‘ನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ’- ಪ್ರೊಫೈಲ್ ಫೋಟೋ ಬದಲಿಸಿ ಬಿಜೆಪಿ ನಾಯಕರ ಪ್ರತಿಭಟನೆ
ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಕರ ಸೇವಕ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಗರುವಾರ ಕೂಡ ಪ್ರತಿಭಟನೆ ಮುಂದುವರಿದಿದೆ. ಬಿಜೆಪಿ ನಾಯಕರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲೂ ಹೋರಾಟ ಆರಂಭಿಸಿದ್ದು, ‘ನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ’ ಎಂಬ ಸಂದೇಶವುಳ್ಳ ಪ್ರೊಫೈಲ್ ಫೋಟೋವನ್ನು ಹಾಲಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಅನೇಕ ನಾಯಕರು ಪ್ರೊಫೈಲ್ ಫೋಟೊ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಆಯ್ಕೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ! – ಪೇಜಾವರ ಶ್ರೀ
ಇನ್ನು ಕರ ಸೇವಕ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದರು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸುನೀಲ್ ಕುಮಾರ್, ನಾನೊಬ್ಬ ಕರಸೇವಕ ನನ್ನನ್ನು ಬಂಧಿಸಿ. ಕರಸೇವೆಯಲ್ಲಿ ಭಾಗಿಯಾದವರು ಇವತ್ತಿಗೂ ಇದ್ದಾರೆ. ರಾಮ ಮಂದಿರ ಉದ್ಘಾಟನೆ ಸಂಧರ್ಭದಲ್ಲೇ ಸರ್ಕಾರ ರಾಮ ಭಕ್ತರನ್ನು ಭಯ ಪಡಿಸುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ರಾಮ ಭಕ್ತರನ್ನು ಕ್ರಿಮಿನಲ್ಗಳಿಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡುವವರು ಕಾಂಗ್ರೆಸ್ಗೆ ಅಮಾಯಕರು. ರಾಜ್ಯದ ಹಿಂದೂಗಳ ಪಾಲಿಗೆ ಈ ಸರ್ಕಾರ ಸತ್ತು ಹೋಗಿರುವ ತರಹ ಕಾಣಿಸುತ್ತಿದೆ. ಕೇವಲ ಅಲ್ಪಸಂಖ್ಯಾತರನ್ನು ವೈಭವೀಕರಿಸುವುದರಲ್ಲಿ ತುಷ್ಟೀಕರಣ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ. ನನ್ನ ಮೇಲೂ ಹತ್ತಾರು ಕೇಸ್ಗಳಿವೆ. ಹಾಗಾದರೆ ನಾನು ಅಪರಾಧಿಯೇ? ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.
ಸಿಟಿ ರವಿ ಪೊಲೀಸ್ ವಶಕ್ಕೆ, ನಂತರ ಬಿಡುಗಡೆ
ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕ ಸಿಟಿ ರವಿ ಅವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಠಾಣೆ ಒಳ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ, ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು.