ಮಂಡ್ಯದಿಂದ ಮತ್ತೊಮ್ಮೆ ಲೋಕಸಭೆ ಅಖಾಡಕ್ಕಿಳೀತಾರಾ ನಿಖಿಲ್ – ಪುತ್ರನನ್ನ ಗೆಲ್ಲಿಸಿ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ತಾರಾ ಕುಮಾರಣ್ಣ?

ಪ್ರಾದೇಶಿಕ ಪಕ್ಷವಾಗಿರುವ ಜನತಾದಳಕ್ಕೆ ಬಹುಮತ ಸಿಗದಿದ್ರೂ ಎರಡೆರಡು ಸಲ ಕರ್ನಾಟಕದ ಸಿಎಂ ಆದವ್ರು ಹೆಚ್.ಡಿ ಕುಮಾರಸ್ವಾಮಿ. ಆದ್ರೀಗ ಅದೇ ಕುಮಾರಣ್ಣನಿಗೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ್ದೇ ಚಿಂತೆ. ಇರುವ ಒಬ್ಬ ಮಗನನ್ನ ರಾಜಕೀಯ ಮುನ್ನಲೆಗೆ ತರೋಕೆ ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಕಳೆದ ಐದು ವರ್ಷಗಳ ಹಿಂದೆಯೇ ಲೋಕಸಭಾ ಅಖಾಡಕ್ಕಿಳಿಸಿ ಸಂಸತ್ತಿಗೆ ಕಳಿಸೋಕೆ ಭರ್ಜರಿ ವೇದಿಕೆ ಸಿದ್ಧ ಮಾಡಿದ್ರು. ಗೌಡ್ರ ಭದ್ರಕೋಟೆ ಅಂತಾ ಕರೆಸಿಕೊಳ್ಳುವ ಮಂಡ್ಯ ಅಖಾಡದಿಂದ್ಲೇ ಕಣಕ್ಕಿಳಿಸಿದ್ರು. ತಾವೇ ಮುಖ್ಯಮಂತ್ರಿ ಆಗಿದ್ರಿಂದ ಗೆಲುವು ಫಿಕ್ಸ್ ಅನ್ಕೊಂಡಿದ್ರು. ಆದ್ರೆ ಸುಮಲತಾ ಅಂಬರೀಶ್ ಎದುರು ಅದೃಷ್ಟ ನಿಖಿಲ್ ಕೈ ಹಿಡೀಲಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಅನಿತಾ ಕುಮಾರಸ್ವಾಮಿಯವ್ರೇ ತಮ್ಮ ಮಗನಿಗೆ ಕ್ಷೇತ್ರ ತ್ಯಾಗ ಮಾಡಿದ್ರು. ಬಟ್ ಬ್ಯಾಡ್ಲಕ್ ಇಲ್ಲೂ ನಿಖಿಲ್ಗೆ ಸೋಲಾಯ್ತು. ಇದೀಗ ಮೂರನೇ ಸಲ ಮತ್ತೆ ವೇದಿಕೆ ಸಿದ್ಧವಾಗ್ತಿದೆ.
ಇದನ್ನೂ ಓದಿ : ದೇಶದಾದ್ಯಂತ ಕೊರೊನಾ ಆರ್ಭಟ – ಕರ್ನಾಟಕದಲ್ಲೇ ರೂಪಾಂತರಿ ಜೆಎನ್.1 ಗರಿಷ್ಠ ಕೇಸ್!
ನಿಖಿಲ್ ಕುಮಾರಸ್ವಾಮಿಗೆ ಅದ್ಯಾಕೋ ರಾಜಕೀಯ ಪ್ರವೇಶ ಅಗ್ನಿಪರೀಕ್ಷೆಯಾಗ್ತಿದೆ. ಲೋಕಸಭೆ ಚುನಾವಣೆಯಲ್ಲೂ ಸೋಲು. ವಿಧಾನಸಭಾ ಚುನಾವಣೆಯಲ್ಲೂ ಸೋಲು. ಎರಡು ಎಲೆಕ್ಷನ್ಗಳಿಂದ ತೀವ್ರ ಮುಖಭಂಗ ಅನುಭವಿಸಿರುವ ನಿಖಿಲ್ ಸದ್ಯ ಸಿನಿಮಾ ಫೀಲ್ಡ್ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ತಮ್ಮ ಪುತ್ರನನ್ನ ರಾಜಕೀಯಕ್ಕೆ ತರಲೇಬೇಕು ಅಂತಾ ಪಣ ತೊಟ್ಟಿರುವ ಕುಮಾರಣ್ಣ ದಿಲ್ಲಿಯವರೆಗೂ ತಂತ್ರಗಾರಿಕೆ ಮಾಡ್ತಿದ್ದಾರೆ. ಈ ಸಲ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಸೇರಿದಂತೆ ನಾಲ್ಕು ಕ್ಷೇತ್ರಗಳನ್ನ ತಮಗೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ಹಿಂದೆ ಮಂಡ್ಯದಿಂದ ತಮ್ಮ ಪುತ್ರ ನಿಖಿಲ್ನನ್ನ ಕಣಕ್ಕಿಳಿಸೋ ಪ್ಲ್ಯಾನ್ ಇದೆ ಎನ್ನಲಾಗ್ತಿದೆ. ಹಾಗೇ ಜೆಡಿಎಸ್ ನಲ್ಲೂ ಕೂಡ ನಿಖಿಲ್ ಸ್ಪರ್ಧೆಗೆ ಭಾರೀ ಒತ್ತಡ ಹೇರಲಾಗ್ತಿದೆ. ಜೊತೆಗೆ ನಿಖಿಲ್ ಪಾಲಿಗೂ ಇದು ನಿರ್ಣಾಯಕ ಚುನಾವಣೆ ಆಗಲಿದೆ.
ನಿಖಿಲ್ ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ರೆ ಇದು ಮಾಡು ಇಲ್ಲವೆ ಮಡಿ ಎನ್ನುವಂತಹ ಚುನಾವಣೆ ಆಗಲಿದೆ. ಹಾಗೂ ಮುಂದಿನ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ. ಯಾಕಂದ್ರೆ 2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದ್ರೆ ಪಕ್ಷೇತರ ಅಭ್ಯರ್ಥಿ ಸುಮಲತಾ ಎದುರು ಸೋಲಬೇಕಾಯ್ತು. ಸೋಲಿನ ಆಘಾತದಿಂದ ಚೇತರಿಸಿಕೊಂಡಿದ್ದ ನಿಖಿಲ್ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸ್ವತಃ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ ಮಾಡಿದ್ದರು. ಆದ್ರೆ ಇಲ್ಲೂ ಕೂಡ ನಿಖಿಲ್ ಗೆಲುವು ಸಾಧ್ಯವಾಗ್ಲಿಲ್ಲ. ಎರಡು ಚುನಾವಣೆಗಳ ಸೋಲಿನ ಬಳಿಕ ಸಾಕಷ್ಟು ರಾಜಕೀಯ ಟೀಕೆಗಳು ವ್ಯಕ್ತವಾದವು. ಹೀಗಾಗಿ ಮೂರನೇ ಸಲವಾದ್ರೂ ನಿಖಿಲ್ ರನ್ನ ಗೆಲ್ಲಿಸಲೇಬೇಕು ಎಂಬುದು ಕುಮಾರಸ್ವಾಮಿಯವರ ಹಠ. ಮಂಡ್ಯ ಕ್ಷೇತ್ರದಲ್ಲಿ ನಿಲ್ಲಿಸಿ ನಿಖಿಲ್ ರನ್ನ ಗೆಲ್ಲಿಸಿದ್ರೆ ರಾಜಕೀಯ ಭವಿಷ್ಯಕ್ಕೆ ಅಡಿಪಾಯ ಹಾಕಿದಂತಾಗುತ್ತೆ. ಇಲ್ಲದಿದ್ರೆ ನಿಖಿಲ್ಗೆ ಇಲ್ಲದಿದ್ರೆ ರಾಜಕೀಯದಲ್ಲಿ ಭವಿಷ್ಯ ಇಲ್ಲವೆಂದು ಬೇರೆಯವರ ಬಾಯಿಗೆ ಆಹಾರವಾಗಬೇಕಾಗುತ್ತೆ.