ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು! – ರಾಮಮಂದಿರ ಟ್ರಸ್ಟ್ ನೀಡಿರೋ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಣೆ
ದೇಶದೆಲ್ಲೆಡೆ ರಾಮನಾಮ ಸ್ಮರಣೆ ಮುಗಿಲು ಮುಟ್ಟಿದೆ. ಮನೆ ಮನೆಗೂ ಮಂತ್ರಾಕ್ಷತೆ ಸೇರುತ್ತಿದೆ. ಇಡೀ ರಾಷ್ಟ್ರವೇ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ದಿನಕ್ಕಾಗಿ ಎದುರು ನೋಡ್ತಿದೆ. ಆದ್ರೀಗ ರಾಮ ಮತ್ತು ರಾಮಮಂದಿರ ಬರೀ ಧಾರ್ಮಿಕ ವಿಚಾರವಾಗಿ ಉಳಿದಿಲ್ಲ. ರಾಜಕೀಯ ಕೆಸರೆರಚಾಟಕ್ಕೆ ಅಸ್ತ್ರವಾಗಿದೆ. ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ಗುದ್ದಾಟ ತಾರಕಕ್ಕೇರಿದೆ. ಒಂದ್ಕಡೆ ಬಿಜೆಪಿ ನಮ್ಮಿಂದಲೇ ರಾಮಮಂದಿರ ಅಂತಾ ಬೀಗುತ್ತಿದ್ರೆ ಇತ್ತ ಕಾಂಗ್ರೆಸ್ ನಾವು ಉದ್ಘಾಟನಾ ಕಾರ್ಯಕ್ರಮಕ್ಕೆ ಬರೋದೇ ಇಲ್ಲ ಅಂತಾ ತಿರುಗೇಟು ನೀಡಿದ್ದಾರೆ. ಇದೇ ಈಗ ಜಟಾಪಟಿಗೂ ಕಾರಣವಾಗಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮೊಳಗಲಿದೆ ಕನ್ನಡದ ಹಾಡು! – ರಾಮ ಪ್ರಾಣಪ್ರತಿಷ್ಠೆ ವೇಳೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಪ್ರಸಾರ!
ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ವಿಚಾರವಾಗಿ ಕಾಂಗ್ರೆಸ್ ಪಕ್ಷ ಅಳೆದೂ ತೂಗಿ ನಿರ್ಧಾರ ಕೈಗೊಂಡಿದೆ. ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ತೀರ್ಮಾನಿಸಿದೆ. ಇದು ಬಿಜೆಪಿ ಹಾಗೂ ಆರ್ಎಸ್ಎಸ್ನ ಚುನಾವಣಾ ಕಾರ್ಯಕ್ರಮ ಎಂದು ಲೇವಡಿ ಮಾಡಿರುವ ಕಾಂಗ್ರೆಸ್, ಧರ್ಮಾಧಾರಿತ ಕಾರ್ಯಕ್ರಮಗಳಿಂದ ದೂರ ಉಳಿಯೋದಾಗಿ ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಧರ್ಮ ವೈಯಕ್ತಿಕ ವಿಷಯ. ಆದರೆ, ಬಿಜೆಪಿ, RSS ಅಯೋಧ್ಯೆಯ ಮಂದಿರ ವಿಷಯವನ್ನು ರಾಜಕೀಯ ವಿಷಯ ಮಾಡಿದ್ದಾರೆ. ದೇವಾಲಯ ಪೂರ್ಣವಾಗದೆ ಇದ್ದರೂ ಉದ್ಘಾಟನೆ ಮಾಡುತ್ತಿದ್ದಾರೆ. ಹೀಗಾಗಿ ಅಯೋಧ್ಯೆ ರಾಮಮಂದಿರ ಟ್ರಸ್ಟ್ ನೀಡಿರೋ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಅವರ ತೀರ್ಮಾನ ಸರಿಯಾಗಿದೆ. ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ 140 ಕೋಟಿ ಜನತೆಗೆ ಅಗೌರವ ಉಂಟು ಮಾಡಿದ್ದಾರೆ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್ಸಿಗರ ಈ ವರ್ತನೆ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಕಾಂಗ್ರೆಸ್ ಪಕ್ಷ ಪಶ್ಚಾತ್ತಾಪ ಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗೇ ರಾಜ್ಯ ನಾಯಕರು ಕೂಡ ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿದ್ದಾರೆ. ರಾಮಮಂದಿರ ಆಮಂತ್ರಣ ತಿರಸ್ಕರಿಸಿದವರನ್ನು ದೇಶದ ಜನರೇ ತಿಸ್ಕರಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ಹಾಗೇ ಬಿ.ಎಸ್ ಯಡಿಯೂರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್ ಈಶ್ವರಪ್ಪ, ಆರ್. ಅಶೋಕ್, ಬಿವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷದ ಈ ನಿಲುವು ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಹಿಂದೆ ಕಾಂಗ್ರೆಸ್ ಪಕ್ಷವು ನ್ಯಾಯಾಲಯದಲ್ಲಿ ಶ್ರೀರಾಮ ಓರ್ವ ಕಲ್ಪಿತ ಪಾತ್ರ ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ನೂತನ ಸಂಸತ್ ಭವನದ ಭೂಮಿ ಪೂಜೆಯಿಂದಲೂ ದೂರ ಉಳಿದಿದ್ದರು. ಸಂಸತ್ ಭವನ ಉದ್ಘಾಟನಾ ಸಮಾರಂಭದಿಂದ ಬಹುತೇಕ ವಿರೋಧ ಪಕ್ಷಗಳು ದೂರ ಉಳಿದಿದ್ದವು. ಈ ಮೂಲಕ ಹಿಂದೂ ವಿರೋಧಿ ಅನ್ನೋ ಹಣೆಪಟ್ಟಿಯನ್ನ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಅಂಟಿಸಿಕೊಳ್ಳುವಂತಾಯ್ತು. ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದೂ ವಿರೋಧಿ ನಿಲುವು ಮುಳುವಾಗಬಹುದು ಅನ್ನೋ ಲೆಕ್ಕಾಚಾರಗಳು ಕೇಳಿ ಬರ್ತಿವೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಂಥಾ ದೊಡ್ಡ ರಾಜ್ಯಗಳಲ್ಲಿನ ಜನತೆಯ ಭಾವನೆಗೆ ಧಕ್ಕೆ ಉಂಟಾಗಬಹುದು. ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ನಾಯಕರು ರಾಮಮಂದಿರ ವಿಚಾರವಾಗಿ ಅಳೆದು ತೂಗಿ ಹೇಳಿಕೆ ನೀಡ್ತಿದ್ದಾರೆ. ಮತ್ತೊಂದೆಡೆ ಜನವರಿ 22 ರಂದು ಅಯೋಧ್ಯೆಯ ರಾಮಲಲ್ಲಾನನ್ನು ‘ರಮಾನಂದ ಪಂಥದ ಸಂಪ್ರದಾಯ’ದ ಪ್ರಕಾರ ಪ್ರಾಣ ಪ್ರತಿಷ್ಠಾಪನೆ ಮಾಡಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಟ್ರಸ್ಟ್ನ ಈ ನಿರ್ಧಾರವು ಇದೀಗ ವಿವಾದಕ್ಕೆ ಕಾರಣವಾಗಿದೆ. ರಾಮ ಮಂದಿರವು ರಮಾನಂದರ ಪಂಥಕ್ಕೆ ಸೇರಿದ್ದು, ಶೈವ ಶಾಕ್ತ ಮತ್ತು ಸನ್ಯಾಸಿಗಳದ್ದಲ್ಲ. ರಮಾನಂದರ ಸಂಪ್ರದಾಯದಂತೆಯೇ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಆದ್ರೆ ರಮಾನಂದ ಪಂಥದ ಸಂಪ್ರದಾಯದಂತೆ ಪ್ರಾಣ ಪ್ರತಿಷ್ಠಾಪನೆ ಮಾಡೋದಕ್ಕೆ ದೇಶದ ಶಂಕರಾಚಾರ್ಯರ ಪೀಠದ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಶಂಕರಾಚಾರ್ಯರ ನಾಲ್ಕು ಪೀಠಗಳ ಪೈಕಿ ಮೂರು ಪೀಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಆದರೆ ಶೃಂಗೇರಿ ಶಾರದಾ ಪೀಠದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.