ಕರ್ನಾಟಕದಲ್ಲಿ ಕಾಟೇರ ಅಬ್ಬರ – ಧೂಳೆಬ್ಬಿಸಿದ ಡಿ ಬಾಸ್ , ಮಾಲಾಶ್ರೀ ಮಗಳ ಅಭಿನಯಕ್ಕೆ ಫುಲ್ ಮಾರ್ಕ್ಸ್
ಕರ್ನಾಟಕದಲ್ಲಿ ಕಾಟೇರ ಅಬ್ಬರ ಶುರುವಾಗಿದೆ. ಹೊಸ ಗೆಟಪ್ನಲ್ಲಿ ಡಿ ಬಾಸ್ ಕಮ್ ಬ್ಯಾಕ್ ಮಾಡಿದ್ದಾರೆ. ಈ ಮೂಲಕ ನಟ ದರ್ಶನ್ಗೆ ದೊಡ್ಡ ಮಟ್ಟದ ಯಶಸ್ಸು ಸಿಗುವ ಸೂಚನೆ ಸಿಕ್ಕಿದೆ. ಯಾಕಂದ್ರೆ ಕಾಟೇರ ಚಿತ್ರದ ಬಗ್ಗೆ, ಡಿ ಬಾಸ್ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಮೂಡಿ ಬಂದಿರೋದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಈ ಸಿನಿಮಾ ಪಕ್ಕಾ ಬ್ಲಾಕ್ಬಸ್ಟರ್ ಎಂದು ಸ್ವತಃ ಅಭಿಮಾನಿಗಳು ಘೋಷಣೆ ಮಾಡಿದ್ದಾರೆ. ಹಾಗಾದರೆ ಕಾಟೇರಾ ಸಿನಿಮಾ ಹೇಗಿದೆ. ತೆರೆಯಲ್ಲಿ ಡಿ ಬಾಸ್ ಧೂಳೆಬ್ಬಿಸಿದ್ದಾರಾ ಎಂಬ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಸಲಾರ್ ಸುನಾಮಿ – ಆರೇ ದಿನಕ್ಕೆ 500 ಕೋಟಿ ರೂ. ಕಲೆಕ್ಷನ್!
ಸಾಂಗ್ಸ್, ಟ್ರೈಲರ್ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದ ಕಾಟೇರ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ತರುಣ್ ಸುಧೀರ್ ನಿರ್ದೇಶನದ ಹಳ್ಳಿ ಸೊಗಡಿನ ಸಿನಿಮಾ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದಾರೆ. ನೈಜ ಘಟನೆಗಳನ್ನೇ ಆಧರಿಸಿರುವ ಸಿನಿಮಾ ಎಂದು ಮೊದಲಿನಿಂದಲೂ ಚಿತ್ರತಂಡ ಹೇಳಿಕೊಂಡು ಬಂದಿತ್ತು. ಹಾಗಾಗಿ ಸಹಜವಾಗಿಯೇ ಕಾಟೇರ ನಿರೀಕ್ಷೆ ಮೂಡಿಸಿತ್ತು. ಅಭಿಮಾನಿಗಳ ಬಹುದಿನಗಳ ನಿರೀಕ್ಷೆ ಇದೀಗ ಫಲ ಕೊಟ್ಟಿದೆ. ಇದರ ಜೊತೆಗೆ ರಾಕ್ಲೈನ್ ವೆಂಕಟೇಶ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
1989ರ ಸಮಯ. ಭೀಮನಹಳ್ಳಿ, ಮಲ್ಲನಹಳ್ಳಿ ಜನ ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ತನ್ನ ಊರಿಗಾಗಿ ಹೋರಾಡಿ ಜೈಲು ಸೇರಿದ ಕಾಟೇರನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರ ಬರುವ ಆತ ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದು ಕಡೆ ನಾಲೆ ಅಗೆಯುವ ವೇಳೆ ಒಂದೇ ಜಾಗದಲ್ಲಿ 107 ಜನರ ಅಸ್ತಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನ ಸತ್ತು ಮಣ್ಣಾಗಿದ್ದೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡು ಊರುಗಳಲ್ಲಿ ನಡೆದ ಘಟನೆಗಳೇನು? ‘ಕಾಟೇರ’ ಜೈಲು ಸೇರಿದ್ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಲೇಬೇಕು.
ಕಾಟೇರ ಸಿನಿಮಾ 70 ಹಾಗೂ 80ರ ದಶಕದಲ್ಲಿ ನಡೆಯುವ ಕಥೆ. ಅದನ್ನು ಸೊಗಸಾಗಿ ಕಟ್ಟಿಕೊಡುವಲ್ಲಿ ಚಿತ್ರತಂಡ ಬಹುತೇಕ ಸಕ್ಸಸ್ ಕಂಡಿದೆ. ದರ್ಶನ್ ಅಭಿಮಾನಿಗಳು ಕೇಳುವ ಮಾಸ್ ಅಂಶಗಳನ್ನು ಬೆರಸಿ ಒಂದು ಹಳ್ಳಿ ಕಥೆಯನ್ನು ತರುಣ್ ಸುಧೀರ್ ಕಟ್ಟಿಕೊಟ್ಟಿದ್ದಾರೆ. ಎರಡು ಕಾಲಘಟ್ಟದಲ್ಲಿ ಸಿನಿಮಾ ಕಥೆ ಸಾಗುತ್ತದೆ. ಫ್ಲ್ಯಾಶ್ಬ್ಯಾಕ್ ತಂತ್ರ ಬಳಸಿ ತರುಣ್ ಕಥೆ ಹೇಳುತ್ತಾ ಸಾಗುತ್ತಾರೆ. ಇನ್ನು ಕಾಟೇರದಲ್ಲಿ ಡಿ ಬಾಸ್ ನಟನೆಯಂತೂ ಸೂಪರ್.. ಕಾಟೇರ ತನ್ನವರಿಗೆ ನೋವಾದರೆ ಸಹಿಸುವವನಲ್ಲ. ತನ್ನವರಿಗಾಗಿ ಹುಲಿ ಆಗೋಕು ಸಿದ್ಧ, ಬಲಿ ಆಗೋಕು ಸಿದ್ಧ ಎನ್ನುವ ಜಾಯಮಾನದವನು. ಶಾನುಭೋಗರ ಮಗಳು ಪ್ರಭಾವತಿ ಕೂಡ ಆತನ ಬೆನ್ನಿಗೆ ನಿಲ್ಲುತ್ತಾಳೆ. ಟ್ರೈಲರ್ ಕೊನೆಯಲ್ಲಿ ದರ್ಶನ್ ವಯಸ್ಸಾದ ವ್ಯಕ್ತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಲುಕ್ನಲ್ಲಿ ತೆರೆಮೇಲೆ ಎಂಟ್ರಿ ಕೊಡುತ್ತಾರೆ. ಇನ್ನು ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಭೇದ ಭಾವ ಆ ಕಾಲದಲ್ಲಿ ಎಷ್ಟರಮಟ್ಟಿಗಿತ್ತು ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಕಾಟೇರನಾಗಿ ಎರಡು ಶೇಡ್ಗಳಿರುವ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಮಾತ್ರವಲ್ಲದೇ ಭಾವನಾತ್ಮಕ ಸನ್ನಿವೇಶಗಳಲ್ಲೂ ಡಿ ಬಾಸ್ ಇಷ್ಟವಾಗುತ್ತಾರೆ. ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಗುರುತು ಸಿಗದಷ್ಟು ಚೆನ್ನಾಗಿ ಮೇಕಪ್ ಮಾಡಲಾಗಿದೆ. ಕುಲುಮೆಯಲ್ಲಿ ಮಚ್ಚು ತಟ್ಟುವುದು ಮಾತ್ರವಲ್ಲ, ತಪ್ಪು ಮಾಡಿದವರನ್ನು ತಟ್ಟುತ್ತಿರುತ್ತಾರೆ. ನಾಯಕಿ ಪ್ರಭಾವತಿಯಾಗಿ ನಟಿ ಮಾಲಾಶ್ರಿ ಪುತ್ರಿ ಆರಾಧನಾ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಸಿಕ್ಕ ಅವಕಾಶವನ್ನು ಅವ್ರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪಾತ್ರಕ್ಕೆ ಆಕೆಯ ತಯಾರಿ ಗೊತ್ತಾಗುತ್ತದೆ. ಇನ್ನು ದುಷ್ಟ ದೇವರಾಯನಾಗಿ ಜಗಪತಿ ಬಾಬು, ಕಟುಕ ಗೌಡ ಕಾಳೇಗೌಡನಾಗಿ ವಿನೋದ್ ಆಳ್ವ, ಕಾಟೇರನ ಅಕ್ಕ, ಭಾವ ಆಗಿ ಶ್ರುತಿ ಹಾಗೂ ಕುಮಾರ್ ಗೋವಿಂದ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಅವಿನಾಶ್ ಕೂಡ ಗಮನ ಸೆಳೆಯುತ್ತಾರೆ. 50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಶ್ರಮಿಸಿರುವುದು ಗೊತ್ತಾಗುತ್ತದೆ. ಕಥೆ ಸೂಕ್ತವಾಗುವ ಸೆಟ್ಗಳನ್ನು ಹಾಕಿ, ಲೋಕೇಶನ್ಗಳನ್ನು ಹುಡುಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ನಟಿ ಮಾಲಾಶ್ರೀ ಮಗಳು ಮೊದಲ ಸಿನಿಮಾದಲ್ಲಿ ಮ್ಯಾಜಿಕ್ ಮಾಡಿದರೆ, ಡಿ ಬಾಸ್ ಈಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ ಫ್ಯಾನ್ಸ್. ಈ ಮೂಲಕ ದರ್ಶನ್ ಅಭಿನಯದ ಕಾಟೇರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡೋದಂತೂ ಗ್ಯಾರಂಟಿ.