ಮೂರೇ ಮೂರು ಸೀಟಿಗೆ ಗಿರ ಗಿರ ಅಂತಿದೆಯೇ ಜೆಡಿಎಸ್? – ಮೂರರಲ್ಲಿ ಗೆದ್ದರಷ್ಟೇ ಜೆಡಿಎಸ್ ಗೆ ಉಳಿಗಾಲ?
ಜನತಾಪರಿವಾರದ ಕಡೆಯ ಹಂತದ ವಿಭಜನೆಯಲ್ಲಿ ಹೊಸ ದಳವಾಗಿ ಹುಟ್ಟಿಕೊಂಡಿದ್ದ ಜೆಡಿಎಸ್ ಸ್ಥಾಪನೆಯಾಗಿ 2024ರ ಜುಲೈ ತಿಂಗಳಿಗೆ ಭರ್ತಿ 25 ವರ್ಷ ಆಗ್ತಿದೆ.. ಆದ್ರೆ ಬೆಳ್ಳಿಹಬ್ಬ ಆಚರಿಸಲು ಸಿದ್ಧವಾಗಿರುವ ಜೆಡಿಎಸ್ ಗೆ 25 ವರ್ಷಗಳ ಅವಧಿಯಲ್ಲಿ ಅತಿದೊಡ್ಡ ಅಸ್ತಿತ್ವದ ಸವಾಲು ಎದುರಾಗುವ ಲಕ್ಷಣಗಳು ಕಾಣ್ತಿವೆ.. ಅದು ಹೇಗೆ? ಕುಮಾರಸ್ವಾಮಿಯವರ ಬಿಜೆಪಿ ಜೊತೆಗಿನ ಮೈತ್ರಿಗೂ ಜೆಡಿಎಸ್ನ ಅಸ್ತಿತ್ವಕ್ಕೂ ಸಂಬಂಧ ಇದೆಯೇ? ದೇವೇಗೌಡರು ಕಟ್ಟಿದ್ದ ಜನತಾ ದಳದ ಮುಂದುವರಿದ ಅವರ ಪಕ್ಷ ಈಗ ಸ್ವಾಹಾ ಆಗುವ ಹಂತಕ್ಕೆ ತಲುಪಿದೆಯೇ? ಮೂರಕ್ಕಿಳಿದ ಮೇಲೆ ಮುಂದೇನು ಎಂಬ ಬಗ್ಗೆ ಸ್ಪೆಷಲ್ ಸ್ಟೋರಿ ಇಲ್ಲಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ನಿಖಿಲ್ ಕುಮಾರಸ್ವಾಮಿ – ಮಂಡ್ಯದಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು?
ಕುಮಾರಸ್ವಾಮಿಯವರು ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಜನವರಿ 17ರಂದು ದೆಹಲಿಯಲ್ಲಿ ಭೇಟಿಯಾಗಿದ್ದರು.. ಹಾಗೆ ಭೇಟಿಗೆ ಹೋದಾಗ ಜೆಡಿಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ, ತಮ್ಮ ಮುದ್ದಿನ ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಕರೆದೊಯ್ದಿದ್ದರು.. ಕೇವಲ ಫ್ಯಾಮಿಲಿ ಮೆಂಬರ್ಸ್ ಮಾತ್ರ ಬಂದಿದ್ದಾರೆ ಅಂತ ಬಿಜೆಪಿಯ ದೆಹಲಿ ನಾಯಕರು ಅಂದ್ಕೊಳ್ಳೋದು ಬೇಡ ಅಂತಲೋ ಏನೋ, ಜೊತೆಯಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿಯವರನ್ನೂ ಕರೆದೊಯ್ದಿದ್ದರು.
ಇದು ಮೂರು ಸೀಟಿನ ಕತೆ.. ಮೂರೇ ಮೂರು ಸೀಟಿನ ಕತೆ.. ಜೆಡಿಎಸ್ ಯಾವಾಗ ಬಿಜೆಪಿ ಕಡೆಗೆ ವಾಲೋದಿಕ್ಕೆ ಶುರು ಮಾಡ್ತೋ ಅಲ್ಲಿಂದಲೂ ರಾಜ್ಯದಲ್ಲಿ ಅತ್ಯಂತ ಖುಷಿಯಾಗಿರುವ ವ್ಯಕ್ತಿ ಅಂತಿದ್ರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಒಂದು ಕಾಲದಲ್ಲಿ ಜೆಡಿಎಸ್ನ ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಈಗ ರಾಜಕೀಯವಾಗಿ ದಳಪತಿಗಳ ಪರಮಶತ್ರು.. ಹೇಗಾದ್ರೂ ಮಾಜಿ ರಾಜ್ಯದಲ್ಲಿ ಜೆಡಿಎಸ್ನ ಅಸ್ತಿತ್ವವನ್ನೇ ಇಲ್ಲದಂತೆ ಮಾಡ್ಬೇಕು ಎನ್ನುವುದು ಸಿದ್ದರಾಮಯ್ಯ ಅವರ ಸಂಕಲ್ಪದಂತೆಯೇ ಇತ್ತು.. ಇದೇ ಕಾರಣದಿಂದ ಜೆಡಿಎಸ್ನ ಹೆಸರಿನಲ್ಲಿರುವ ಜಾತ್ಯಾತೀತ ಪದದ ಮೇಲೆಯೇ ಪ್ರಹಾರ ನಡೆಸುತ್ತಾ ಬಂದಿದ್ದರು.. 2018ರ ವಿಧಾನಸಭಾ ಚುನಾವಣೆಯ ವೇಳೆಯಂತೂ ಜೆಡಿಎಸ್ ಕರ್ನಾಟಕದಲ್ಲಿ ಬಿಜೆಪಿಯ ಬಿ ಟೀಂ ಅಂತಲೇ ವಾಗ್ದಾಳಿ ನಡೆಸಿದ್ದರು. ಫಲಿತಾಂಶದ ನಂತರ ಕೈ ಕಟ್ಟಿ ನಿಂತು ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಘೋಷಿಸಿದ್ದರೂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಮೇಲೆ ಎಂದೂ ವಿಶ್ವಾಸ ಇದ್ದಂತೆ ಕಂಡಿರಲೇ ಇಲ್ಲ.. ಅದಕ್ಕೆ ಪ್ರಮುಖ ಕಾರಣವೆಂದ್ರೆ ಜೆಡಿಎಸ್ ಜೊತೆಗೆ ಅಹಿಂದ ಮತಗಳನ್ನು ಹಂಚಿಕೊಳ್ಳುವುದನ್ನು ಸಿದ್ದರಾಮಯ್ಯ ಕನಸಿನಲ್ಲೂ ಸಹಿಸಿಕೊಳ್ಳುತ್ತಿರಲಿಲ್ಲ.. ಇದೇ ಕಾರಣಕ್ಕೇ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂಬ ಹಣೆಪಟ್ಟಿಯಿಂದಲೇ ಕರೆಯೋದಿಕ್ಕೆ ಶುರುಮಾಡಿದ್ದರು.. ಈಗ ಬಿಜೆಪಿ ಜೊತೆ ನೇರವಾಗಿ ಜೆಡಿಎಸ್ ಕೈಜೋಡಿಸುವುದರಿಂದ ಜೆಡಿಎಸ್ಗೆ ಮುಸ್ಲಿಂ ಮತಗಳು ಶಾಶ್ವತವಾಗಿ ದೂರವಾಗಬಹುದು ಮತ್ತು ದಲಿತ ಹಾಗೂ ಹಿಂದುಳಿದ ವರ್ಗಗಳು ಕೂಡ ದಳಪತಿಗಳಿಂದ ದೂರ ಸರಿಯಬಹುದು ಎಂಬ ಲೆಕ್ಕಾಚಾರವೇ ಸಿದ್ದರಾಮಯ್ಯ ಅವರನ್ನು ಖುಷಿಯಲ್ಲಿಟ್ಟಿದೆ.. ಅವರಿಗೆ ಲೋಕಸಭೆಯಲ್ಲಿ ಏನಾಗುತ್ತೋ ಏನೋ ಅನ್ನೋದಕ್ಕಿಂತಲೂ ರಾಜ್ಯದಲ್ಲಿ ಜೆಡಿಎಸ್ನ ಅಸ್ತಿತ್ವಕ್ಕೆ ಸಂಚಕಾರ ಬಂದರೆ, ಆಗ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆಯೇ ನೇರ ಹಣಾಹಣಿ ಆಗೋದೇ ಒಳ್ಳೆಯದು ಎಂಬ ಲೆಕ್ಕಾಚಾರ ಇರುವಂತಿದೆ.. ಯಾಕಂದ್ರೆ ಯಾವುದೇ ಪರಿಸ್ಥಿತಿಯಲ್ಲೂ ಕಡಿಮೆ ಸೀಟು ಬಂದವರ ಎದುರು ಕೈಕಟ್ಟಿ ನಿಂತು ಮೈತ್ರಿಯ ನಾಯಕತ್ವ ಬಿಟ್ಟುಕೊಡುವಂತಹ ಪರಿಸ್ಥಿತಿ ಎದುರಿಸುವುದು ಸಿದ್ದರಾಮಯ್ಯ ಅವರಿಗೆ ಇಷ್ಟ ಇದ್ದಂತಿಲ್ಲ… ಈ ವಿಚಾರದಲ್ಲಿ ಸಿದ್ದರಾಮಯ್ಯ ನಿಲುವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಒಪ್ಪಿಗೆಯೂ ಇರುವಂತೆ ಕಂಡುಬರುತ್ತಿದೆ.. ಇದೇ ಕಾರಣಕ್ಕಾಗಿ ಜೆಡಿಎಸ್ ಮೂರೇ ಮೂರು ಸೀಟಿನಲ್ಲಿ ಸ್ಪರ್ಧಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವುದು ಪಕ್ಷವನ್ನೇ ಗಿರ ಗಿರ ಎಂದು ತಿರುಗಿಸುತ್ತಿರುವಂತೆ ಕಂಡುಬರುತ್ತಿದೆ..
ಮೂರರಲ್ಲಿ ಗೆದ್ದರಷ್ಟೇ ಜೆಡಿಎಸ್ ಗೆ ಉಳಿಗಾಲ?
ಇದೇ ಈಗಿರುವ ಅತ್ಯಂತ ಮುಖ್ಯವಾದ ಪ್ರಶ್ನೆ.. ಜೆಡಿಎಸ್ಗೆ ಬಹುತೇಕ ಹಾಸನ, ಮಂಡ್ಯ, ಕೋಲಾರ ಅಥವಾ ಬೆಂಗಳೂರುಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಲಿದೆ.. ಅಂದರೆ ಕೇವಲ 3 ಸೀಟು ಮಾತ್ರ ಬಿಜೆಪಿ ಬಿಟ್ಟುಕೊಡಲಿದೆ..ಇದರ ಮೂಲಕ ಕಳೆದ ಬಾರಿ ರಾಜ್ಯದಲ್ಲಿ ಗೆದ್ದಷ್ಟು ಸೀಟುಗಳಲ್ಲಿ ಸ್ಪರ್ಧಿಸುವ ತೀರ್ಮಾನಕ್ಕೆ ಬಿಜೆಪಿ ಬರಬಹುದು.. ಬಿಜೆಪಿ ನಿಮಗೆ ನಾವು ಕೊಡೋದಿಷ್ಟೇ ಅಂತ ಹೇಳಿದ್ರೆ ಬೇಡ, ಇನ್ನೂ ಎರಡು ಕೊಡಿ, ಮೂರು ಕೊಡಿ ಅಂತ ಬಾರ್ಗೈನ್ ಮಾಡೋದಿಕ್ಕೆ ಅದುಕಾಂಗ್ರೆಸ್ ಪಕ್ಷ ಅಲ್ಲ ಎನ್ನುವುದು ಕುಮಾರಸ್ವಾಮಿಯವರಿಗೂ ಗೊತ್ತಿದೆ.. ಮೈಸೂರು, ಚಿಕ್ಕಬಳ್ಳಾಪುರದ ಮೇಲೆ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾದರೂ ಅವರು ಕೇಳಿದ್ದನ್ನೆಲ್ಲಾ ಕೊಡುವಷ್ಟು ಉದಾರಿಗಳು ಬಿಜೆಪಿಯಲ್ಲೂ ಇಲ್ಲ.. ಯಾಕಂದ್ರೆ ಬಿಜೆಪಿ ಲೋಕಸಭಾ
ಚುನಾವಣೆಯಲ್ಲಿ ಇಟ್ಟಿರುವ ಗುರಿ, 400 ಸೀಟುಗಳದ್ದು.. ಒಂದೊಂದು ಕ್ಷೇತ್ರದ ಪ್ರಾಮುಖ್ಯತೆ ಇಡೀ ದೇಶದಲ್ಲಿ ಎಲ್ಲರಿಗಿಂತ ಚೆನ್ನಾಗಿ ಗೊತ್ತಿರುವುದು ಬಿಜೆಪಿ ನಾಯಕರಿಗೆ ಮಾತ್ರ.. ಹೀಗಾಗಿ ಅವರು ಕೊಟ್ಟಷ್ಟು ಸೀಟುಗಳಿಗೆ ಒಪ್ಪಿಗೆ ಸೂಚಿಸಬೇಕಾದ ಸ್ಥಿತಿಯಲ್ಲಿ ಜೆಡಿಎಸ್ ನಾಯಕರಿದ್ದಾರೆ.. ಆದ್ರೆ ಕೇವಲ ಅವರು ಕೊಟ್ಟ ಸೀಟುಗಳಿಗೆ ಒಪ್ಪಿಕೊಂಡ ಮಾತ್ರಕ್ಕೆ ಜೆಡಿಎಸ್ ಸೇಫ್ ಆಗೋದಿಲ್ಲ..ಮೂರಕ್ಕೆ ಮೂರನ್ನೂ ಗೆದ್ದರೆ ಮಾತ್ರ ಜೆಡಿಎಸ್ಗೆ ಉಳಿಗಾಲ ಎಂಬ ಪರಿಸ್ಥಿತಿ ದಟ್ಟವಾಗಿ ಗೋಚರಿಸುತ್ತಿದೆ.. ಯಾಕಂದ್ರೆ ಈಗ ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಈ ಮೂರು ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರ ಜೆಡಿಎಸ್ ಪಾಲಾದರೂ ಮಂಡ್ಯ ಹೊರತುಪಡಿಸಿ ಉಳಿದೆರಡು ಕಡೆ, ಜೆಡಿಎಸ್ಗೆ ಕುಮರಾಸ್ವಾಮಿಯವರನ್ನು ಬಿಟ್ಟರೆ ಬೇರೆ ಉತ್ತಮ ಅಭ್ಯರ್ಥಿಯಿಲ್ಲ.. ಪರಿಸ್ಥಿತಿ
ಹೀಗಿರುವಾಗಲೂ ಕುಮರಾಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.. ಅಲ್ಲಿಗೆ ಕಳೆದ ಬಾರಿ ಮಗನನ್ನು ಸೋಲಿಸಿದ್ದ ಮಂಡ್ಯದ ಜನರೆದುರು ಈಗ ಅಪ್ಪನೇ ಪ್ರತ್ಯಕ್ಷರಾಗಬಹುದು. ದೊಡ್ಡ ದೊಡ್ಡ ನಾಯಕರನ್ನು ಮಕಾಡೆ ಮಲಗಿಸಿದ ಇತಿಹಾಸ ಇರುವ ಮಂಡ್ಯದ ಮತದಾರರು ಯಾವ ರೀತಿಯ ತೀರ್ಪು ಕೊಡುತ್ತಾರೆ ಎಂದು ಈಗಲೇ ಹೇಳುವುದು ಕಷ್ಟ.. ಅದರ ಹೊರತಾಗಿ ಬೆಂಗಳೂರು ಗ್ರಾಮಾಂತರದಲ್ಲಿ ನಿಂತರೆ, ಡಿಕೆ ಬ್ರದರ್ಸ್ ಅಷ್ಟು ಸುಲಭವಾಗಿ ಜಗ್ಗುವವರು ಅಲ್ಲ.. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಹಿಡಿತವನ್ನು ಈ ಬಾರಿ ಡಿಕೆ ಸೋದರರು ಬೆಂಗಳೂರು ಗ್ರಾಮಾಂತರದ ಮೇಲೆ ಹೊಂದಿದ್ದಾರೆ.. ಇನ್ನು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿದ್ರೂ ಕುಮಾರಸ್ವಾಮಿಯವರು ಗೆದ್ದೇ ಬಿಡುತ್ತಾರೆ ಎಂಬ ಪರಿಸ್ಥಿತಿಯಂತೂ ಸದ್ಯಕ್ಕಿಲ್ಲ.. ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿದಾಗ ಸೋತಿರುವ ಫಲಿತಾಂಶ ಕಣ್ಣೆದುರಿಗಿದೆ.. ಇದು ಕುಮಾರಸ್ವಾಮಿಯವರು ಸ್ಪರ್ಧಿಸುವ ಸಾಧ್ಯತೆಗಳಿರುವ ಕ್ಷೇತ್ರಗಳ ಕತೆಯಾಯ್ತು.. ಬಹುತೇಕ ಡಿಕೆ ಬ್ರದರ್ಸ್ ಎದುರಿಗಿನ ಗುದ್ದಾಟದ ಬದಲು ಕೋಲಾರ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಿ ಎಂದು ಜೆಡಿಎಸ್ ಕೇಳುತ್ತಿದೆ.. ಆದ್ರೆ ಕೋಲಾರದಲ್ಲಿ ಜೆಡಿಎಸ್ ಉತ್ತಮ ಅಭ್ಯರ್ಥಿಯ ಕೊರತೆಯಿದೆ.. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರನ್ನೇ ಕಣಕ್ಕಿಳಿಸಬೇಕು ಎಂದು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ.. ಆದರೆ ಇದಕ್ಕೆ ಸಮೃದ್ಧಿ ಒಪ್ಪುತ್ತಿಲ್ಲ..
ಅವರ ಬದಲಿಗೆ ಬಂಗಾರಪೇಟೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಬಹುದು.. ಆದ್ರೆ ಕೋಲಾರದಲ್ಲಿ ಜೆಡಿಎಸ್ಗೆ ಇನ್ನೊಂದು ಸಮಸ್ಯೆಯಿದೆ.. ಅದೇನಂದ್ರೆ 1999ರ ನಂತರ ಇದುವರೆಗೆ ನಡೆದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲೂ ಜೆಡಿಎಸ್ ಒಂದು ರೀತಿಯ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಅನ್ನು ಈ ಕ್ಷೇತ್ರದಲ್ಲಿ ಮಾಡಿತ್ತು.. ಹೀಗಾಗಿ ಮತದಾರರು ಈ ಬಾರಿ ಕೋಲಾರವೇನಾದರೂ ಜೆಡಿಎಸ್ ಪಾಲಾದರೆ, ಅಷ್ಟು ಸೀರಿಯಸ್ ಆಗಿ ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನು ಸ್ವೀಕರಿಸುತ್ತಾರಾ ಎಂಬ ಕುತೂಹಲವಿದೆ..