5 ವರ್ಷಗಳು, ಅಸ್ಥಿಪಂಜರಗಳು – 2019ರ ಕ್ಯಾಲೆಂಡರ್ ಹೇಳುತ್ತಿದೆ ಐವರ ಸಾವಿನ ರಹಸ್ಯ..!
ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆ ಆಗಿವೆ. ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ (80) ಮತ್ತು ಅವರ ಕುಟುಂಬ ವಾಸವಾಗಿತ್ತು. ಆದರೆ, ಈ ಮನೆಯಲ್ಲಿದ್ದವರು ಸತ್ತಿದ್ದು ಯಾವಾಗ?, ಸತ್ತಿದ್ದು ಹೇಗೆ ಎಂಬ ಬಗ್ಗೆ ಇನ್ನೂ ನಿಗೂಢವಾಗಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ.. ತಡವಾಗಿ ಈ ಇ-ಮೇಲ್ ಪರಿಶೀಲಿಸಿದ ಅಧಿಕಾರಿಗಳು! – ಆಮೇಲೆ ಆಗಿದ್ದೇನು ಗೊತ್ತಾ?
ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ ಆಗಿವೆ. ಈ ಸಂಬಂಧ ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮನೆಯಲ್ಲಿ ಪವನ್ ಕುಮಾರ್ ಸಂಬಂಧಿ ಜಗನ್ನಾಥರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಅಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಸ್ಥಳಕ್ಕೆ ಡಿವೈಎಸ್ಪಿ ಪಿ.ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿದ್ದಾರೆ. ಜಗನ್ನಾಥರೆಡ್ಡಿ (80) ನಿವೃತ್ತ ಇಂಜಿನಿಯರ್ ಆಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.
ಬುಧವಾರ ಡಿ.27 ರಂದು ಕಳ್ಳರು ಬಾಗಿಲು ಹೊಡೆದು ಹಾಗೇ ಹೋಗಿರಬಹುದು. ಗುರುವಾರ ಡಿ.28 ರ ಸಂಜೆ ವೇಳೆ ನಾಯಿಗಳು ಮನೆಯೊಳಗೆ ಹೋಗಿವೆ.ನಾಯಿಗಳು ತಲೆ ಬುರುಡೆಗಳನ್ನು ತಂದು ಮನೆ ಬಾಗಿಲ ಬಳಿ ಹಾಕಿರಬಹುದು. ತಲೆ ಬುರುಡೆ ಕಂಡ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ದೇವರಾಜ್ ಅವರು ಮಾಹಿತಿ ನೀಡಿದ್ದಾರೆ.
ಸುಮಾರು 10ವರ್ಷದಿಂದ ನಾನು ಈ ಮನೆಯಲ್ಲಿ ಯಾರನ್ನೂ ನೋಡಿಲ್ಲ. ಕೃಷ್ಣರೆಡ್ಡಿ (ಬಾಬುರೆಡ್ಡಿ) ಮಾತ್ರ 10 ವರ್ಷದ ಹಿಂದೆ ಆಗಾಗ ಭೇಟಿ ಆಗುತ್ತಿದ್ದರು. ತರಕಾರಿ ಮತ್ತು ಹಾಲು ತರಲು ಹೊರಗೆ ಬರುತ್ತಿದ್ದರು. ಮನೆಯಲ್ಲಿ ವಯಸ್ಸಾದವರು, ನಡೆಯಲಾಗದಷ್ಟು ದಪ್ಪ ಇದ್ದವರು ಇದ್ದರು. ಮನೆ ಮುಂದೆ ರಸ್ತೆ, ಚರಂಡಿ ನಿರ್ಮಾಣ ವೇಳೆಯೂ ಮನೆಯಲ್ಲಿ ಯಾರೂ ಕಂಡುಬಂದಿಲ್ಲ. 10 ವರ್ಷದ ಹಿಂದೆಯೇ ಸಾವಿಗೀಡಾಗಿರಬಹುದು ಎಂದು ವಾಲ್ಮನ್ ಪರಶುರಾಮ್ ಶಂಕೆ ವ್ಯಕ್ತಪಡಿಸಿದ್ದಾರೆ. ಜಗನ್ನಾಥರೆಡ್ಡಿ ಮನೆಯಲ್ಲಿ 2019ರ ಕ್ಯಾಲೆಂಡರ್ ಇದೆ ಎಂಬ ಮಾಹಿತಿ ಇದೆ. ಕೊರೊನಾ ಸಮಯದಲ್ಲಿ ಐವರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ನಾವು ಮೂರು ವರ್ಷದ ಹಿಂದೆಯೇ ಈ ಬಡಾವಣೆಗೆ ಬಂದಿದ್ದೇವೆ. ಜಗನ್ನಾಥರೆಡ್ಡಿ ಕುಟುಂಬದವರನ್ನು ನಾವು ನೋಡಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿ ಭದ್ರಿ ಮಾಹಿತಿ ನೀಡಿದರು.
ಚಿತ್ರದುರ್ಗದ ದೊಡ್ಡ ಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ ಎಂಬವರ ನಿವಾಸ ಇದಾಗಿದೆ. PWD ಇಂಜಿನೀಯರ್ ಆಗಿದ್ದ ಜಗನ್ನಾಥ್, ನಿವೃತ್ತಿ ಬಳಿಕ ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರೊಂದಿಗೆ ಇದೇ ಮನೆಯಲ್ಲಿ ವಾಸವಾಗಿದ್ದರು. ಈ ಐದು ಜನರದ್ದೇ ಅಸ್ಥಿಪಂಜರಗಳು ಎಂದು ಹೇಳಲಾಗುತ್ತಿದೆ. ನಗರದ ವಸತಿ ಪ್ರದೇಶದಲ್ಲಿಯೇ ಈ ಮನೆ ಇದ್ರೂ ನೆರೆಹೊರೆಯ ಜನರಿಗೆ ಇಷ್ಟು ದಿನ ಈ ವಿಷಯವೇ ಗೊತ್ತಿರಲಿಲ್ಲ. ಇನ್ನೂ ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ನಿವಾಸದ ಬಳಿ ಸಂಬಂಧಿಕರು ಆಗಮಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಜಗನ್ನಾಥ ರೆಡ್ಡಿಯ ಸೋದರ ಸಂಬಂಧಿ ತಿಮ್ಮಾರೆಡ್ಡಿ, ನಾವಿಬ್ಬರು ಜೊತೆಗೆ ಓದುತ್ತಿದ್ದೇವು, ಜಗನ್ನಾಥ ರೆಡ್ಡಿ ಓದಿ ಇಂಜಿನಿಯರ್ ಆಗಿದ್ದ. ಅವರನ್ನು ಭೇಟಿಯಾಗಿ ಸುಮಾರು ಐದು ವರ್ಷವಾಯ್ತು ಎಂದು ಹೇಳಿದರು. ನಾನು ಬಂದಾಗ ಮಾತನಾಡಿಸುತ್ತಿದ್ದ. ಫೋನ್ ನಂಬರ್ ಕೂಡಾ ಕೊಟ್ಟಿರದ ಕಾರಣ ಅವರ ಜೊತೆ ಮಾತನಾಡಿಲ್ಲ. ಜಗನ್ನಾಥ್ಗೆ ಇಬ್ಬರು ಗಂಡು ಮಕ್ಕಳು, ಒರ್ವ ಪುತ್ರಿ ಇದ್ದರು. ಒರ್ವ ಪುತ್ರ ಇಂಜಿನಿಯರ್, ಮತ್ತೋರ್ವ ವ್ಯವಸಾಯ ಮಾಡಿಕೊಂಡಿದ್ದನು ಎಂದು ಜಗನ್ನಾಥ್ ಕುಟುಂಬದ ಮಾಹಿತಿಯನ್ನು ನೀಡಿದರು. ಊರಲ್ಲಿ ಜಮೀನು ಕೂಡಾ ತುಂಬಾನೇ ಇತ್ತು. ದೊಡ್ಡ ಸಿದ್ದವ್ವನಹಳ್ಳಿ ಪಕ್ಕದಲ್ಲೇ ಜಮೀನು ಕೂಡ ಇದೆ. ರಾತ್ರಿ ಈ ವಿಷಯ ಗೊತ್ತಾಯ್ತು, ಏನೂ ಆಗಿದ್ಯೋ ಗೊತ್ತಿಲ್ಲ. ಎಲ್ಲರ ಜೊತೆಗೂ ಚೆನ್ನಾಗಿ ಇರುತ್ತಿದ್ದರು. ಒಮ್ಮೆ ಮನೆಯಲ್ಲಿ ವಾಸನೆ ಬರುತ್ತದೆ ಎಂದಿದ್ದರು. ಆ ಸಂಧರ್ಭದಲ್ಲಿ ಯಾರೂ ಕೂಡಾ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ತಿಮ್ಮಾರೆಡ್ಡಿ ಹೇಳಿದರು. ಇನ್ನು ಈ ಘಟನೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ಮನೆಯಲ್ಲಿ ಐದು ಅಸ್ಥಿಪಂಜರ ಸಿಕ್ಕಿರುವ ಬಗ್ಗೆ ವರದಿಯಾಗಿದೆ. ಅದರಲ್ಲಿ ಎಷ್ಟು ದಿವಸದಿಂದ ಇದೆ, ಯಾರು ಮತ್ತು ಅವರ ಸಂಬಂಧಿಕರೊಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದಂತವರು. ಅವರ ಮನೆ ಅಂತ ಹೇಳ್ತಿದ್ದಾರೆ. ಈ ಸಂಬಂಧ ತನಿಖೆಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.