ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ – ಇದು ಭಾವನಾತ್ಮಕ ಕ್ಷಣ ಎಂದ ಮೋದಿ
ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿದೆ. 500 ವರ್ಷಗಳ ಬಳಿಕ ಕೋಟ್ಯಾನುಕೋಟಿ ರಾಮಭಕ್ತರ ಬಯಕೆ ಕೊನೆಗೂ ಈಡೇರಿದೆ. ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿದೆ. ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿಯು ವಿರಾಜಮಾನವಾಗಿದ್ದು, ಪ್ರಾಣ ಪ್ರತಿಷ್ಠಾಪನೆಯ ಮೂಲಕ ಬಾಲರಾಮನ ಮೂರ್ತಿಯ ದರ್ಶನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ಮೂರ್ತಿಗೆ ಮೊದಲ ಪೂಜೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ರಾಮನಗರಿಯಲ್ಲಿ ವಿರಾಜಮಾನನಾದ ಮರ್ಯಾದಾ ಪುರುಷೋತ್ತಮ – ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ಯಶಸ್ವಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದಲ್ಲಿ ಬಾಲ ರಾಮನಿಗೆ ಮೊದಲ ಪೂಜೆ ಸಲ್ಲಿಸಿದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ರಾಮಭಕ್ತರಿಗೆ ತಮ್ಮ ಸಂದೇಶ ಕಳುಹಿಸಿದ್ದಾರೆ. ಅಯೋಧ್ಯಾ ಧಾಮದಲ್ಲಿ ಶ್ರೀರಾಮ ಲಲ್ಲಾ ಅವರ ಪ್ರಾಣ ಪ್ರತಿಷ್ಠೆಯ ಅಲೌಕಿಕ ಕ್ಷಣವು ಎಲ್ಲರನ್ನೂ ಭಾವುಕರನ್ನಾಗಿಸಲಿದೆ. ಈ ದಿವ್ಯ ಕಾರ್ಯಕ್ರಮದ ಭಾಗವಾಗಿರುವುದು ನನಗೆ ಅತೀವ ಸಂತಸ ತಂದಿದೆ. ಜಯ್ ಸಿಯಾ ರಾಮ್! ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ಈ ಐತಿಹಾಸಿಕ ಕ್ಷಣದಲ್ಲಿ ಪ್ರಧಾನಿ ಮೋದಿ ಅವರು ಕ್ರೀಮ್ ಕಲರ್ ಧೋತಿ ಮತ್ತು ಚಿನ್ನದ ಬಣ್ಣದ ಕುರ್ತಾ ಧರಿಸಿ, ಮಡಿಸಿದ ಕೆಂಪು ದುಪಟ್ಟಾದಲ್ಲಿ ಬೆಳ್ಳಿಯ ಛತ್ರಿಯನ್ನು ಹಿಡಿದು ದೇವಾಲಯದ ಗರ್ಭಗುಡಿಗೆ ಮೋದಿ ಬಂದಿದ್ದಾರೆ. ಬಳಿಕ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮಲಲ್ಲಾ ಮೂರ್ತಿಯನ್ನು ಅನಾವರಣಗೊಳಿಸಿದರು.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉಪಸ್ಥಿತರಿದ್ದರು.
ಮೋದಿ ಅವರು ಈ ಕಾರ್ಯಕ್ರಮದ ನಂತರ ಕುಬೇರ ತಿಲಕ್ಕೂ ಭೇಟಿ ನೀಡಲಿದ್ದಾರೆ. ಅವರು ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದಾರೆ.