ಪುಟ್ಟ ಕಂದನ ಗಂಟಲಲ್ಲಿ ಸಿಲುಕಿತ್ತು ತೆಂಗಿನ ಕಾಯಿ ತುಂಡು!

ಪುಟ್ಟ ಕಂದನ ಗಂಟಲಲ್ಲಿ ಸಿಲುಕಿತ್ತು ತೆಂಗಿನ ಕಾಯಿ ತುಂಡು!

ಸಣ್ಣ ಮಕ್ಕಳು ಅತ್ತಾಗ ಯಾವುದಾದರೊಂದು ತಿನಿಸುಗಳನ್ನು ಅನೇಕ ಪೋಷಕರು ನೀಡುತ್ತಾರೆ. ಮಗು ಅಳು ನಿಲ್ಲಿಸಲಿ.. ತನ್ನ ಪಾಡಿಗೆ ತಿನ್ನುತ್ತಾ ಇರಲಿ ಅಂತಾ ಕೊಟ್ಟು ಬಿಡುತ್ತಾರೆ.  ಮಕ್ಕಳಿಗೆ ಗಟ್ಟಿಯಾದ ತಿನಿಸುಗಳನ್ನು ಕೊಡುವ ಪೋಷಕರು ಎಚ್ಚರವಹಿಸಬೇಕು.. ಇಲ್ಲೊಂದು ಮಗು ಕೊಬ್ಬರಿಯ ತುಂಡು ತಿಂದಿದ್ದು, ಅದು ಗಂಟಲಿನಲ್ಲಿ ಸಿಲುಕಿದೆ.

ಹೌದು, ಘಟನೆ ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ಪೋಷಕರು ಮಗುವಿಗೆ ತೆಂಗಿನಕಾಯಿ ತುಂಡನ್ನು ನೀಡಿದ್ದರು. ಈ ವೇಳೆ ಎಂಟು ತಿಂಗಳ ಮಗು ಕೊಬ್ಬರಿ ತುಂಡನ್ನು ನುಂಗಿದೆ. ಬಳಿಕ ಮಗು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದೆ. ಅಳು ವಿಪರೀತವಾಗುತ್ತಿದ್ದಂತೆ ಪೋಷಕರಲ್ಲಿ ಸಹಜವಾಗಿ ಗೊಂದಲ,ಭಯ ಉಂಟಾಗಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಕೊನೆಗೆ  ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದ್ದು, ಮಗುವಿನ ಗಂಟಲಿನಲ್ಲಿ ಏನೋ ಸಿಲುಕಿರುವುದು ಕಂಡುಬಂದಿದೆ. ಉಸಿರಾಟದ ತೊಂದರೆಯುಂಟಾಗಿ ಮಗು ಅಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿಗೆ ಸಂಪತ್ತೇ ಮುಳುವಾಯ್ತಾ? – ಸಿಎಂ ಆಗುವ ಬದಲು ಮತ್ತೆ ಜೈಲಿಗೆ?   

ವೈದ್ಯರು ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಿಸಿ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ತೆಂಗಿನ ಕಾಯಿ ತುಂಡನ್ನು ಹೊರತೆಗೆದಿದ್ದಾರೆ. ಮಗುವಿನ ಶ್ವಾಸನಾಳದ ಬಳಿ ತೆಂಗಿನ ಕಾಯಿ ತುಂಡು ಸಿಕ್ಕಿಹಾಕಿಕೊಂಡಿತ್ತು. ವೈದ್ಯರ ತಂಡ ಎಚ್ಚರಿಕೆಯಿಂದ ಕಾಯಿಯನ್ನು ಹೊರತೆಗೆದು ಮಗುವಿನ ಪ್ರಾಣ ಉಳಿಸಿದ್ದಾರೆ.

ಈ ಬಗ್ಗೆ ಆಸ್ಪತ್ರೆ ಅಧೀಕ್ಷಕ ಡಾ.ಜೆ.ಕೆ.ರೈಲ್ವಾನಿ ಮಾತನಾಡಿ, ಡಿ.29ರಂದು ಬೆಳಗ್ಗೆ ಜಯನಗರ ಪಟ್ಟಣದ ನಿವಾಸಿ ರಾಮದೇವ್ ಅವರ 8 ತಿಂಗಳ ಮಗ ಆದಿತ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದಾಗ ಮಗುವಿನ ಗಂಟಲಲ್ಲಿ ಏನೋ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಬಳಿಕ ಆಪರೇಷನ್‌ಗೆ ಸಿದ್ಧತೆ ನಡೆಸಿದ್ದು, ಮಗುವಿನ ಜೀವ ಉಳಿಸುವ ಜವಾಬ್ದಾರಿಯನ್ನು ಡಾ.ಉಷಾ, ಡಾ.ಅನುಪಮ್ ಮಿಂಜ್, ಡಾ.ಪ್ರಿನ್ಸಿ, ಅನಸ್ತೇಶಿಯಾ ವಿಭಾಗದ ಡಾ.ಶಿವಾಂಗಿ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯರಿಗೆ ವಹಿಸಲಾಯಿತು. ಆದರೆ ಆಪರೇಷನ್ ವೇಳೆ ಅರಿವಳಿಕೆ ನೀಡುವುದು ಸವಾಲಾಗಿ ಪರಿಣಮಿಸಿದೆ. 8 ತಿಂಗಳ ಮಗು ಆದಿತ್ಯನನ್ನು ಪ್ರಜ್ಞೆಗೆ ತರಲು ವೈದ್ಯರು ಹರಸಾಹಸ ಪಡಬೇಕಾಯಿತು ಎಂದು ತಿಳಿಸಿದ್ದಾರೆ.

Shwetha M