ನಮ್ಮ ಮೆಟ್ರೋದ ಮಹಿಳಾ ಪ್ರಯಾಣಿಕರಿಗೆ ಗುಡ್ನ್ಯೂಸ್! – ಒಂದಲ್ಲ ಎರಡು ಬೋಗಿ ಮೀಸಲು!
ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದು, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರೈಲಿನಲ್ಲಿ ಎರಡು ಕೋಚ್ಗಳನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಿದೆ.
ಹೌದು, ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಮಹಿಳೆಯ ಮೇಲೆ ಕಿರುಕುಳದ ಪ್ರಕರಣಗಳು ವರದಿಯಾಗುತ್ತಿದೆ. ಈ ಬೆನ್ನಲ್ಲೇ ಬಿಎಂಆರ್ಸಿಎಲ್ ಎಚ್ಚೆತ್ತುಕೊಂಡಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಮಹಿಳೆಯರಿಗೆ 2 ಬೋಗಿ ಮೀಸಲಿಡಲು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: ಮೂರು ಸಿಂಹ.. ಒಂದು ಮುಂಗುಸಿ ನಡುವೆ ಬಿಗ್ ಫೈಟ್! – ದೊಡ್ಡ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ?
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ಯುವಕನೊಬ್ಬ ಹಿಂಬದಿಯಿಂದ ಖಾಸಗಿ ಅಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿಯೊಬ್ಬಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಳು. ಅಲ್ಲದೆ, ವಿಚಾರ ತಿಳಿದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದಿದ್ದರು. ಈ ವೇಳೆ ಯುವತಿ ಮುಂದೆ ಆತ ತಪ್ಪೊಪ್ಪಿಕೊಂಡಿದ್ದನು.
ನವೆಂಬರ್ 20 ರಂದು ಇದೇ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ, ಕೆಂಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ಕೊಟ್ಟಿದ್ದರ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಡಿಸೆಂಬರ್ 7 ರಂದು ರಾಜಾಜಿನಗರಲ್ಲಿ ಮೆಟ್ರೋ ಹತ್ತಿದ್ದ ಯುವತಿಗೆ ಯುವಕನೊಬ್ಬ ಹಿಂಬದಿಯಿಂದ ಬಂದು ಆಕೆಯ ದೇಹವನ್ನ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದ. ಈ ರೀತಿಯ ಪ್ರಕರಣ ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳಿಗೆ ಮೆಟ್ರೋ ಎಷ್ಟು ಸುರಕ್ಷಿತ ಅನ್ನೋ ಆತಂಕಭರಿತ ಪ್ರಶ್ನೆ ಮೂಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಎಂಆರ್ಸಿಎಲ್ ಕ್ರಮಕೈಗೊಂಡಿದೆ.