ನೂಕುನುಗ್ಗಲಿನ ನಡುವೆ ಅಯ್ಯಪ್ಪನ ಭಕ್ತರಿಗೆ ಸಾಲು ಸಾಲು ಸಮಸ್ಯೆ! – ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ!
ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯ. ಪರ್ವತಗಳು ಮತ್ತು ದಟ್ಟವಾದ ಅರಣ್ಯದ ನಡುವೆ ಇರುವ ಈ ದೇಗುಲ ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳ. ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಶಬರಿಮಲೆ ಸೀಸನ್ ಆರಂಭವಾಗುತ್ತದೆ. ಆದ್ರೆ ಈ ವರ್ಷ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ನಿತ್ಯ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದು ನೂಕು ನುಗ್ಗಲು ಉಂಟಾಗುತ್ತಿದೆ. ದಿನವಿಡೀ ಕಾದರೂ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಸಿಗ್ತಿಲ್ಲ. ಅಷ್ಟೇ ಅಲ್ಲದೇ ಬಾಯಾರಿಕೆ ಆದ್ರೆ ಕುಡಿಯಲು ನೀರಿಲ್ಲ, ಹಸಿವಾದ್ರೂ ತಿನ್ನಲು ಅನ್ನ ಕೂಡ ಸಿಕ್ತಿಲ್ಲ. ಹೀಗಾಗಿ ಭಕ್ತರು ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕತ್ತಿದ್ದಾರೆ.
ಇದನ್ನೂ ಓದಿ: 4 ದಿನಗಳ ನಂತರ 276 ಭಾರತೀಯರು ಸ್ವದೇಶಕ್ಕೆ ವಾಪಸ್, 23 ಮಂದಿ ಫ್ರಾನ್ಸ್ ನಲ್ಲಿ ಉಳಿಯಲು ನಿರ್ಧಾರ
ಹೌದು, ಶಬರಿಮಲೆ ದೇವಸ್ಥಾನಕ್ಕೆ ಈ ಬಾರಿ ಭಕ್ತ ಸಾಗರವೇ ಹರಿದುಬರುತ್ತಿದೆ. ದಿನವಿಡಿ ಕ್ಯೂ ನಿಂತರೂ ಅಯ್ಯಪ್ಪನ ದರ್ಶನ ಭಾಗ್ಯ ಸಿಗುತ್ತಿಲ್ಲ. ಕುಡಿಯಲು ನೀರಿಲ್ಲದೇ, ಹಸಿವಾದಾಗ ಅನ್ನ ಇಲ್ಲದೆ ಭಕ್ತರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಶೌಚದ ವ್ಯವಸ್ಥೆ ಕೂಡ ಇಲ್ಲ. ಈ ಬಾರಿ ಶಬರಿಮಲೆಯಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದ್ದು, ಭಕ್ತರಿಗೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿಯೂ ಕೇರಳ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಭಕ್ತಾದಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಹೊರತಾಗಿಯೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗದ ಕುರಿತು ಶಬರಿಮಲೆಗೆ ತೆರಳಿರುವ ಕರ್ನಾಟಕ, ತಮಿಳುನಾಡು ಸೇರಿದಂತೆ ಇತರ ಭಕ್ತಾದಿಗಳು ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಕೇರಳ ಸರ್ಕಾರ ಹಿಡಿಶಾಪ ಹಾಕಿದ್ದಾರೆ.
ಭಕ್ತರು ಹೇಳಿದ್ದೇನು?
ನಮಗೆ ಇಲ್ಲಿ ಕನಿಷ್ಠ ಶೌಚಾಲಯ ವ್ಯವಸ್ಥೆಯೂ ಇಲ್ಲ. ಕುಡಿಯಲು ನೀರಿಲ್ಲ, ಊಟ ಮಾಡಲು ಏನೂ ಆಹಾರವಿಲ್ಲ. ಅಯ್ಯೋ ನಿಮ್ಮ ಕೈ ಮುಗೀತಿವಿ ಇನ್ನು ಶಬರಿಮಲೆಗೆ ದಯವಿಟ್ಟು ಯಾರೂ ಬರಬೇಡಿ. ಪೊಲೀಸರು ಕೂಡ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ, ದಾದಾಗಿರಿ ಮಾಡ್ತಿದ್ದಾರೆ. ಪೊಲೀಸರು ನಮಗೆ ಶೂ ತೋರಿಸುತ್ತಿದ್ದಾರೆ. ಆದರೆ ಯಾಕೆ ಅವರು ನಮಗೆ ಶೂ ತೋರಿಸಬೇಕು? ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಇದನ್ನೆಲ್ಲ ನೋಡಲ್ವ? ಇಂಥ ಅವ್ಯವಸ್ಥೆಗೆ ಈ ಕೇರಳ ಸರ್ಕಾರಕ್ಕೆ ನಾಚಿಕೆಯಾಗಬೇಕು. ವಾಹನ ಸಂಚಾರ ವ್ಯವಸ್ಥೆಯಿಲ್ಲದೇ ಟ್ರಾಫಿಕ್ನಿಂದ ಇಡೀ ದಿನ ಬಿಸಿಲಿನಲ್ಲಿ ಗಾಡಿಯಲ್ಲೇ ಕಾಯ್ತಿದ್ದೇವೆ. ಕೇರಳ ಸರ್ಕಾರಕ್ಕೆ ಧಿಕ್ಕಾರ ಕೂಗ್ತೀವಿ, ಕೇರಳ ಸರ್ಕಾರಕ್ಕೆ ಶೇಮ್ ಶೇಮ್ ಎಂದಿದ್ದಾರೆ.
ಭಕ್ತರಿಗೆ ನೀರು, ಆಹಾರ ನೀಡಿ – ಶಬರಿಮಲೆ ಮಂಡಳಿಗೆ ಹೈಕೋರ್ಟ್!
ಶಬರಿಮಲೆಗೆ ಹೋಗುವ ರಸ್ತೆಗಳಲ್ಲಿ ಭಕ್ತರು ಸುಮಾರು 12 ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಸಿಲುಕಿಕೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಭಕ್ತಾದಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಶಬರಿಮಲೆ ಅಯ್ಯಪ್ಪ ದೇಗುಲದ ಮಂಡಳಿಗೆ ಕೇರಳ ಹೈಕೋರ್ಟ್ ಸೂಚಿಸಿದೆ. ಸೋಮವಾರ ನ್ಯಾಯಾಲಯದ ವಿಶೇಷ ಪೀಠವು ‘ವಾರ್ಷಿಕ ಶಬರಿಮಲೆ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆ ಗೆ ಬರುವ ಭಕ್ತಾದಿಗಳಿಗಾಗಿ ‘ಎಡತಾವಲಮ್’ನಲ್ಲಿ ಅಲ್ಪಾವದಿ ತಂಗುದಾಣ, ನೀರು, ಊಟ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಗೆ ನಿರ್ದೇಶನ ನೀಡಿದೆ. ಅಲ್ಲದೇ ಜನಸಂದಣಿ ನಿಯಂತ್ರಣ ಮತ್ತು ಇತರ ಮೇಲ್ವಿಚಾರಣೆಗೆ ಅಗತ್ಯ ಬಿದ್ದರೆ ಹೆಚ್ಚಿನ ಪೊಲೀಸರನ್ನು ನಿಯೋಜಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.