ಸಂತು ಪಂತು ಗೆಳೆತನಕ್ಕೆ ಸಾಕ್ಷಿಯಾದ ಬಿಗ್ಬಾಸ್ – ಸ್ನೇಹಿತರ ಮನದಾಳದ ಮಾತು ಕೇಳಿ ಕಿಚ್ಚ ಸುದೀಪ್ ಭಾವುಕ
ಬಿಗ್ಬಾಸ್ ಕನ್ನಡ ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈ ವಾರ ಎಲಿಮಿನೇಷನ್ನಲ್ಲಿ ಸುದೀಪ್ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯದಾಗಿ ಸಂತು ಪಂತು ಉಳಿದುಕೊಂಡಿದ್ದರು. ಆಪ್ತ ಗೆಳೆಯರಾದ ಇಬ್ಬರೂ ಕೂಡಾ ಒಬ್ಬರಿಗೊಬ್ಬರು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಈ ಭಾವನಾತ್ಮಕ ಸನ್ನಿವೇಶ ನೋಡಿ ಸ್ವತಃ ಕಿಚ್ಚಸುದೀಪ್ ಕೂಡಾ ಭಾವುಕರಾದರು. ಕೊನೆಗೂ ಇಬ್ಬರ ಗೆಳೆತನ ಈ ವಾರವೂ ಮುಂದುವರೆಯಲಿದೆ ಎಂಬ ಮೂಲಕ ಎಲಿಮಿನೇಷನ್ ನಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ ಸುದೀಪ್.
ಇದನ್ನೂ ಓದಿ: ಬಿಗ್ಬಾಸ್ ಫಿನಾಲೆ ಟಿಕೆಟ್ ಪಡೆದ ಸಂಗೀತಾ – ಮುಂದಿನ ವಾರವೂ ಕ್ಯಾಪ್ಟನ್ ಆಗಿ ಆಯ್ಕೆಯಾದ ರೆಬೆಲ್ ರಾಣಿ
ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರು ಶುಕ್ರವಾರದ ಎಪಿಸೋಡ್ನಲ್ಲಿ ಒಟ್ಟಿಗೆ ಕುಳಿತು ಮಾತನಾಡುವಾಗ ಗಳಗಳನೆ ಅತ್ತಿದ್ದರು. ಇಬ್ಬರಲ್ಲಿ ಒಬ್ಬರು ಹೋಗುತ್ತೇವೆ ಅನ್ನೋದು ಅವರಿಗೂ ಗೊತ್ತಾಗಿತ್ತು. ಆದರೆ, ಕೊನೇ ಗಳಿಗೆಯಲ್ಲಿ ಕಿಚ್ಚ ಸುದೀಪ್ ಟ್ವಿಸ್ಟ್ ಕೊಟ್ಟರು. ಯಾರನ್ನೂ ಎಲಿಮಿನೇಷನ್ ಮಾಡಿಲ್ಲ. ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಹೇಳಿದರು. ಸುದೀಪ್ ಮಾತು ಕೇಳಿ ಇಬ್ಬರೂ ಗಳಗಳನೆ ಅತ್ತರು. ‘ನಿಮಗೆ ಕೋಟಿ ಕೋಟಿ ಧನ್ಯವಾದ. ಕಳೆದುಕೊಂಡು ಬಿಡ್ತೀನಿ ಎನ್ನುವ ಭಯ ಕಾಡುತ್ತಿತ್ತು. ನಿಮ್ಮಿಬ್ಬರಲ್ಲಿ ಯಾರು ಎದ್ದು ಹೋಗ್ತೀರಾ ಎಂದು ಕೇಳಿದ್ರೆ ನಾನು ಎದ್ದು ಹೋಗುತ್ತಿದೆ. ಇವರನ್ನು ಕಳಿಸಿ ಇಲ್ಲಿ ಇರೋಕೆ ಆಗುತ್ತಿರಲಿಲ್ಲ. ಇದ್ದಷ್ಟು ದಿನ ಎಲ್ಲರನ್ನೂ ರಂಜಿಸುತ್ತೇವೆ’ ಎಂದು ತುಕಾಲಿ ಸಂತೋಷ್ ಶಪಥ ಮಾಡಿದರು. ಈ ಭಾವುಕ ಕ್ಷಣವನ್ನು ಎಲ್ಲರೂ ಕಣ್ತುಂಬಿಕೊಂಡರು. ಇದನ್ನು ನೋಡುತ್ತಿದ್ದ ಸುದೀಪ್ ಅವರು ಭಾವುಕರಾದರು.
ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಸಂಕ್ರಾಂತಿ ಸಿಹಿ ಸಿಕ್ಕಿದೆ. ಯಾರನ್ನೂ ಎಲಿಮಿನೇಷನ್ ಮಾಡಿಲ್ಲ. ಆದರೆ, ಈ ವಾರ ದೊಡ್ಮನೆ ಬೆಂಕಿಯಲ್ಲಿ ಬೇಯುತ್ತಿದೆ. ಇಷ್ಟು ದಿನ ಗೆಳೆಯರು ಅಂದುಕೊಂಡವರ ಸಿಟ್ಟು ಬೆಂಕಿಯಾಗಿದೆ. ಈ ಬಾರಿಯ ನಾಮಿನೇಷನ್ನಲ್ಲಿ ತಾವು ಸೂಚಿಸುವ ಸ್ಪರ್ಧಿಯ ಹೆಸರಿನ ಫೋಟೋವನ್ನು ಸುಡಬೇಕಿತ್ತು. ಈ ವೇಳೆ ತನಿಷಾ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡಿದ್ದಾರೆ. ಸಂಗೀತಾ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ.