14 ಹಾಲಿ ಸಂಸದರಿಗೆ ಬಿಜೆಪಿ ಕೊಕ್ – ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ಫಿಕ್ಸ್

14 ಹಾಲಿ ಸಂಸದರಿಗೆ ಬಿಜೆಪಿ ಕೊಕ್ – ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ಫಿಕ್ಸ್

ನರೇಂದ್ರ ಮೋದಿಯವರನ್ನ ಮೂರನೇ ಬಾರಿಗೆ ಪ್ರಧಾನಿಯಾಗಿ ಮಾಡಬೇಕು ಅನ್ನೋದು ಬಿಜೆಪಿ ನಾಯಕರ ಹೆಬ್ಬಯಕೆ. ಮತ್ತೊಂದೆಡೆ ಮೋದಿಯನ್ನ ಮನೆಗೆ ಕಳಿಸಿ ವಿಪಕ್ಷಗಳ ಜೊತೆಗೂಡಿಯಾದ್ರೂ ದೇಶವನ್ನ ಆಳಬೇಕು ಅನ್ನೋದು ಕಾಂಗ್ರೆಸ್ಸಿಗರ ಮಹದಾಸೆ. ಆದ್ರೆ ಚುನಾವಣೆ ಹತ್ತಿರವಾದಂತೆಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ಕಬ್ಬಿಣದ ಕಡಲೆಯಾಗುತ್ತಿದೆ. ಎರಡೂ ಪಕ್ಷಗಳಲ್ಲಿ ವಿಶ್ವಾಸದ ಕೊರತೆ ಎದುರಾಗಿದ್ದು, ಬಿಜೆಪಿಯ ಹಲವು ಹಾಲಿ ಸದಸ್ಯರು ಮತೊಮ್ಮೆ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್‌ನಲ್ಲೂ ಸಚಿವರು ಲೋಕಸಭೆಗೆ ಸ್ಪರ್ಧಿಸೋಕೆ ಹಿಂದೆ ಸರಿಯುತ್ತಿದ್ದಾರೆ. ಆದ್ರೆ ಬಿಜೆಪಿಯಲ್ಲಿ ಮಾತ್ರ ಹಲವು ಹಾಲಿ ಸಚಿವರಿಗೆ ಕೊಕ್ ಕೊಡೋದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ: ಸುಮಲತಾ ಮತ್ತು ನಿಖಿಲ್ ಜಟಾಪಟಿಗೆ ಮತ್ತೆ ಸಾಕ್ಷಿಯಾಗುತ್ತಾ ಮಂಡ್ಯ ಅಖಾಡ – ನಿಖಿಲ್ ಮೈತ್ರಿ ಅಭ್ಯರ್ಥಿಯಾಗೋದು ಪಕ್ಕಾನಾ..?

ಹೊಸ ನಾಯಕರನ್ನ ಕಣಕ್ಕಿಳಿಸಿ ಗೆಲ್ಲಿಸುವ ಬಿಜೆಪಿ ಹೈಕಮಾಂಡ್ ಫಾರ್ಮುಲ ಹಲವೆಡೆ ವರ್ಕೌಟ್ ಆಗಿದೆ. ಹೀಗಾಗಿ ಕರ್ನಾಟಕದಲ್ಲಿ ಅರ್ಧದಷ್ಟು ಹಾಲಿ ಸಂಸದರಿಗೆ ಬದಲಾಗಿ ಹೊಸಬರಿಗೆ ಆದ್ಯತೆ ನೀಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ವಯಸ್ಸು ಮತ್ತು ಆಡಳಿತ ವಿರೋಧಿ ಅಲೆ ಟಿಕೆಟ್ ನಿರಾಕರಣೆಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಕೆಲವರು ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಈಗಾಗಲೇ ಆಂತರಿಕ ಸಮೀಕ್ಷೆ ನಡೆಸಿರುವ ಬಿಜೆಪಿ 14 ಸಂಸದರ ಕಾರ್ಯವೈಖರಿ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿರುವುದು ಮತ್ತು ಜನಪ್ರಿಯತೆ ಕಡಿಮೆಯಾಗಿರುವುದನ್ನು ಗುರುತಿಸಿದೆ. ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಬೆಂಗಳೂರು ಉತ್ತರ, ವಿಜಯಪುರ, ಹಾವೇರಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಚಿಕ್ಕೋಡಿ, ಚಾಮರಾಜನಗರ ಮತ್ತು ಬೆಳಗಾವಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕೋದು ಹೊಸದೇನೂ ಅಲ್ಲ. ಇತ್ತೀಚೆಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದ್ರು. ಅಷ್ಟೇನೂ ಜನಪ್ರಿಯತೆ ಹೊಂದಿಲ್ಲದ ಮುಖಗಳನ್ನು ಬಿಜೆಪಿ ಕಣಕ್ಕಿಳಿಸಿತ್ತು ಮತ್ತು ಯಶಸ್ವಿಯಾಗಿತ್ತು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇಂತಹುದೇ ಪ್ರಯೋಗ ಮಾಡಲು ಹೊಗಿ ಎಡವಟ್ಟು ಮಾಡಿಕೊಂಡಿತ್ತು. ಬಹುಮತದ ಸರ್ಕಾರದಿಂದ ಕೇವಲ 65 ಸ್ಥಾನಗಳಿಗೆ ಕುಸಿದಿತ್ತು. ಹೀಗಾಗಿ ಇದು ಕಂಪ್ಲೀಟ್ ವರ್ಕೌಟ್ ಆಗುತ್ತೆ ಅಂತಾನೂ ಹೇಳೋಕೆ ಆಗಲ್ಲ. ಆದ್ರೂ ಕೆಲ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಕೊಕ್ ನೀಡಲೇಬೇಕಾದ ಅನಿವಾರ್ಯತೆ ಇದೆ.

ಎಲ್ಲೆಲ್ಲಿ ಹೊಸ ಮುಖಗಳು?  

ಚಾಮರಾಜನಗರ ಕ್ಷೇತ್ರದ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದಗೌಡ ಅವರೂ ನಿವೃತ್ತಿ ಘೋಷಿಸಿದ್ದರು. ಆದರೆ ಮತ್ತೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದು ಅಷ್ಟೊಂದು ಸುಲಭ ಅಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ವಿಧಾನಭಾ ಚುನಾವಣೆಯಲ್ಲಿ ಸೋತ ಡಜನ್‌ಗೂ ಹೆಚ್ಚು ಅಭ್ಯರ್ಥಿಗಳು ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ವಿ.ಸೋಮಣ್ಣ, ಡಾ. ವಿ. ಸುಧಾಕರ್, ಸಿ.ಟಿ. ರವಿ, ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಎಂ.ಪಿ ರೇಣುಕಾಚಾರ್ಯ ಪ್ರಯತ್ನ ನಡೆಸಿದ್ದಾರೆ. ಸಂಸತ್ ಭವನದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎನ್ನಲಾಗುತ್ತಿದೆ. ಹಾಗಂತ ಕಾಂಗ್ರೆಸ್‌ನಲ್ಲೂ ಪರಿಸ್ಥಿತಿ ಏನು ಭಿನ್ನವಾಗಿಲ್ಲ. ಇಲ್ಲಿ ಹೊಸಬರಿಗಿಂತ ಸಚಿವರು ಮತ್ತು ಶಾಸಕರು ತಮ್ಮ ರಕ್ತಸಂಬಂಧಿಗಳಿಗೆ ಟಿಕೆಟ್ ಕೊಡಿಸಲು ಉತ್ಸುಕರಾಗಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೇಳಿದ್ದಾರೆ. ಸತೀಶ್ ಜಾರಕಿಹೊಳಿ ತಮ್ಮ ಪುತ್ರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಎದುರಿಸಲು ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಹಲವು ಕ್ಷೇತ್ರಗಳಲ್ಲಿ ಇಂಥದ್ದೇ ಪರಿಸ್ಥಿತಿ ಇದೆ. ಅದೇನೇ ಇದ್ರೂ ಚುನಾವಣೆ ಎದುರಿಸೋಕೆ ಸಜ್ಜಾಗ್ತಿರೋ ಮೂರೂ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿದೆ. ಅದ್ರಲ್ಲೂ ಕಳೆದ ಬಾರಿ 25 ಕ್ಷೇತ್ರಗಳನ್ನ ಗೆದ್ದಿದ್ದ ಬಿಜೆಪಿ ಈ ಸಲವೂ ಅದೇ ಫಾರ್ಮ್ ಉಳಿಸಿಕೊಳ್ಳೋಕೆ ನಾನಾ ಕಸರತ್ತು ಮಾಡ್ತಿದೆ. ಅದರ ಭಾಗವಾಗಿಯೇ ಹಲವು ಹಾಲಿ ಸಂಸದರಿಗೆ ಕೊಕ್ ಕೊಡಲು ತೀರ್ಮಾನಿಸಿದೆ. ಆದ್ರೆ ಹೊಸ ಮುಖಗಳನ್ನ ಮತದಾರರು ಒಪ್ಪಿಕೊಳ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

 

Sulekha