ಕೆ.ಎಲ್ ರಾಹುಲ್ ಭರ್ಜರಿ ಶತಕ – ಟೀಮ್ ಇಂಡಿಯಾ 245ಕ್ಕೆ ಆಲೌಟ್

ಕೆ.ಎಲ್ ರಾಹುಲ್ ಭರ್ಜರಿ ಶತಕ – ಟೀಮ್ ಇಂಡಿಯಾ 245ಕ್ಕೆ ಆಲೌಟ್

ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಕಠಿಣ ಪಿಚ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕೆ ಎಲ್ ರಾಹುಲ್ ಟೆಸ್ಟ್ ವೃತ್ತಿಜೀವನದ 8ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: 

ಮಳೆಯ ಅಡಚಣೆಯ ನಡುವೆಯೂ ಮೊದಲ ದಿನದಾಟದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 208 ರನ್ ಬಾರಿಸಿದ್ದ ಟೀಂ ಇಂಡಿಯಾ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೆ ಎಲ್ ರಾಹುಲ್ 133 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಟೀಮ್ ಇಂಡಿಯಾ 107 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಸೌತ್ ಆಫ್ರಿಕಾ ವೇಗಿಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಕನ್ನಡಿಗ ಕೆ.ಎಲ್ ರನ್‌ ಹೆಚ್ಚಿಸುವತ್ತ ಗಮನ ಹರಿಸಿದರು. ಅಲ್ಲದೆ ಮೊದಲ ದಿನದಾಟದಲ್ಲೇ ಅರ್ಧಶತಕ ಪೂರೈಸಿ ತಂಡಕ್ಕೆ ಆಸರೆಯಾಗಿ ನಿಂತರು. ಮೊದಲ ದಿನದಾಟದಲ್ಲಿ ಅಜೇಯ 70 ರನ್ ಬಾರಿಸಿ ಕೆಎಲ್ ರಾಹುಲ್ ತಂಡದ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 208 ಕ್ಕೆ ತಂದು ನಿಲ್ಲಿಸಿದರು. 2ನೇ ದಿನದಾಟದಲ್ಲಿ ಸಿರಾಜ್ ಜೊತೆ ಇನಿಂಗ್ಸ್ ಆರಂಭಿಸಿದ ರಾಹುಲ್ ಬಿರುಸಿನ ಬ್ಯಾಟಿಂಗ್‌ಗೆ ಒತ್ತು ನೀಡಿದರು. ಇತ್ತ 9ನೇ ವಿಕೆಟ್ ಆಗಿ ಸಿರಾಜ್ ಹೊರ ನಡೆಯುತ್ತಿದ್ದರೆ ಅತ್ತ ರಾಹುಲ್‌ಗೆ ಶತಕ ಪೂರೈಸಲು 5 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಪ್ರಸಿದ್ಧ್ ಕೃಷ್ಣ ಸಿಂಗಲ್ ರನ್ ತೆಗೆದುಕೊಂಡರು. ಈ ವೇಳೆ ಸ್ಟ್ರೈಕ್‌ಗೆ ಬಂದ ಕೆಎಲ್ ರಾಹುಲ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 133 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ 137 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 101 ರನ್ ಬಾರಿಸಿ ಕೆಎಲ್ ರಾಹುಲ್ ಔಟಾದರು. ಈ ಭರ್ಜರಿ ಶತಕದೊಂದಿಗೆ ಸೆಂಚುರಿಯನ್ ಮೈದಾನದಲ್ಲಿ 2 ಸೆಂಚುರಿ ಸಿಡಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ದಾಖಲೆ ಕೆಎಲ್ ರಾಹುಲ್ ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ರಾಹುಲ್ ಇದೇ ಮೈದಾನದಲ್ಲಿ ಶತಕ ಬಾರಿಸಿದ್ದರು.

ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ 245 ರನ್‌ಗಳಿಸಿ ಆಲೌಟ್ ಆಗಿದೆ.

Sulekha