ಅನ್ನಭಾಗ್ಯದ 10 ಕೆಜಿ ಅಕ್ಕಿ ಸಿಗೋದೇ ಇಲ್ವಾ? – ಪಡಿತರ ಅಕ್ಕಿ ಬದಲಿನ ಹಣವೂ ಬಂದ್?

ಅನ್ನಭಾಗ್ಯದ 10 ಕೆಜಿ ಅಕ್ಕಿ ಸಿಗೋದೇ ಇಲ್ವಾ? – ಪಡಿತರ ಅಕ್ಕಿ ಬದಲಿನ ಹಣವೂ ಬಂದ್?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 8 ತಿಂಗಳುಗಳೇ ಕಳೀತು. ಆದ್ರೆ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದಿದ್ದ ಸರ್ಕಾರ ಈವರೆಗೂ ಅಕ್ಕಿ ಕೊಡೋಕೆ ಸಾಧ್ಯವಾಗಿಲ್ಲ. 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಬದಲಿಗೆ ಕಾರ್ಡ್​ದಾರರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗ್ತಿದೆ. ಮಾಹಿತಿಗಳ ಪ್ರಕಾರ ಈ ಪ್ರಕ್ರಿಯೆ ಮತ್ತಷ್ಟು ತಿಂಗಳು ಹೀಗೇ ಮುಂದುವರಿಯಲಿದೆ. ಅಂದ್ರೆ ಸದ್ಯಕ್ಕಂತೂ ನಿಮಗೆ 10 ಕೆಜಿ ಅಕ್ಕಿ ಸಿಗಲ್ಲ. ಯಾಕಂದ್ರೆ 2023ರ ಡಿಸೆಂಬರ್​ನಲ್ಲಿ ಕೊನೆಗೊಳ್ಳುವ ಅವಧಿಗೆ ಭತ್ತದ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದೆ. ರಾಷ್ಟ್ರದಾದ್ಯಂತ 48 ಲಕ್ಷ ಟನ್ ಅಕ್ಕಿ ಕೊರತೆಗೆ ಕಾರಣವಾಗಿದೆ.

ಇದನ್ನೂ ಓದಿ: ಡಿಕೆಶಿಗೆ ಸಂಪತ್ತೇ ಮುಳುವಾಯ್ತಾ? – ಸಿಎಂ ಆಗುವ ಬದಲು ಮತ್ತೆ ಜೈಲಿಗೆ?   

2023ನೇ ಸಾಲಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಅಕ್ಕಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಪರಿಸ್ಥಿತಿ  ಮತ್ತಷ್ಟು ಕಠಿಣವಾಗಿದೆ. ಛತ್ತೀಸ್‌ಗಢದಲ್ಲಿ 51.6 ಲಕ್ಷ ಟನ್‌ನಿಂದ 38.5 ಲಕ್ಷ ಟನ್‌ಗೆ, ತೆಲಂಗಾಣದಲ್ಲಿ 37 ಲಕ್ಷ ಟನ್‌ನಿಂದ 27 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಉತ್ಪಾದನೆ 27 ಲಕ್ಷ ಟನ್‌ನಿಂದ 23 ಲಕ್ಷ ಟನ್‌ಗೆ ಮತ್ತು ಮಧ್ಯಪ್ರದೇಶದಲ್ಲಿ 20.5 ಲಕ್ಷ ಟನ್‌ನಿಂದ 11.6 ಲಕ್ಷ ಟನ್‌ಗೆ ಇಳಿದಿದೆ. ಒಟ್ಟಾರೆ ಕೊರತೆಯು ಸುಮಾರು 48 ಲಕ್ಷ ಟನ್ ಆಗಿದೆ. ಆದ್ದರಿಂದ ಕರ್ನಾಟಕಕ್ಕೆ ಅಕ್ಕಿ ಸಂಗ್ರಹಿಸಲು ಕಷ್ಟವಾಗುತ್ತಿದೆ.  ಹೀಗಾಗಿ ನಗದು ಹಣ ನೀಡುವ ಯೋಜನೆ ಮತ್ತಷ್ಟು ತಿಂಗಳು ಮುಂದುವರಿಯಲಿದೆ.

ಸರ್ಕಾರ 10 ಕೆಜಿ ಅಕ್ಕಿ ಕೊಡುವಲ್ಲಿ ವಿಫಲ ಆಗಿರೋದು ಕೇವಲ ವಿಪಕ್ಷಗಳ ಟೀಕೆಗೆ ಮಾತ್ರ ಗುರಿಯಾಗಿಲ್ಲ. ಫಲಾನುಭವಿಗಳೂ ಕೂಡ  ನಗದು ಬದಲು ಅಕ್ಕಿಯನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಜುಲೈ ತಿಂಗಳಿನಿಂದ  ಅನ್ನಭಾಗ್ಯ ಯೋಜನೆ ಜಾರಿಯಾಗಿದ್ದು, ಅಕ್ಕಿ ಬದಲಿಗೆ ನಗದು ನೀಡಲಾಗುತ್ತಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯಹವಾರಗಳ ಇಲಾಖೆಯಿಂದ ಫಲಾನುಭವಿಗಳ ಆಯ್ಕೆ ಏನು ಎಂಬುದರ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ  ಶೇ. 80ರಷ್ಟು ಗ್ರಾಹಕರು ತಮಗೆ ಹಣದ ಬದಲಿಗೆ ಅಕ್ಕಿ ನೀಡುವುದೇ ಸೂಕ್ತ. ಇದರಿಂದ ಬಡ ಕುಟುಂಬಗಳ ಹಸಿವು ನೀಗುತ್ತದೆ. ಪ್ರಸ್ತುತ ನೀಡುತ್ತಿರುವ ನಗದು ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತದೆ. ಹೆಚ್ಚುವರಿ 5 ಕೆಜಿ ಅಕ್ಕಿ ನೀಡಿದರೆ ತಿಂಗಳುಪೂರ್ತಿ ಮನೆಮಂದಿಯ ಹಸಿವು ನೀಗುತ್ತದೆ ಎಂದಿದ್ದಾರೆ. ಮತ್ತೆ ಕೆಲವೆಡೆ ಬೇರೆಯದ್ದೇ ಬೇಡಿಕೆ ಇಟ್ಟಿದ್ದಾರೆ.

ಅಕ್ಕಿಯೂ ಬೇಡ.. ಹಣವೂ ಬೇಡ! 

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಅಕ್ಕಿಯೂ ಬೇಡ, ಹಣವೂ ಬೇಡ ಎನ್ನುತ್ತಿದ್ದಾರೆ. ಇವೆರಡರ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರ ಮೊದಲ ಆಡಳಿತ ಅವಧಿಯಲ್ಲಿ ಅಂದರೆ 2013- 2017ರಲ್ಲಿ ನೀಡಲಾಗುತ್ತಿದ್ದ ಅಕ್ಕಿ ಜತೆಗೆ ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ ನೀಡಬೇಕು ಎಂದು ಪಡಿತರ ಚೀಟಿದಾರರು ಮನವಿ ಮಾಡಿದ್ದಾರೆ. ತೊಗರಿ, ಅಡುಗೆ ಎಣ್ಣೆ, ಸಕ್ಕರೆ ಬೆಲೆ ಗಗನಕ್ಕೇರಿದೆ. ಪ್ರಸ್ತುತ ಪಡಿತರದಾರರಿಗೆ ನೀಡುತ್ತಿರುವ ತಲಾ 170 ರೂಪಾಯಿಗೆ ಬದಲಾಗಿ ಅದೇ ಹಣದಲ್ಲಿ ಈ ಉತ್ಪನ್ನಗಳನ್ನು ನೀಡಬೇಕು. ಆಗ ಬಡ ಕುಟುಂಬಗಳಿಗೆ ನೆರವಾಗುವುದರ ಜತೆಗೆ ಹಣ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದು ತಪ್ಪುತ್ತದೆ ಎನ್ನುತ್ತಿದ್ದಾರೆ.

ಇನ್ನು ಕರಾವಳಿ ಭಾಗದ ಜನ ಮಾತ್ರ ಈಗಿರುವ ಪದ್ಧತಿಯೇ ಮುಂದುವರಿಯಲಿ ಅಂತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಕ್ಕಿ ಜೊತೆಗೆ ಹಣ ನೀಡುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಅಲ್ಲಿನ ಜನ ಕುಚಲಕ್ಕಿ ಸೇವಿಸುತ್ತಾರೆ. ಹೀಗಾಗಿ 10 ಕೆಜಿ ಅಕ್ಕಿ ಕೊಟ್ರೆ ಅವರಿಗೆ ಉಪಯೋಗ ಆಗೋದಿಲ್ಲ. ಅದೇನೇ ಇದ್ರೂ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಅನ್ನೌಭಾಗ್ಯ ಯೋಜನೆ ಅಂದುಕೊಂಡಂತೆ ಯಶಸ್ವಿಯಾಗಿಲ್ಲ. ಕೇಂದ್ರದಿಂದಲೂ ಅಕ್ಕಿ ಸಿಗ್ತಿಲ್ಲ. ಬೇರೆ ರಾಜ್ಯದಿಂದ ಖರೀದಿಸಲು ಮಾತುಕತೆ ನಡೆಸಿದ್ರೂ ಬೆಲೆ ದುಬಾರಿಯಾಗುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಜಾರಿ ಮಾಡಿದ್ದ ಅಕ್ಕಿ ಮತ್ತು ಹಣದ ಯೋಜನೆ ಮತ್ತಷ್ಟು ತಿಂಗಳು ಮುಂದುವರಿಯಲಿದೆ. ಈಗ ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು ಭತ್ತದ ಉತ್ಪಾದನೆಯಲ್ಲೂ ಖೋತಾ ಆಗಿದೆ. ಮುಂದಿನ ದಿನಗಳಲ್ಲಿ ಇದರ ಎಫೆಕ್ಟ್ ತಟ್ಟೋದು ಕೂಡ ಫಿಕ್ಸ್ ಆಗಿದೆ.

 

Sulekha