ಸಿಲಿಂಡರ್ ಗೆ ಬೈ ಬೈ.. ಒಲೆಯಲ್ಲೇ ಅಡುಗೆ! – ಮೋದಿ ಉಜ್ವಲ ಕನಸಿಗೆ ಕೊಳ್ಳಿ ಇಟ್ಟಿದ್ಯಾರು?

ಸಿಲಿಂಡರ್ ಗೆ ಬೈ ಬೈ.. ಒಲೆಯಲ್ಲೇ ಅಡುಗೆ! – ಮೋದಿ ಉಜ್ವಲ ಕನಸಿಗೆ ಕೊಳ್ಳಿ ಇಟ್ಟಿದ್ಯಾರು?

ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಡವರಿಗೆಂದು ಒಂದಷ್ಟು ಯೋಜನೆಗಳನ್ನ ಜಾರಿಗೆ ತರ್ತಾರೆ. ಒಂದಷ್ಟು ಕೋಟಿ ಹಣವನ್ನೂ ಮೀಸಲಿಡ್ತಾರೆ. ಆರಂಭ ಶೂರತ್ವ ಅನ್ನೋ ಹಾಗೇ ಶುರು ಮಾಡಿ ಬಳಿಕ ಅದನ್ನ ಮರೆತೇ ಬಿಡ್ತಾರೆ. ಪರಿಣಾಮ ಬಡವರಿಗೆ ಮತ್ತದೇ ಹೊರೆ ಬೀಳುತ್ತೆ. ಇದೀಗ ಎಲ್​ಪಿಸಿ ಸಿಲಿಂಡರ್ ಬಳಕೆಯೂ ಹಾಗೇ ಆಗಿದೆ. ಬಡಕುಟುಂಬಗಳಿಗೆ ಅನುಕೂಲ ಆಗ್ಲಿ ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆ ಅಡಿಯಲ್ಲಿ ಸಂಪರ್ಕ ಪಡೆದ ಕುಟುಂಬಗಳಿಗೆ ಸಹಾಯಧನ ಸಹಿತವಾಗಿ ಎಲ್‌ಪಿಜಿ ಸಿಲಿಂಡರ್ ಒದಗಿಸಲಾಗುತ್ತಿತ್ತು. ಈ ಯೋಜನೆ ಜಾರಿ ಆದ್ಮೇಲೆ ದೇಶದಾದ್ಯಂತ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ದಿಢೀರ್ ಹೆಚ್ಚಳವಾಗಿತ್ತು. ಆದ್ರೀಗ ಈ ಯೋಜನೆಗೆ ನೀಡಲಾಗುತ್ತಿದ್ದ ಸಹಾಯಧನವನ್ನು ಕಡಿತ ಮಾಡಲಾಗಿದೆ. ಸಿಲಿಂಡ‌ರ್ ದರವೂ ಏರಿಕೆಯಾಗಿದೆ. ಪರಿಣಾಮ ಉಜ್ವಲ ಯೋಜನೆಯಡೆ ಸಂಪರ್ಕ ಪಡೆದಿದ್ದವರಲ್ಲಿ 1 ಕೋಟಿಗೂ ಹೆಚ್ಚು ಜನರು ಎಲ್‌ಪಿಜಿ ಬಳಸೋದನ್ನೇ ಬಿಟ್ಟಿದ್ದಾರೆ.

ಇದನ್ನೂ ಓದಿ:  ಚುನಾವಣೆಗೂ ಮುನ್ನವೇ ಮೈತ್ರಿಯಲ್ಲಿ ಮುನಿಸು! – ಕ್ಷೇತ್ರಕ್ಕಾಗಿ ಇಂಡಿಯಾ ಕೂಟದಲ್ಲಿ ಕಚ್ಚಾಟ

ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ಉಜ್ವಲ ಯೋಜನೆ ಅಡಿಯಲ್ಲಿ ಹೊಸದಾಗಿ 9.58 ಕೋಟಿ ಸಂಪರ್ಕಗಳನ್ನು ನೀಡಲಾಗಿದೆ. ಆದರೆ ಅವುಗಳಲ್ಲಿ ಸಕ್ರಿಯವಾಗಿರುವ ಅಥವಾ ಎಲ್‌ಪಿಜಿ ಬಳಸುತ್ತಿರುವ ಸಂಪರ್ಕಗಳ ಸಂಖ್ಯೆ 8.41 ಕೋಟಿಯಷ್ಟು ಮಾತ್ರ. ಅಂದರೆ ಈ ಯೋಜನೆ ಅಡಿ ಸಂಪರ್ಕ ಪಡೆದವರಲ್ಲಿ ಶೇ 12.30ರಷ್ಟು ಜನರು ಎಲ್‌ಪಿಜಿಯನ್ನು ಬಳಸುತ್ತಲೇ ಇಲ್ಲ. ವರ್ಷದಲ್ಲಿ ಕನಿಷ್ಠ ಒಂದು ಸಿಲಿಂಡರ್ ಬಳಸುವ ಕುಟುಂಬವನ್ನೂ ಸಕ್ರಿಯ ಗ್ರಾಹಕ ಎಂದು ಕೇಂದ್ರ ಸರ್ಕಾರವು ಪರಿಗಣಿಸುತ್ತದೆ. ಅಂದರೆ 1.18 ಕೋಟಿ ಕುಟುಂಬಗಳಿಗೆ ವರ್ಷದಲ್ಲಿ ಒಂದು ಸಿಲಿಂಡ‌ರ್ ಅನ್ನೂ ಖರೀದಿಸಲು ಸಾಧ್ಯವಾಗಿಲ್ಲ. ಈ ಯೋಜನೆ ಅಡಿಯಲ್ಲಿ ವರ್ಷದಲ್ಲಿ 12 ಸಿಲಿಂಡರ್‌ಗಳನ್ನು ಸಹಾಯಧನ ಸಹಿತವಾಗಿ ಖರೀದಿಸಲು ಅವಕಾಶವಿದೆ. ಹೀಗಿದ್ದೂ, ಯೋಜನೆಯ ಬಹುತೇಕ ಫಲಾನುಭವಿಗಳು ವರ್ಷದಲ್ಲಿ ಒಂದು ಸಿಲಿಂಡ‌ರ್ ಮಾತ್ರ ಬಳಸುತ್ತಿದ್ದಾರೆ. ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಹೆಚ್ಚಾಗಿದ್ದರೂ, ಬಳಕೆ ಗಣನೀಯ ಪ್ರಮಾಣದಲ್ಲಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ.

ಅಸಲಿಗೆ ಎಲ್‌ಪಿಜಿ ಸಹಾಯಧನ ಕಡಿಮೆಯಾಗಿದ್ದರ ಜತೆಗೆ, ಸಿಲಿಂಡರ್ ದರ ಕೂಡ ಏರಿಕೆ ಆಗಿದೆ. 2023ರಲ್ಲಿ ಸಿಲಿಂಡ‌ರ್ ದರ ಗರಿಷ್ಠ ಮಟ್ಟ ತಲುಪಿದೆ. ಸಿಲಿಂಡರ್ ದರ ವಿಪರೀತ ಏರಿಕೆಯಾಗಿದ್ದೇ ಬಳಕೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ. ಹಾಗೇ 2021-22ರ ನಂತರ ಸಿಲಿಂಡರ್ ಮಾರಾಟದಲ್ಲಿನ ಏರಿಕೆಯ ಪ್ರಮಾಣವು ಕುಸಿತ ಕಂಡಿದೆ. ಆ ವರ್ಷದಲ್ಲಿ ಮಾರಾಟವಾದ ಹೆಚ್ಚುವರಿ ಸಿಲಿಂಡರ್‌ಗಳ ಸಂಖ್ಯೆ 2.63 ಕೋಟಿಯಷ್ಟು ಮಾತ್ರ. ಒಟ್ಟಾರೆ ಬಡಜನರಿಗೆ ಅನುಕೂಲ ಆಗಲಿ, ಹೊಗೆಮುಕ್ತ ದೇಶ ನಿರ್ಮಾಣವಾಗಲಿ ಎಂದು ಜಾರಿಗೆ ತಂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಳ್ಳ ಹಿಡಿಯುತ್ತಿದೆ. ಸಹಾಯಧನದ ಕೊರತೆಯಿಂದ ಫಲಾನುಭವಿಗಳು ಸಿಲಿಂಡರ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇನ್ನಾದ್ರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಸಹಾಯ ಧನ ನೀಡಬೇಕಿದೆ.

Shwetha M