ಮಟನ್ ಸಾಂಬರ್ನಲ್ಲಿ ಮೂಳೆ ಇಲ್ಲ ಅಂತಾ ಮದುವೆ ಕ್ಯಾನ್ಸಲ್ ಮಾಡಿದ ವರ!
ಮದುವೆ ಮನೆ ಅಂದಾಗ ಅಲ್ಲಿ ಸಣ್ಣಪುಟ್ಟ ಮನಸ್ತಾಪ ಕಾಮನ್. ಊಟ, ತಿಂಡಿ ಚೆನ್ನಾಗಿಲ್ಲ ಅಂತಾ ಸಂಬಂಧಿಕರು ದೂರುವುದು ಕೂಡ ಸಹಜ ಅಂತಾ ಹೇಳಬಹುದು. ಇನ್ನೂ ಕೆಲವೊಮ್ಮೆ ಮದುವೆ ಸಮಾರಂಭದಲ್ಲಿ ಈ ವಿಚಾರಕ್ಕೆ ಜಗಳ ಕೂಡ ಉಂಟಾಗುತ್ತದೆ. ಇದೀಗ ಮಟನ್ ಸಾಂಬಾರಿನಲ್ಲಿ ಮೂಳೆ ಸಿಕ್ಕಿಲ್ಲ ಅಂತಾ ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ.
ಹೌದು, ಈ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮಟನ್ ಸಾಂಬರ್ನಲ್ಲಿ ಮೂಳೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶುರುವಾದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೀಗ ಮದುವೆ ರದ್ದಾಗುವುದರೊಂದಿಗೆ ಜಗಳ ಅಂತ್ಯಗೊಂಡಿದೆ.
ಇದನ್ನೂ ಓದಿ: ನೂಕುನುಗ್ಗಲಿನ ನಡುವೆ ಅಯ್ಯಪ್ಪನ ಭಕ್ತರಿಗೆ ಸಾಲು ಸಾಲು ಸಮಸ್ಯೆ! – ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ!
ಇತ್ತೀಚೆಗೆ ನಿಜಾಮಾಬಾದ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ವಧು – ವರರ ಒಪ್ಪಿಗೆ ಸೂಚಿಸಿದ ಬಳಿಕ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಮದುವೆಯ ದಿನವೂ ನಿಶ್ಚಯವಾಗಿತ್ತು. ಆ ಖುಷಿಯಲ್ಲಿ ಮಾಂಸದೂಟವನ್ನು ಏರ್ಪಡಿಸಿದ್ದರು, ಮಧುಮಗನ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅತಿಥಿಗಳು ಮಾಂಸಾಹಾರಿ ಖಾದ್ಯ ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಗಲಾಟೆ ಶುರು ಮಾಡಿದ್ದರು. ಇದು ಅಂತಿಮವಾಗಿ ಎರಡೂ ಕುಟುಂಬದ ನಡುವೆ ಜಗಳಕ್ಕೆ ಕಾರಣವಾಯಿತು.
ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮಾಂಸದ ವಿಚಾರಕ್ಕೆ ಸಂಬಂಧಿಸಿದಂತೆ ವರನ ಕಡೆಯವರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ, ವಧುವಿನ ಮನೆಯವರು ಮಾಂಸಾಹಾರದಲ್ಲಿ ಮೂಳೆಯನ್ನು ನೀಡದೆ ಅವಮಾನ ಮಾಡಿದ್ದಾರೆ ಎಂದು ವಾದಿಸಿದರು. ವಧುವಿನ ಮನೆಯವರು ಈ ಬಗ್ಗೆ ಮೊದಲೇ ತಿಳಿಸಿರಲಿಲ್ಲ, ಮೂಳೆಯನ್ನು ಊಟದಲ್ಲಿ ಸೇರಿಸಲಿಲ್ಲ ಎಂದು ವಾದಿಸಿದರು. ಕೊನೆಗೆ ಎರಡೂ ಕಡೆಯವರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.