ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಕರ್ನಾಟಕದಿಂದ ಏಕೈಕ ವ್ಯಕ್ತಿ ಆಯ್ಕೆ – ಸುಳ್ಯದ ವಿದ್ವಾಂಸನಿಗೆ ಸಿಕ್ಕಿತು ಅಪರೂಪದ ಗೌರವ!
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ದೇಶದೆಲ್ಲೆಡೆಯೂ ರಾಮಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಯನ್ನು ಎದುರು ನೋಡುತ್ತಿದ್ದಾರೆ. ಇದೇ ಶ್ರೀರಾಮ ಮಂದಿರದಲ್ಲಿ ಜ.22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಈ ನಗರಗಳಿಂದ ಅಯೋಧ್ಯೆಗೆ ಸಿಗಲಿದೆ ನೇರ ವಿಮಾನ! – ಜ. 22ರಂದು ಅಯೋಧ್ಯೆಗೆ ಎಷ್ಟು ವಿಮಾನ ಬರಲಿದೆ ಗೊತ್ತಾ?
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪರಮಾಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ಜಾಲ್ಲೂರು ಗ್ರಾಮದ ಕೆಮನಬಳ್ಳಿಯ ಡಾ ಕೆ ಗಣಪತಿ ಭಟ್ ಅವರು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ವಿಧಿವಿಧಾನ ನೆರವೇರಿಸುವ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಧಾರ್ಮಿಕ ವಿಧಿವಿಧಾನಗಳು ಜ.16ರಿಂದ ಆರಂಭಗೊಂಡಿದೆ. ಕಾಶಿಯ ಖ್ಯಾತ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ.
ಎಷ್ಟು ಜನರ ತಂಡ?
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು 101 ಮಂದಿ ಪ್ರಧಾನ ಪುರೋಹಿತರನ್ನು ನೇಮರಕ ಮಾಡಲಾಗಿದೆ.. ಇವರಲ್ಲಿ ಡಾ ಕೆ ಗಣಪತಿ ಭಟ್ ಸಹ ಒಬ್ಬರು. ಇವರ ನಾಯಕತ್ವದಲ್ಲಿ 40 ಅರ್ಚಕರು ಇದ್ದಾರೆ. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಡಾ ಕೆ ಗಣಪತಿ ಭಟ್ ಅವರ ಹೆಸರನ್ನು ಸೂಚಿಸಿದ್ದಾರೆ. ಡಾ ಕೆ ಗಣಪತಿ ಭಟ್ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತರಾಗಿದ್ದಾರೆ.
1962ರಲ್ಲಿ ಜನಿಸಿದ ಡಾ ಕೆ ಗಣಪತಿ ಭಟ್ ಜಾಲ್ಲೂರು ಗ್ರಾಮ ಕೆಮನಬಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿವರೆಗೆ ಶಿಕ್ಷಣ, ಅಡ್ಯಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ ಶಿಕ್ಷಣ, ಪೆರ್ನಾಜೆ ಸೀತಾರಾಘವ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. 1978ರಲ್ಲಿ ಕಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣ ಪಡೆದರು.
ಹತ್ತನೇ ತರಗತಿಯ ನಂತರ ಸಂಸ್ಕೃತ ಅಧ್ಯಯನ!
101 ಮಂದಿ ಪ್ರಧಾನ ಪುರೋಹಿತರ ತಂಡಕ್ಕೆ ಆಯ್ಕೆಯಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಣಪತಿ ಭಟ್, ಹತ್ತನೇ ತರಗತಿ ಬಳಿಕ ಸಂಸ್ಕೃತ ವಿಷಯದಲ್ಲಿ ಆಳವಾದ ಅಧ್ಯಯನದಲ್ಲಿ ತೊಡಗಿಕೊಂಡೆ. ಇದರಿಂದ ಸಂಸ್ಕೃತ ವಿಷಯದಲ್ಲಿ ಪಾಂಡಿತ್ಯ ಪಡೆಯಲು ಸಾಧ್ಯವಾಯಿತು. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ರ ಮೂಲಕ ರಾಮ ಜನ್ಮಭೂಮಿಗೆ ಕಾಲಿರಿಸುವ ಅವಕಾಶ ಸಿಕ್ಕಿತಲ್ಲದೇ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಧಾರ್ಮಿಕ ವಿಧಿ ನೆರವೇರಿಸಲು ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪವಿತ್ರ ಕ್ಷಣ ಎಂದಿದ್ದಾರೆ.