ವಲ್ಪ ಹೋಲ್ಡ್​ನಲ್ಲಿ ಇಡಿ. ಯಾಕಂದ್ರೆ ಈಗ ಭಕ್ತರ ಸಂಖ್ಯೆ ವಿಪರೀತವಾಗಿದೆ. ನೂಕುನುಗ್ಗಲು ಉಂಟಾಗ್ತಿದೆ. ಹೀಗಾಗಿ ಭಕ್ತರ ಸಂಖ್ಯೆ ಕಡಿಮೆಯಾದ ಮೇಲೆ ಅಯೋಧ್ಯೆಯತ್ತ ಪ್ರಯಾಣ ಬೆಳೆಸೋದು ಒಳ್ಳೆಯದು.

Sulekha