ಅರಣ್ಯ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ – ಸ್ಕೂಟಿಯನ್ನು ಬಿಟ್ಟು ಮರ ಏರಿ ಗ್ರೇಟ್ ಎಸ್ಕೇಪ್ ಆದ ಸಿಬ್ಬಂದಿ!
ದಿನೇ ದಿನೆ ಕಾಡಾನೆಗಳ ಹಾವಳಿ ಜಾಸ್ತಿಯಾಗಿದೆ. ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟು ಭೀತಿ ಹುಟ್ಟಿಸುತ್ತಿದೆ. ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಕಾಡಾನೆ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಕಾಡಾನೆಯನ್ನು ಟ್ರ್ಯಾಕ್ ಮಾಡುತ್ತಿದ್ದ ವೇಳೆ ಕಾಫಿ ತೋಟದೊಳಗೆ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಯನ್ನೇ ಒಂಟಿಸಲಗವೊಂದು ಹಿಮ್ಮೆಟ್ಟಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಯತೀಂದ್ರ ಸ್ಪರ್ಧಿಸುತ್ತಾರಾ? – ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಹೌದು, ಸಕಲೇಶಪುರ ತಾಲ್ಲೂಕಿನ, ಯಡೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನೆ ಕಾರ್ಯಪಡೆ ಸಿಬ್ಬಂದಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ವೇಳೆ ಕರಡಿ ಹೆಸರಿನ ಒಂಟಿಸಲಗ ಘೀಳಿಡುತ್ತಾ ಇಟಿಎಫ್ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಹೋಗಿದೆ. ಕೂಡಲೇ ಸ್ಕೂಟಿಯನ್ನು ಬಿಟ್ಟು ಓಡಿ ಹೋಗಿ ಇಟಿಎಫ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಕೆಲಕಾಲ ಕಾಫಿ ಗಿಡದ ಮರೆಯಲ್ಲಿ ನಿಂತ ಕಾಡಾನೆ ಮುಂದೆ ಸಾಗಿದೆ. ಮರದ ಮೇಲೆ ಕುಳಿತು ಕಾಡಾನೆಯ ವಿಡಿಯೋವನ್ನು ಇಟಿಎಫ್ ಸಿಬ್ಬಂದಿ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನೊಂದೆಡೆ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು ಬಲಿ ಪಡೆದಿದ್ದ ನರಹಂತಕ ಸೀಗೆ ಹೆಸರಿನ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಅರಣ್ಯ ಇಲಾಖೆ ಆರ್ಆರ್ಟಿ ಹಾಗೂ ಇಟಿಎಫ್ ಸಿಬ್ಬಂದಿ ಕಾಡಾನೆ ಚಲನವಲನ ಗಮನಿಸುತ್ತಿದ್ದು, ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆಯಲಿದೆ.
ಶನಿವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಭಾನುವಾರ ಮತ್ತು ಇಂದು ಎರಡು ದಿನ ಅರಣ್ಯ ಇಲಾಖೆ ಬಿಡುವು ನೀಡಿದ್ದು ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿಯಲು ಇಟಿಎಫ್ ಸಿಬ್ಬಂದಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.