ಮಂಡ್ಯದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ರೂ ನಿಖಿಲ್ ಮುಂದೆ ಸಾಲು ಸಾಲು ಸವಾಲು – ಲೋಕಸಭೆ ಗೆಲ್ಲೋದು ಅಷ್ಟು ಸುಲಭವಿಲ್ಲ

ಮಂಡ್ಯದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ರೂ ನಿಖಿಲ್ ಮುಂದೆ ಸಾಲು ಸಾಲು ಸವಾಲು – ಲೋಕಸಭೆ ಗೆಲ್ಲೋದು ಅಷ್ಟು ಸುಲಭವಿಲ್ಲ

ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆಗಳಲ್ಲೂ ಸೋಲು ಕಂಡಿದ್ದ ನಿಖಿಲ್​ಗೆ​ ರಾಜಕೀಯದಲ್ಲಿ ಮುಂದುವರೆಯಬೇಕಾ ಅಥವಾ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಬೇಕಾ ಅನ್ನೋ ಗೊಂದಲ ಶುರುವಾಗಿತ್ತು. ಹೀಗಾಗಿ 2024ರ ಲೋಕಸಭಾ ಚುನಾವಣೆ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಕೊನೆಯ ವೇದಿಕೆಯಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಆದ್ರೆ ನಿಖಿಲ್ ಮತ್ತೆ ಮಂಡ್ಯದ ಅಭ್ಯರ್ಥಿಯಾದ್ರೆ ಗೆಲುವು ಅಷ್ಟು ಸುಲಭವೂ ಇಲ್ಲ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷ ಮಂಡ್ಯ ಕ್ಷೇತ್ರ ತಮಗೇ ಬೇಕೆಂದು ಪಟ್ಟು ಹಿಡಿದಿದೆ. ಬಿಜೆಪಿಗೆ ಮಂಡ್ಯದಲ್ಲಿ ಅಷ್ಟೇನು ಪ್ರಾಬಲ್ಯ ಇಲ್ಲದ ಕಾರಣ ಸಕ್ಕರೆನಾಡನ್ನ ಬಹುತೇಕ ಜೆಡಿಎಸ್​ಗೇ ಒಪ್ಪಿಸಲಿದೆ. ಒಂದು ವೇಳೆ ಮಂಡ್ಯ ಜೆಡಿಎಸ್​ಗೆ ಸಿಕ್ಕಿ ನಿಖಿಲ್ ಅಭ್ಯರ್ಥಿಯಾದ್ರೂ ಪೈಪೋಟಿ ಜೋರಾಗಿರಲಿದೆ. ಯಾಕಂದ್ರೆ ಕಳೆದ ಬಾರಿಯೇ ಪಕ್ಷೇತರ ಅಭ್ಯರ್ಥಿಯಾಗಿ ನಿಖಿಲ್​ ಎದುರು ಗೆದ್ದು ಬೀಗಿದ್ದ ಸುಮಲತಾ ಈಗ ಮತ್ತೊಮ್ಮೆ ಅದೇ ಕ್ಷೇತ್ರದಿಂದಲೇ ಅಖಾಡಕ್ಕಿಳಿಯೋದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ರೂ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಮಂಡ್ಯವನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. 7 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಗೆದ್ದಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್ ಬೆಂಬಲವಾಗೇ ಇದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಲೋಕಸಭೆ ಗೆಲ್ಲೋಕೆ ರಣತಂತ್ರ ಹೂಡ್ತಿದ್ದಾರೆ. ಮಾಜಿ ಸಂಸದೆ ರಮ್ಯರನ್ನ ಮತ್ತೊಮ್ಮೆ ಕಣಕ್ಕಿಳಿಸೋ ಮಾತುಗಳೂ ನಡೆಯುತ್ತಿದೆ. ಇಲ್ಲದಿದ್ರೆ ಸುಮಲತಾರನ್ನ ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ಟಿಕೆಟ್ ಕೊಡೋ ಚಿಂತನೆಯೂ ಇದೆ. ಇದೆರಡೂ ಆಗದೇ ಇದ್ದ ಪಕ್ಷದಲ್ಲಿ ಸಚಿವ ಚಲುವರಾಯಸ್ವಾಮಿಯನ್ನೇ ಅಖಾಡಕ್ಕಿಳಿಸೋ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದ ನಿಖಿಲ್ ಗೆಲುವು ಈ ಬಾರಿಯೂ ಕಷ್ಟವಾಗಬಹುದು.

ಸದ್ಯ ರಾಜಕೀಯದಲ್ಲಿ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಅಖಾಡವಾಗಿದೆ. ಹೀಗಾಗಿ ಈ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬುದು ಎಲ್ಲ ಪಕ್ಷಗಳ ಲೆಕ್ಕಾಚಾರವಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​ ಹೆಸ್ರು ಚರ್ಚೆಯಾಗ್ತಿದ್ದಂತೆ ಕಾಂಗ್ರೆಸ್ ಕೂಡ ಅಲರ್ಟ್ ಆಗಿದೆ. ಪ್ರಬಲ ನಾಯಕನನ್ನೇ ಕಣಕ್ಕಿಳಿಸೋಕೆ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಸುಮಲತಾ ಪಕ್ಷೇತರವಾಗಿ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಮಂಡ್ಯ ಕ್ಷೇತ್ರ ಮತ್ತಷ್ಟು ರಂಗು ಪಡೆದುಕೊಂಡಿದ್ದು ಈಗಿನಿಂದಲೂ ಕಾವು ಪಡೆದುಕೊಳ್ತಿದೆ.

Shantha Kumari