ರಾಮಮಂದಿರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುತ್ತಾ? -ಮೋದಿಗೆ ಎಷ್ಟು ಸೀಟು ಸಿಗಬಹುದು?

500 ವರ್ಷಗಳ ಕನಸು ನನಸಾಗಿದೆ.. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿದೆ.. ಗರ್ಭಗುಡಿಯಲ್ಲಿ ರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಇನ್ಮುಂದೆ ನಿತ್ಯವೂ ಪೂಜೆ ನಡೆಯಲಿದೆ..ಕೋಟ್ಯಂತರ ಭಕ್ತರು ಮರ್ಯಾದಾ ಪುರುಷೋತ್ತಮನ ದರ್ಶನ ಪಡೆಯಲಿದ್ದಾರೆ. 1990ರಲ್ಲಿ ಅಡ್ವಾಣಿ ಜೊತೆಗೇ ರಥಯಾತ್ರೆಯಲ್ಲಿ ದೇಶದುದ್ದಕ್ಕೂ ಓಡಾಡಿದ್ದ ಮೋದಿಯೇ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದ್ರು. ದಶಕಗಳ ಹಿಂದೆ ಮೋದಿ ಅಂದು ಕೊಂಡಿದ್ದನ್ನ ಈಗ ಈಡೇರಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಅನ್ನೋ ಪಕ್ಷ ಅರಳಿದ್ದೇ ಈ ಮಂದಿರದ ವಿಚಾರದಲ್ಲಿ ಅಂದ್ರೆ ತಪ್ಪಾಗೋದಿಲ್ಲ. ಇಷ್ಟು ವರ್ಷ ರಾಮಮಂದಿರ ನಿರ್ಮಾಣ ಅನ್ನೋದು ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. ಪ್ರಚಾರದ ಅಂಶವಾಗಿತ್ತು. ರಾಮಮಂದಿರ ವಿಚಾರದಲ್ಲಿ ಭಾವನಾತ್ಮಕವಾಗಿ ಹಿಂದೂಗಳ ಮತಗಳನ್ನ ಬಿಜೆಪಿ ಸೆಳೆದಿತ್ತು. ಆದ್ರೀಗ ಭವ್ಯ ಮಂದಿರ ತಲೆ ಎತ್ತಿ ನಿಂತಿದೆ. ರಾಮಮಂದಿರದ ಕ್ರೆಡಿಟ್ನ್ನ ಕೇಸರಿ ಕಲಿಗಳು ತೆಗೆದುಕೊಳ್ತಿದ್ದಾರೆ. ಹಾಗಿದ್ರೆ ರಾಮಮಂದಿರ ನಿರ್ಮಾಣದಿಂದ ಈ ವರ್ಷ ನಡೆಯೋ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುತ್ತಾ? ಎಷ್ಟರ ಮಟ್ಟಿಗೆ ಲಾಭವಾಗಬಹುದು? ರಾಮಮಂದಿರ ನಿರ್ಮಾಣ ವಿಚಾರ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಮೋದಿಗೆ ಎಷ್ಟು ಸೀಟು ತಂದು ಕೊಡಬಹುದು? ರಾಮಮಂದಿರವನ್ನ ಮತವಾಗಿ ಕನ್ವರ್ಟ್ ಮಾಡೋಕೆ ಬಿಜೆಪಿಯ ಪ್ಲ್ಯಾನ್ ಏನು? ಇವೆಲ್ಲದರ ಬಗ್ಗೆಯೂ ವಿವರಣೆ ಇಲ್ಲಿದೆ.
ಇದನ್ನೂ ಓದಿ : ಕೌಸಲ್ಯಪುತ್ರನಿಗೆ ವಜ್ರ ವೈ ಅಲಂಕಾರ! – ರಾಮಲಲ್ಲಾ ಧರಿಸಿದ ಪ್ರತೀ ಆಭರಣಗಳ ಮೌಲ್ಯ ಎಷ್ಟು ಗೊತ್ತಾ?
ಭವ್ಯ ರಾಮಮಂದಿರ ಲೋಕಾರ್ಪಣೆಯಾಗಿದೆ.. ಇತ್ತ ಮಹಾ ಚುನಾವಣೆಗೆ ದಿನಗಣನೆ ಶುರುವಾಗಿದೆ.. ಎಲ್ಲಾ ರಾಜಕೀಯ ಪಕ್ಷಗಳ ಫೋಕಸ್ ಇನ್ಮುಂದೆ ಎಲೆಕ್ಷನ್..ಚುನಾವಣೆ ಗೆಲ್ಲೋದಷ್ಟೇ ವನ್ ಪಾಯಿಂಟ್ ಅಜೆಂಡಾ. ಅದ್ರಲ್ಲೂ ಬಿಜೆಪಿ, ಮೋದಿಗಂತೂ ಈ ಬಾರಿಯ ಚುನಾವಣೆ ಅತ್ಯಂತ ಪ್ರತಿಷ್ಠೆಯ ವಿಚಾರ. ರಾಮಮಂದಿರ ಕಟ್ಟಿಯಾಗಿದೆ. ಆದ್ರೆ ರಾಮರಾಜ್ಯ ನಿರ್ಮಾಣ ಮಾಡ್ತೇವೆ ಅನ್ನೋ ಭರವಸೆಯನ್ನ ಈಡೇರಿಸಬೇಕು ಅಂದ್ರೆ ಮತ್ತೊಮ್ಮೆ ಅಧಿಕಾರಕ್ಕೇರಲೇಬೇಕಲ್ವಾ? ಹೀಗಾಗಿ ಚುನಾವಣೆ ಗೆಲ್ಲಲೇಬೇಕು. ಹಾಗಿದ್ರೆ ಈ ರಾಮಮಂದಿರ ನಿರ್ಮಾಣ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟರ ಮಟ್ಟಿಗೆ ಸಹಾಯ ಆಗಬಹುದು ಅನ್ನೋದು ಈಗಿರುವಂಥಾ ಪ್ರಶ್ನೆ.
ರಾಮಮಂದಿರ ವಿಚಾರದಲ್ಲಿ, ಮತ್ತೊಮ್ಮೆ ಹಿಂದೂಗಳ ಮತ ಸೆಳೆಯೋಕೆ ಬಿಜೆಪಿಗೆ ಇದು ಕಟ್ಟಕಡೆಯ ಅವಕಾಶ ಅಂದ್ರೂ ತಪ್ಪಾಗೋದಿಲ್ಲ. ಹೀಗಾಗಿ ಮಂದಿರ ನಿರ್ಮಾಣವನ್ನ ಕಂಪ್ಲೀಟ್ ಆಗಿ ಎನ್ಕ್ಯಾಶ್ ಮಾಡೋಕೆ ಬಿಜೆಪಿ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡಲಿದೆ. ಅದೇ ರೀತಿ ಚುನಾವಣೆಯಲ್ಲಿ ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗೋದ್ರಲ್ಲೂ ಯಾವುದೇ ಅನುಮಾನ ಇಲ್ಲ. ಈ ಹಿಂದಿನ ಸಿಎಸ್ಡಿಎಸ್ ಸರ್ವೆ ರಿಪೋರ್ಟ್ ಪ್ರಕಾರ, ಹಿಂದುತ್ವವಾದಿಗಳಿಂದಳೇ ಹೆಚ್ಚಿನ ವೋಟ್ ಸಿಗ್ತಾ ಇತ್ತು. ಅಂದ್ರೆ ಕಾಮನ್ ಹಿಂದೂಗಳಿಗಿಂತ ಹೆಚ್ಚಾಗಿ ಖಟ್ಟರ್ ಹಿಂದುತ್ವವಾದಿಗಳ ವೋಟ್ ಬಿಜೆಪಿಗೆ ಹೆಚ್ಚಿತ್ತು. ಆದ್ರೀಗ ರಾಮಮಂದಿರದ ನಿರ್ಮಾಣದಿಂದಾಗಿ ಹಿಂದೂಗಳಲ್ಲಿ ಧಾರ್ಮಿಕ ಭಾವನೆ ಇನ್ನಷ್ಟು ಗಟ್ಟಿಯಾಗ್ತಿದೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತವಾಗಿ ಕನ್ವರ್ಟ್ ಆಗುವ ಸಾಧ್ಯತೆ ಕೂಡ ಹೆಚ್ಚಿದೆ. ಈಗಾಗ್ಲೇ ಬಿಜೆಪಿ ಮತ್ತು ಆರ್ಎಸ್ಎಸ್ ರಾಮಮಂದಿರ ಲೋಕಾರ್ಪಣೆ ಬಳಿಕ ಮುಂದೇನು ಮಾಡಬೇಕು. ಚುನಾವಣಾ ಪ್ರಚಾರದ ವೇಳೆ ಇದನ್ನ ಬಳಸಿಕೊಳ್ಳಬೇಕು ಅನ್ನೋ ಬಗ್ಗೆ ಪ್ಲ್ಯಾನ್ ಮಾಡಿಕೊಂಡಾಗಿದೆ. ಹಿಂದೂಗಳ ಮ್ಯಾಕ್ಸಿಮಮ್ ವೋಟ್ ಬಿಜೆಪಿಗೆ ಬೀಳುವಂತೆ ಮಾಡೋಕೆ ಕೇಸರಿ ಪಡೆ ರಣತಂತ್ರ ಹೆಣೆದಿದೆ. ಈ ಸಂದರ್ಭದಲ್ಲಿ ಸಿಎಸ್ಡಿಎಸ್ ಸರ್ವೆ ರಿಪೋರ್ಟ್ನ ಡೇಟಾಗಳನ್ನ ನಿಮ್ಮ ಮುಂದೆ ಇಡ್ತೀನಿ. ಸರ್ವೆ ಪ್ರಕಾರ ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಹಿಂದೂಗಳ ವೋಟ್ ಎಷ್ಟು ಬಂದಿತ್ತು? ಇಲ್ಲಿರೋ ಲೆಕ್ಕಾಚಾರವೇನು ಅನ್ನೋದು ಇಂಪಾರ್ಟೆಂಟ್ ಆಗುತ್ತೆ.
2009ರ ಲೋಕಸಭೆ ಚುನಾವಣಾ ಸರ್ವೆ ವರದಿ ಪ್ರಕಾರ ನಿತ್ಯವೂ ದೇವಾಲಯಕ್ಕೆ ಭೇಟಿ ನೀಡ್ತಿದ್ದ ಹಿಂದೂಗಳ ಪೈಕಿ ಶೇಕಡಾ 28 ರಷ್ಟು ಮಂದಿ ಬಿಜೆಪಿಗೆ ವೋಟ್ ಹಾಕಿದ್ರು. 2014ರ ಲೋಕಸಭೆ ಚುನಾವಣೆಯಲ್ಲಿ ನಿತ್ಯವೂ ದೇವಾಲಯಕ್ಕೆ ತೆರಳುತ್ತಿದ್ದ ಹಿಂದೂಗಳ ಪೈಕಿ ಶೇಕಡಾ 45 ಮಂದಿ ಬಿಜೆಪಿಗೆ ಮತ ಹಾಕಿದ್ರು. 2019ರ ಲೋಕಸಭೆ ಚುನಾವಣೆಯಲ್ಲಿ ಇದು 51%ಗೆ ಏರಿಕೆಯಾಗಿದೆ. 2009ರಲ್ಲಿ 28%, 2014ರಲ್ಲಿ 45%, 2019ರಲ್ಲಿ 51%. ಇದು ನಿತ್ಯವೂ ದೇವಾಲಯಕ್ಕೆ ತೆರಳುತ್ತಿದ್ದವರು ಬಿಜೆಪಿಗೆ ಹಾಕಿದ ವೋಟಿಂಗ್ ಪರ್ಸೆಂಟೇಜ್. ಅದೇ ಯಾವಾಗಲೋ ಒಮ್ಮೆ ದೇವಾಲಯಕ್ಕೆ ತೆರಳುತ್ತಿದ್ದ ಹಿಂದೂಗಳಲ್ಲಿ 39%ನಷ್ಟು ಮಂದಿ ಬಿಜೆಪಿಗೆ ವೋಟ್ ಮಾಡಿದ್ರು. ಅತೀ ಹೆಚ್ಚು ಧಾರ್ಮಿಕರಾಗಿರೋ ಹಿಂದೂಗಳ ಪೈಕಿ ಶೇಕಡಾ 53ರಷ್ಟು ಮಂದಿ 2019ರಲ್ಲಿ ಬಿಜೆಪಿಗೆ ವೋಟ್ ಮಾಡಿದ್ರು. ಶೇಕಡಾ 10ರಷ್ಟು ಮಂದಿ ಕಾಂಗ್ರೆಸ್ಗೆ ವೋಟ್ ಹಾಕಿದ್ರು. ಹೀಗಾಗಿ ರಾಮಮಂದಿರ ಉದ್ಘಾಟನೆಯಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇನ್ನಷ್ಟು ಹಿಂದೂಗಳ ಮತ ಸಿಗಬಹುದು. ಹಾಗೆಯೇ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಂದು ದೇಶಾದ್ಯಂತ ದಾನ-ಧರ್ಮದ ಕಾರ್ಯಗಳು ನಡೆದಿವೆ. ಭಜನೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಹಿಂದೂಗಳ ಭಾವನೆ ಇನ್ನಷ್ಟು ಗಟ್ಟಿಯಾಗಬಹುದು. ರಾಮಮಂದಿರಕ್ಕೆ ತೆರಳೋ ಭಕ್ತರ ಸಂಖ್ಯೆ ಹೆಚ್ಚಾದಷ್ಟೂ ಬಿಜೆಪಿಗೆ ಅಡ್ವಾಂಟೇಜ್ ಆಗಬಹುದು ಅನ್ನೋ ಲೆಕ್ಕಾಚಾರದಲ್ಲಿ ಕೇಸರಿ ಕಲಿಗಳಿದ್ದಾರೆ.
ಹಾಗಂತಾ ದೇವಸ್ಥಾನಕ್ಕೆ ಹೋಗದವರು, ಧಾರ್ಮಿಕರಲ್ಲದವರು ಬಿಜೆಪಿಗೆ ವೋಟ್ ಮಾಡಲ್ಲ ಅಂತೇನಲ್ಲ. ಅಷ್ಟೊಂದು ಧಾರ್ಮಿಕರಲ್ಲದ ಹಿಂದೂಗಳ ಪೈಕಿ ಶೇಕಡಾ 37ರಷ್ಟು ಮಂದಿ 2019ರಲ್ಲಿ ಬಿಜೆಪಿಗೇ ವೋಟ್ ಮಾಡಿದ್ರು. ಶೇಕಡಾ 18ರಷ್ಟು ಹಿಂದೂಗಳು ಕಾಂಗ್ರೆಸ್ಗೆ ವೋಟ್ ಮಾಡಿದ್ರು. ಈ ಎಲ್ಲಾ ಡೇಟಾದಿಂದ ನಾವಿಲ್ಲಿ ಕೆಲ ಸೂಕ್ಷ್ಮ ಸಂಗತಿಗಳನ್ನ ಅರ್ಥ ಮಾಡಿಕೊಳ್ಳಲೇಬೇಕಾಗುತ್ತೆ.
ಹಿಂದೂಗಳಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗುತ್ತಿದೆ!
ಇತ್ತೀಚಿನ ವರ್ಷಗಳಲ್ಲಿ ಅದ್ರಲ್ಲೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳಲ್ಲಿ ಧಾರ್ಮಿಕತೆಯ ಭಾವನೆ ಇನ್ನಷ್ಟು ಹೆಚ್ಚಾಗುತ್ತಿದೆ. ಅದಕ್ಕೆ ಹಲವು ಕಾರಣಗಳಿವೆ. ಹೇಳಿಕೇಳಿ ಕೇಂದ್ರದಲ್ಲಿ ಅಧಿಕಾರದಲ್ಲಿರೋದು ಬಿಜೆಪಿ. ಹಿಂದುತ್ವವಾದಿ ಪಕ್ಷ.. ಇದ್ರಿಂದಾಗಿ ದೇಶಾದ್ಯಂತ ಹಿಂದುತ್ವವಾದ ಹೆಚ್ಚಾಗಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಜೊತೆಗೆ ದೇಶದಲ್ಲಿ ಮಂದಿರಗಳ ಅಭಿವೃದ್ಧಿ, ನಿರ್ಮಾಣ ಕಾರ್ಯ ಭರದಿಂದ ಸಾಗ್ತಿದೆ. ಸನಾತನ ಧರ್ಮ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗುತ್ತಿದೆ. ಯುವ ಜನಾಂಗ ಕೂಡ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಗಳನ್ನ ಮಾಡ್ತಿದ್ದಾರೆ. ವಾರಾಣಸಿಯ ಘಾಟ್ಗಳಿಗೆ ಭೇಟಿ ನೀಡುವ ಯುವಕರ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ದೇಶದಲ್ಲಿ ಹಿಂದೂಗಳಲ್ಲಿ ಧಾರ್ಮಿಕ ಭಾವನೆಯ ಪ್ರಮಾಣ ಹೆಚ್ಚಾಗ್ತಿರೋದು ಬಿಜೆಪಿಗೆ ಅಡ್ವಾಂಟೇಜ್ ಆಗುವ ಸಾಧ್ಯತೆ ಇದೆ. ಬಿಜೆಪಿ ಕೂಡ ಅಷ್ಟೇ ಹೆಚ್ಚುತ್ತಿರುವ ರಿಲಿಜಿಯಾಸಿಟಿಯನ್ನ ಎನ್ಕ್ಯಾಶ್ ಮಾಡೋ ಪ್ರಯತ್ನ ಮಾಡುತ್ತೆ. ಅದ್ರಲ್ಲೂ ಈಗ ರಾಮಮಂದಿರ ನಿರ್ಮಾಣವಾಗಿರೋದ್ರಿಂದ ಇದನ್ನ ಮತವಾಗಿ ಪರಿವರ್ತಿಸೋಕೆ ಬಿಜೆಪಿ ಶತಪ್ರಯತ್ನ ಮಾಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿಯ ಪ್ರಮುಖ ಅಸ್ತ್ರವಾಗಿರೋದೆ ರಾಮಮಂದಿರ. ಆದ್ರೆ ಮಂದಿರ ನಿರ್ಮಾಣವನ್ನ ಮತವನ್ನಾಗಿ ಕನ್ವರ್ಟ್ ಮಾಡೋದು ಅಷ್ಟೊಂದು ಸುಲಭ ಇಲ್ಲ. ಮಂದಿರವೇನೊ ನಿರ್ಮಾಣವಾಗಿದೆ. ಆದ್ರೆ ಈ ಮಂದಿರ ನಿರ್ಮಾಣದ ಮಹತ್ವವನ್ನ, ಸಂಭ್ರಮವನ್ನ ಬಿಜೆಪಿ ದೇಶದ ಹಳ್ಳಿ ಹಳ್ಳಿಗೂ, ಮನೆ ಮನೆಗೂ ತಲುಪಿಸಬೇಕಿದೆ. ಮಂದಿರ ನಿರ್ಮಾಣದ ಬಳಿಕ ಮುಂದೇನು? ರಾಮರಾಜ್ಯ ಅಂದ್ರೆ ಏನು ಅನ್ನೋ ಬಗ್ಗೆ ಜನರಿಗೆ ಮನವರಿಗೆ ಮಾಡಬೇಕಿದೆ. ಆಗ ಮಾತ್ರ ರಾಮಮಂದಿರ ನಿರ್ಮಾಣಕ್ಕಾಗಿಯೂ ವೋಟ್ಗಳು ಬಿಜೆಪಿ ಬುಟ್ಟಿಗೆ ಬೀಳಬಹುದಷ್ಟೇ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ರಾಮಮಂದಿರ ಉದ್ಘಾಟನೆ ದಿನ ರಾತ್ರಿ ಮನೆ ಮನೆಗಳಲ್ಲಿ, ದೇವಾಲಯಗಳಲ್ಲಿ ದೀಪ ಹಚ್ಚುವಂತೆ, ದೀಪಾವಳಿ ಆಚರಿಸುವಂತೆ ಸೂಚಿಸಿರೋದು. ಅದಕ್ಕೆ ರಾಮ ಜ್ಯೋತಿ ಅಂತಾ ಹೆಸರಿಟ್ಟಿರೋದು.
ಇನ್ನು ರಾಮಮಂದಿರವನ್ನ ಮತವನ್ನಾಗಿ ಪರಿವರ್ತಿಸೋಕೆ ಮುಂದಿನ ಎರಡು ತಿಂಗಳಿಗೆ ಬಿಜೆಪಿ ಹಲವು ಪ್ಲ್ಯಾನ್ಗಳನ್ನ ಕೂಡ ಮಾಡಿಕೊಂಡಿದೆ. 60 ದಿನಗಳ ಕಾಲ ಭಕ್ತರನ್ನ ಅಯೋಧ್ಯೆಗೆ ಕರೆದುಕೊಂಡು ಹೋಗಲು ಬೇಕಾದ ವ್ಯವಸ್ಥೆಯನ್ನ ಬಿಜೆಪಿ ಮಾಡ್ತಿದೆ. ದೇಶಾದ್ಯಂತ ದಿನಕ್ಕೆ 50 ಸಾವಿರ ಭಕ್ತರಂತೆ, ಮುಂದಿನ 60 ದಿನಗಳ ಕಾಲ ಅಂದ್ರೆ 30 ಲಕ್ಷಕ್ಕೂ ಹೆಚ್ಚು ಭಕ್ತರನ್ನ ಅಯೋಧ್ಯೆ ಯಾತ್ರೆಗೆ ಕಳುಹಿಸಲಾಗುತ್ತೆ. ಜನವರಿ 22ರ ಬಳಿಕ ಅಯೋಧ್ಯೆಗೆ ತೆರಳೋಕೆ ಏನೆಲ್ಲಾ ವ್ಯವಸ್ಥೆ ಇದೆ. ಹೇಗೆ ಹೋಗಬೇಕು. ಎಲ್ಲಿ ಉಳಿದುಕೊಳ್ಳಬೇಕು. ಇವೆಲ್ಲದರ ಬಗ್ಗೆಯೂ ಭಕ್ತರಿಗೆ ಮಾಹಿತಿ ನೀಡೋ ಕೆಲಸ ಮಾಡಬೇಕು ಅಂತಾ ಈಗಾಗಲೇ ಬಿಜೆಪಿ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ. ಇದಕ್ಕಾಗಿ ಬಿಜೆಪಿ ದೇಶಾದ್ಯಂತ ಎಲ್ಲಾ ಬೂತ್ಗಳಲ್ಲೂ ಹೆಲ್ಪ್ ಡೆಸ್ಕ್ನ್ನ ಓಪನ್ ಮಾಡ್ತಿದೆ. ಇದಕ್ಕಾಗಿ ಬಿಜೆಪಿ ಜೊತೆಗೆ ಆರ್ಎಸ್ಎಸ್ ಕಾರ್ಯಕರ್ತರು ಕೂಡ ಸಹಕಾರ ನೀಡಲಿದ್ದಾರೆ. ಇಷ್ಟೇ ಅಲ್ಲ, ರಾಮಮಂದಿರಕ್ಕಾಗಿ ಕಳೆದ 500 ವರ್ಷಗಳ ಕಾಲ ನಡೆದ ಹೋರಾಟದ ಕುರಿತ ಬುಕ್ಲೆಟ್ನ್ನ ತಯಾರು ಮಾಡಲಾಗ್ತಿದೆ. ಇದನ್ನ ರಾಮಮಂದಿರಕ್ಕಾಗಿ ಹೋರಾಡಿದವರೇ ದೇಶಾದ್ಯಂತ ಹಂಚಿಕೆ ಮಾಡ್ತಾರೆ. ಈ ಮೂಲಕ ಹಿಂದೂಗಳ ಮತವನ್ನ ಒಗ್ಗೂಡಿಸೋಕೆ ಬಿಜೆಪಿ ಪ್ಲ್ಯಾನ್ ಮಾಡಿದೆ.
ಅಂದು ಕೇವಲ 2 ಸೀಟುಗಳಲ್ಲಷ್ಟೇ ಗೆದ್ದಿದ್ದ ಬಿಜೆಪಿ ಈಗ 300+ ಕ್ಷೇತ್ರಗಳನ್ನ ಗೆಲುವು ದಾಖಲಿಸಿರೋದ್ರಲ್ಲಿ ರಾಮಮಂದಿರ ಹೋರಾಟ, ರಥಯಾತ್ರೆ ಕೂಡ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಈ ಬಾರಿ ಮೋದಿ ಟಾರ್ಗೆಟ್ 400+. ಅದಕ್ಕಾಗಿ ಪ್ರಚಾರದ ವೇಳೆ ಮೋದಿ ರಾಮನಾಮ ಜಪ ಮಾಡೋದು ಗ್ಯಾರಂಟಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಅನ್ನೋ ವಿಚಾರವನ್ನ ಹೋದಲ್ಲೆಲ್ಲಾ ಮಾತನಾಡೋದು ಖಚಿತ. ಇಂದಿರಾಗಾಂಧಿ ಸಾವಿನ ಬಳಿಕ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ 400+ ಸ್ಥಾನಗಳನ್ನ ಪಡೆದು ಪ್ರಧಾನಿಯಾಗಿದ್ರು. ಇದೇ ಕೊನೆ, ಮತ್ತಿನ್ಯಾರಿಗೂ, ಯಾವ ಪಕ್ಷಕ್ಕೂ 400ರ ಗಡಿ ದಾಟೋಕೆ ಸಾಧ್ಯವಾಗಿರಲಿಲ್ಲ. ಅಂದು ಕಾಂಗ್ರೆಸ್ಗೂ ಭಾವನತ್ಮಾಕ ಅಲೆಯಲ್ಲಿ ಮತಗಳು ಬಂದಿದ್ವು.. ಈಗ ರಾಮನ ಹೆಸರಲ್ಲಿ ಮೋದಿ ಕೂಡ ಧಾರ್ಮಿಕವಾಗಿ ಭಾವನಾತ್ಮಕ ಮತಗಳನ್ನ ಬುಟ್ಟಿಗೆ ಹಾಕಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ. ಹಿಂದೂಗಳ ಮತಗಳನ್ನೇ ಮೇನ್ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹೀಗಾಗಿ ರಾಮಲಲ್ಲಾ, ರಾಮಮಂದಿರ, ಅಯೋಧ್ಯೆ, ಸನಾತನ ಧರ್ಮ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಬಾಯಲ್ಲಿ ಪ್ರಚಾರದುದ್ದಕ್ಕೂ ಕೇಳಿ ಬರಲಿದೆ.