ಸುಮಲತಾಗೆ ಕಾಂಗ್ರೆಸ್ ಗಾಳ ?- ಮಂಡ್ಯದಲ್ಲಿ ಟಿಕೆಟ್ ಕೊಟ್ಟು ದೋಸ್ತಿಗೆ ‘ಕೈ’ ಶಾಕ್?

ಸುಮಲತಾಗೆ ಕಾಂಗ್ರೆಸ್ ಗಾಳ ?- ಮಂಡ್ಯದಲ್ಲಿ ಟಿಕೆಟ್ ಕೊಟ್ಟು ದೋಸ್ತಿಗೆ ‘ಕೈ’ ಶಾಕ್?

ಮಂಡ್ಯ ಲೋಕಸಭಾ ಚುನಾವಣಾ ಸಮರ ರಂಗೇರ್ತಿದೆ. ಅದ್ರಲ್ಲೂ ಸುಮಲತಾ ಸ್ಪರ್ಧೆ ವಿಚಾರ ಭಾರೀ ಚರ್ಚೆಯಾಗ್ತಿದೆ. ಈ ಬಾರಿ ಸುಮಲತಾ ಅಂಬರೀಶ್ ಅವ್ರಿಗೆ ಬಿಜೆಪಿ ಟಿಕೆಟ್ ನೀಡುತ್ತೆ ಎನ್ನಲಾಗಿತ್ತು. ಆದ್ರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ಬಿಜೆಪಿ ಟಿಕೆಟ್ ಸಿಗೋದು ಡೌಟ್ ಇದೆ. ಮಂಡ್ಯದ ಬದಲಿಗೆ ಬೇರೆ ಕ್ಷೇತ್ರದ ಟಿಕೆಟ್ ಸುಮಲತಾಗೆ ನೀಡಬಹುದು ಎನ್ನುವ ಚರ್ಚೆಯೂ ಇದೆ. ಮತ್ತೊಂದೆಡೆ ಸುಮಲತಾ ಅವ್ರು ಮಂಡ್ಯದಿಂದಲೇ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ. ಆದ್ರೆ ಮತ್ತೊಂದು ಎಕ್ಸ್​ಕ್ಲ್ಯೂಸಿವ್ ಮಾಹಿತಿ ಪ್ರಕಾರ ಸುಮಲತಾ ಕಾಂಗ್ರೆಸ್ ಅಭ್ಯರ್ಥಿಯಾಗ್ತಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಮಂಡ್ಯದಿಂದ ಸುಮಲತಾಗೆ ಗೇಟ್‌ಪಾಸ್..! – ಹೆಚ್.ಡಿ ಕುಮಾರಸ್ವಾಮಿ ತಂತ್ರ ಫಲಿಸುತ್ತಾ?

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅವರಿಗೆ ಟಿಕೆಟ್‌ ನೀಡಿದರೇ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೆ ಗೆಲುವು ಕಷ್ಟಸಾಧ್ಯ ಎಂದು ಹೇಳಲಾಗಿದೆ. ಹೀಗಾಗಿ ಸುಮಲತಾ ಅವರಿಗೆ ಇರುವ ಆಯ್ಕೆ ಕಾಂಗ್ರೆಸ್‌ ನಿಂದ ಸ್ಪರ್ಧೆ.  ಸಚಿವ ಚಲುವರಾಯಸ್ವಾಮಿ ಅವರು ಸಹ ಕಾಕತಾಳೀಯ ಎಂಬಂತೆ ನಮ್ಮ ಕುಟುಂಬಸ್ಥರು ಸಹ ಯಾರು ಸ್ಪರ್ಧೆ ಮಾಡಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರನ್ನ ಕಣಕ್ಕಿಳಿಸುವ ಕುರಿತು ಕೈ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಶಾಸಕರು ಸಹ ಸುಮಲತಾ ಅವರ ಪರವಾಗಿದ್ದಾರೆ. ಏಕೆಂದರೆ, ನಟರಾದ ದರ್ಶನ್‌ ಹಾಗೂ ಯಶ್‌ ಸುಮಲತಾ ಅವರ ಬೆಂಬಲಿಗರಾಗಿದ್ದು, ಇದು ಮುಂದಿನ ದಿನಗಳಲ್ಲಿ ನಮಗೂ ಸಹ ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ ಶಾಸಕರು ಸಹ ಸುಮಲತಾ ಅವರ ಜೊತೆಗೆ ಉತ್ತಮ ಒಡನಾಟವನ್ನ ಹೊಂದಿದ್ದಾರೆ ಎನ್ನಲಾಗಿದೆ. ಸುಮಲತಾ ಕಾಂಗ್ರೆಸ್​ಗೆ ಬಂದರೇ ನಮಗೆ ಅನುಕೂಲವಾಗಲಿದೆ ಎಂಬ ಮಾತು ಮಂಡ್ಯ ಕಾಂಗ್ರೆಸ್‌ ನಾಯಕರಿಂದ ಕೇಳಿ ಬಂದಿದೆ.

ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್ ಹೊಸದೇನೂ ಅಲ್ಲ. ನಟ ಹಾಗೂ ಮಾಜಿ ಸಂಸದರಾದ ದಿವಂಗತ ಅಂಬರೀಶ್‌ ಅವರು ಸಹ ಈ ಹಿಂದೆ ಕಾಂಗ್ರೆಸ್‌ ನಾಯಕರ ಜೊತೆಗೆ ಉತ್ತಮ ಒಡನಾಟವನ್ನ ಹೊಂದಿದ್ದರು. ಅಲ್ಲದೇ ಸುಮಲತಾ ಅಂಬರೀಶ್‌ ಅವರು ಸಹ ಈಗಲೂ ಕಾಂಗ್ರೆಸ್‌ ನಾಯಕರ ಜೊತೆಗೆ ಉತ್ತಮ ಸ್ನೇಹ ಸಂಬಂಧವನ್ನ ಹೊಂದಿದ್ದಾರೆ.

ಅಂಬರೀಶ್ ಕಾಂಗ್ರೆಸ್ ನಂಟು! 

ಸಿನಿಮಾದಿಂದ ರಾಜಕೀಯಕ್ಕೆ ಬಂದ ಅಂಬರೀಶ್ ಅವರು 1994 ರಲ್ಲಿ ಪಿ.ವಿ.ನರಸಿಂಹರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್ ತೊರೆದಿದ್ದ ಅವರು, ಜನತಾದಳಕ್ಕೆ ಸೇರಿದ್ದರು. 1996ರಲ್ಲಿ ದೇವೇಗೌಡರ ರಾಜೀನಾಮೆಯಿಂದ ತೆರವಾದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿ, ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ ವಿರುದ್ಧ ಸೋತರು. 1998ರಲ್ಲಿ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಜನತಾದಳದ ಸ್ಪರ್ಧಿಸಿ ಆಯ್ಕೆಯಾದರು. 1999ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. 2004ರಲ್ಲಿ ಪುನಃ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅವರು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಚಾರ ಖಾತೆಯ ರಾಜ್ಯ ಸಚಿವರಾಗಿದ್ದರು. ಅಷ್ಟರಲ್ಲೇ ಕಾವೇರಿ ವಿವಾದ ಭುಗಿಲೆದ್ದಿತ್ತು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ರಾಜಕೀಯ ನಾಯಕರು ರಾಜೀನಾಮೆ ನೀಡಿ ಎಂದು ಮಂಡ್ಯದ ರೈತರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಅಂಬರೀಶ್ ಅವರು 2008ರಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ 2012ರಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿದ್ದರು. 2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರಾಗಿದ್ದರು. ಬಳಿಕ 2014ರ ಲೋಕಸಭಾ ಚುನಾವಣೆ ಸಮಯದಿಂದಲೇ ಅಂಬರೀಶ್ ಅವರ ಆರೋಗ್ಯ ಹದಗೆಟ್ಟಿತ್ತು. ಆಗಿನಿಂದಲೇ ಸಕ್ರಿಯ ರಾಜಕೀಯದಿಂದ ದೂರವಾಗಿದ್ದರು.

ಇದೆಲ್ಲಾ ಏನೇ ಇದ್ರೂ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿದೆ. ದಳಪತಿಗಳಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಇತ್ತ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿರುವ ಕಾಂಗ್ರೆಸ್‌ ನಲ್ಲಿ ಅಭ್ಯರ್ಥಿಯ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಸುಮಲತಾ ಅವರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಪ್ಲಾನ್‌ ನಡೆಸಿದ್ದಾರೆ ಎನ್ನಲಾಗ್ತಿದೆ.

 

Sulekha