ಶತಮಾನಗಳ ಕನಸು ನನಸಾಗಲು ಕ್ಷಣಗಣನೆ – ಜನವರಿ 22ನ್ನು ಅಯೋಧ್ಯೆ ರಾಮ ಮಂದಿರ ದಿನವನ್ನಾಗಿ ಘೋಷಿಸಿದ ಕೆನಡಾ
ಎಲ್ಲೆಲ್ಲೂ ಶ್ರೀರಾಮನ ಜಪ ಶುರುವಾಗಿದೆ. ಕೋಟ್ಯಂತರ ಹಿಂದೂಗಳ ಕನಸು ನನಸಾಗುತ್ತಿದೆ. ಆಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರ ಸೋಮವಾರ ಲೋಕಾರ್ಪಣೆಗೊಳ್ಳುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಸಂಭ್ರಮ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಶ್ರೀರಾಮನ ಜಪ ಮೊಳಗುತ್ತಿದೆ. ಇದೀಗ ಕೆನಡಾ ಜನವರಿ 22 ಅನ್ನು ಅಯೋಧ್ಯೆ ರಾಮ ಮಂದಿರ ದಿನ ಎಂದು ಘೋಷಿಸಲು ನಿರ್ಧರಿಸಿದೆ.
ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕೌಂಟ್‌ಡೌನ್! – ಮದುವಣಗಿತ್ತಿಯಂತೆ ಸಿಂಗಾರಗೊಂಡ ರಾಮನಗರಿ
ಹೌದು, ಶ್ರೀರಾಮನ ಜಪ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಮೊಳಗುತ್ತಿದೆ. ಇದೀಗ ಕೆನಡಾದ ಮೂರು ಪುರಸಭೆಗಳು ಜನವರಿ 22 ಅನ್ನು ಅಯೋಧ್ಯೆ ರಾಮಮಂದಿರ ದಿನ ಎಂದು ಘೋಷಿಸಿವೆ. ಹಿಂದೂ ಕೆನಡಿಯನ್ ಫೌಂಡೇಶನ್ (ಎಚ್‌ಸಿಎಫ್) ಸಂಸ್ಥಾಪಕ ಮತ್ತು ಅಧ್ಯಕ್ಷ ಅರುಣೇಶ್ ಗಿರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಶ್ವ ಜೈನ್ ಸಂಘಟನೆ ಕೆನಡಾ (ವಿಜೆಎಸ್‌ಸಿ) ಸಹಯೋಗದೊಂದಿಗೆ ಎಚ್‌ಸಿಎಫ್ ಜನವರಿ 22, 2024 ರಂದು ಮೂರು ನಗರಗಳಾದ ಬ್ರಾಂಪ್ಟನ್, ಓಕ್‌ವಿಲ್ಲೆ ಮತ್ತು ಬ್ರಾಂಟ್‌ಫೋರ್ಡ್‌ನಲ್ಲಿ ಅಯೋಧ್ಯೆ ರಾಮಮಂದಿರ ದಿನವನ್ನು ಯಶಸ್ವಿಯಾಗಿ ಘೋಷಿಸಿದೆ ಎಂದು ತಿಳಿಸಿದ್ದಾರೆ.
ಇನ್ನುಕೆನಡಾ ಮಾತ್ರವಲ್ಲದೇ ಮಾರಿಷಸ್ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ತನ್ನ ಯೋಜನೆಗಳನ್ನು ಘೋಷಿಸಿದೆ. ಮಾರಿಷಸ್‌ನಲ್ಲಿ ಈ ದಿನವನ್ನು ಸ್ಮರಣೀಯವಾಗಿಸಲು, ದೀಪಗಳನ್ನು ಬೆಳಗಿಸಲಾಗುತ್ತದೆ. ಅಷ್ಟೇ ಅಲ್ಲ ಅಲ್ಲಿ ರಾಮಾಯಣ ಪಾರಾಯಣವೂ ನಡೆಯಲಿದೆ.
ಪ್ರಾಣ ಪ್ರತಿಷ್ಠೆಯ ದಿನದಂದು ಮಾರಿಷಸ್‌ನ ಎಲ್ಲಾ ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ ಮತ್ತು ರಾಮಾಯಣವನ್ನು ಪಠಿಸಲಾಗುವುದು. ಮಾರಿಷಸ್ ಸರ್ಕಾರವು ಸರ್ಕಾರಿ ಹಿಂದೂ ನೌಕರರಿಗೆ ಜನವರಿ 22 ರಂದು ರಜೆ ನೀಡಲು ನಿರ್ಧರಿಸಿದೆ.