ಅಯೋಧ್ಯೆಯಲ್ಲಿ ಹರಿದುಬಂತು ಭಕ್ತಸಾಗರ – ರಾಮನ ದರ್ಶನಕ್ಕೆ ನೂಕುನುಗ್ಗಲು
ಅಯೋಧ್ಯೆ ರಾಮಮಂದಿರ ಲೋಕಾರ್ಷಣೆಗೊಂಡಿದೆ. ಕೋಟ್ಯಂತರ ಹಿಂದೂಗಳಿಗೆ ಬಾಲರಾಮ ದರ್ಶನ ನೀಡಿದ್ದಾನೆ. ರಾಮ ಮಂದಿರದ ಉದ್ಘಾಟನೆಯ ಒಂದು ದಿನದ ಬಳಿಕ ( ಮಂಗಳವಾರ) ಸಾರ್ವಜನಿಕರಿಗೆ ಬಾಲರಾಮನ ದರ್ಶನಕ್ಕಾಗಿ ಅವಕಾಶ ನೀಡಲಾಗಿದೆ. ಮಂಗಳವಾರ ಮುಂಜಾನೆ ಮೂರೂ ಗಂಟೆಯಿಂದಲೇ ರಾಮಮಂದಿರದ ಸುತ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ನೂಕು ನುಗ್ಗಲು ಸಂಭವಿಸಿದೆ ಎಂದು ವರದಿಯಾಗಿದೆ.
ಹೌದು, ಅಯೋಧ್ಯೆಯಲ್ಲಿ ಸಾವಿರಾರು ಭಕ್ತರು ಜಮಾಯಿಸಿದ್ದಾರೆ. ಬಾಲರಾಮನ ದರ್ಶನಕ್ಕಾಗಿ ಮುಂಜಾನೆಯಿಂದಲೇ ಕಾಯುತ್ತಿದ್ದಾರೆ. ಇದೀಗ ಮಂದಿರದಲ್ಲಿ ನೂಕುನುಗ್ಗಲು ಸಂಭವಿಸಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಆಧ್ಯಾತ್ಮದ ಮೊರೆ ಹೋಗಿದ್ದೇಕೆ ಈ ಕ್ರಿಕೆಟರ್ಸ್? – ಕೂಲ್ ಕ್ಯಾಪ್ಟನ್ ಧ್ಯಾನ ರಹಸ್ಯ!
ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ದಿನದಲ್ಲಿ ಎರಡು ಹೊತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ನಂತರ ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊರೆವ ಚಳಿಯ ನಡುವೆಯೂ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಮುಂಬೈನಿಂದ ದರ್ಶನಕ್ಕೆಂದು ಕುಟುಂಬ ಸಮೇತ ಬಂದಿದ್ದ ಮಹಿಳಾ ಭಕ್ತೆಯೊಬ್ಬರು ಮಾಹಿತಿ ನೀಡಿದ್ದು ‘ಮೂರು ದಿನಗಳಿಂದ ಇಲ್ಲಿಯೇ ಇದ್ದೇವೆ, ರಾಮನ ದರ್ಶನದ ನಂತರವೇ ಊರಿಗೆ ತೆರಳುತ್ತೇವೆ’ ಎಂದು ಹೇಳಿದ್ದಾರೆ.
ರಾಮ ಮಂದಿರದ ಹೊರಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು. ದೇಗುಲದ ಮುಖ್ಯ ದ್ವಾರದ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಅಯೋಧ್ಯೆಗೆ ಭಕ್ತರು ಆಗಮಿಸುವ ಪ್ರಕ್ರಿಯೆ ಮುಂದುವರಿದಿದೆ. ಹೊರಗಿನಿಂದ ಬರುವ ಭಕ್ತರಲ್ಲದೆ ಅಯೋಧ್ಯೆ ನಿವಾಸಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ.
ಬಂದಿರುವ ಮಾಹಿತಿ ಪ್ರಕಾರ ಭಕ್ತರ ದಂಡೇ ನೆರೆದಿರುವುದರಿಂದ ಅಯೋಧ್ಯೆಯ ಹೋಟೆಲ್, ಲಾಡ್ಜ್ ಗಳು ಹೌಸ್ ಫುಲ್ ಆಗಿವೆ. ಹಲವು ಹೋಟೆಲ್ಗಳಲ್ಲಿ ಬಾಡಿಗೆಯನ್ನೂ ಹೆಚ್ಚಿಸಿದೆ ಎಂದು ಹೇಳಲಾಗಿದೆ.