ಯುದ್ಧ ಪೀಡಿತ ಗಾಜಾದಲ್ಲಿ 5 ಕಿ.ಮೀ ನಡೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ಬಂಡುಕೋರರನ್ನು ನಿರ್ನಾಮ ಮಾಡಲೆಂದು ಇಸ್ರೇಲ್ ಸೇನೆ ಪಣತೊಟ್ಟಿದೆ. ಈ ಭೀಕರ ಯುದ್ಧದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೀಗ ಯುದ್ಧದಿಂದ ಹಾನಿಗೊಳಗಾದ ಪ್ಯಾಲೆಸ್ಟೀನಿಯನ್ ಪ್ರದೇಶದ ಉತ್ತರದಲ್ಲಿರುವ ತನ್ನ ಮನೆಯಿಂದ 5 ಕಿಮೀ ದೂರದಲ್ಲಿರುವ ದಕ್ಷಿಣ ಗಾಜಾದ ಆಸ್ಪತ್ರೆಗೆ ನಡೆದುಕೊಂಡು ಹೋಗಿ ಮಹಿಳೆಯೊಬ್ಬರು 4 ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಹೊಸ ವರ್ಷಾಚರಣೆಯಂದು ತುಮಕೂರಿನ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ! – ಎರಡು ದಿನ ಸಾರ್ವಜನಿಕರಿಗೆ ನಿರ್ಬಂಧ!
ಇಮಾನ್ ಅಲ್-ಮಸ್ರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಮಹಿಳೆಯು ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್ ದೂರ ನಡೆದರು. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ವೇಳೆ ನಡೆದುಕೊಂಡು ಹೋಗಿದ್ದಾರೆ.
ಯುದ್ಧದಿಂದಾಗಿ ಇತರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸ್ಥಳಾವಕಾಶ ಕಲ್ಪಿಸಲು, ಮಹಿಳೆಯು ನವಜಾತ ಶಿಶುಗಳೊಂದಿಗೆ ಆಸ್ಪತ್ರೆಯನ್ನು ತೊರೆದಿದ್ದಾರೆ. ಸದ್ಯ ಇಮಾನ್ ಅವರು ಡೀರ್ ಅಲ್-ಬಾಲಾಹ್ನಲ್ಲಿ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ಜನ್ಮ ನೀಡಿದ ನಾಲ್ಕರಲ್ಲಿ ಮೂರು ಮಕ್ಕಳು ಆರೋಗ್ಯವಾಗಿವೆ. ಮತ್ತೊಂದು ಮಗುವಿನ ತೂಕ ಕೇವಲ 2 kg ಇದೆ. ಈ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ, ಆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಮಹಿಳೆ ಹೋಗಿದ್ದಾರೆ.
24 ಲಕ್ಷ ಜನರಿಗೆ ನೆಲೆಯಾಗಿರುವ ಗಾಜಾ ಪಟ್ಟಿಯು ಉತ್ತರದಿಂದ ದಕ್ಷಿಣಕ್ಕೆ ಅವಶೇಷಗಳಲ್ಲಿದೆ. ಯುಎನ್ ಅಂದಾಜಿನ ಪ್ರಕಾರ, ಯುದ್ಧದಿಂದಾಗಿ 19 ಲಕ್ಷ ಪ್ಯಾಲೆಸ್ಟೀನಿಯನ್ನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹಮಾಸ್ ಬಂದೂಕುಧಾರಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಸಂಘರ್ಷ ಭುಗಿಲೆದ್ದಿತು. ಇದರ ಪರಿಣಾಮವಾಗಿ ಸುಮಾರು 1,140 ಜನರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ.