ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ರಾಹುಲ್ ಗತಿ ಏನು – ಕಾಂಗ್ರೆಸ್ ನಾಯಕನ ವಿರುದ್ಧ ಇರುವ ಆರೋಪಗಳೆಷ್ಟು..?
2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ರಣತಂತ್ರ ರೆಡಿಯಾಗುತ್ತಿದೆ. ಇದೇ ವೇಳೆ ಮಹಾಮೈತ್ರಿಕೂಟದಲ್ಲಿ ಮಲ್ಲಿಕಾರ್ಜುನ ಖರ್ಗೆಯೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ ಎಂಬ ಅಭಿಪ್ರಾಯದ ಹೊರತಾಗಿಯೂ ಖರ್ಗೆ ಹೆಸರು ಚರ್ಚೆಗೆ ಬರೋಕೆ ಕಾರಣವೂ ಇದೆ.
ಇದನ್ನೂ ಓದಿ : ಡೊನಾಲ್ಡ್ ಟ್ರಂಪ್ ಗೆ ದೊಡ್ಡ ಶಾಕ್! – ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹಗೊಳಿಸಿದ ಕೋರ್ಟ್!
2014ರ ಲೋಕಸಭಾ ಚುನಾವಣೆ ವೇಳೆ ಸೋನಿಯಾ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಿದ್ದರೂ ಕೂಡಾ ಅಂದಿನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ಪರೋಕ್ಷವಾಗಿ ಪಕ್ಷವನ್ನ ಮುನ್ನಡೆಸಿದ್ದರು. ಆದ್ರೆ ಕಾಂಗ್ರೆಸ್ ಪಕ್ಷ ಸೋಲು ಕಂಡಿತ್ತು. 2019ರ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಯವರೇ ಎಐಸಿಸಿ ಅಧ್ಯಕ್ಷರಾಗಿ ಪಕ್ಷವನ್ನ ಮುನ್ನಡೆಸಿದ್ದರು. ಇಲ್ಲೂ ಕೂಡ ಹೀನಾಯವಾಗಿ ಸೋಲು ಅನುಭವಿಸಬೇಕಾಯ್ತು. ಇದಾದ ಬಳಿಕ ತಮ್ಮ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತ್ ಜೋಡೋ ಯಾತ್ರೆ ಸೇರಿದಂತೆ ಸಾಮಾನ್ಯರ ಜೊತೆ ಬೆರೆಯುತ್ತಾ ರಾಹುಲ್ ತಮ್ಮ ವರ್ಚಸ್ಸನ್ನ ಹೆಚ್ಚಿಸಿಕೊಳ್ಳೋಕೆ ನೋಡ್ತಿದ್ದಾರೆ. ಆದ್ರೆ ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷಗಳ ನಾಯಕರ ಅನುಭವ ಹಾಗೂ ಹಿರಿತನಕ್ಕೆ ಹೋಲಿಕೆ ಮಾಡಿದರೆ ರಾಹುಲ್ ಗಾಂಧಿ ಇನ್ನೂ ಚಿಕ್ಕವರು. ಅಷ್ಟೇ ಅಲ್ಲದೆ ರಾಹುಲ್ ವರ್ತನೆ ಪದೇಪದೆ ಟ್ರೋಲ್ ಆಗುತ್ತಿರುತ್ತದೆ. ಪ್ರಧಾನಿ ಮೊದಿ ಅವರ ಕುರಿತಾಗಿ ನೀಡಿದ ಅವಹೇಳನಕಾರಿ ಹೇಳಿಕೆಗಳು, ಲೋಕಸಭೆಯಲ್ಲಿ ನೀಡಿದ ಫ್ಲೈಯಿಂಗ್ ಕಿಸ್, ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡಿದ್ದು, ಸಂಸದರ ಕಡೆ ನೋಡುತ್ತಾ ಕಣ್ಣು ಮಿಟುಕಿಸಿದ್ದು, ಭಾಷಣದ ವೇಳೆ ಆಗುವ ಎಡವಟ್ಟುಗಳು. ಹೀಗೆ ಇವೆಲ್ಲವೂ ರಾಜಕೀಯವಾಗಿ ರಾಹುಲ್ ಗಾಂಧಿ ಅವರ ಇಮೇಜ್ಗೆ ಧಕ್ಕೆ ತಂದಿವೆ. ಜೊತೆ ಜೊತೆಗೆ ಟ್ರೋಲ್ ಪೇಜ್ಗಳಿಗೆ ಆಹಾರವಾಗಿದ್ದನ್ನ ನಾವಿಲ್ಲಿ ಮರೆಯೋಕಾಗಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಪ್ರತಿಯನ್ನೇ ರಾಹುಲ್ ಹರಿದು ಹಾಕಿದ್ದರು. ಇದು ರಾಹುಲ್ ಅವರ ಇಮೇಜ್ಗೆ ಕಪ್ಪು ಚುಕ್ಕಿ ಎಂದರೆ ತಪ್ಪಾಗಲ್ಲ. ಅಷ್ಟೇ ಯಾಕೆ ಇದೇ ತಿಂಗಳ ಚಳಿಗಾಲದ ಅಧಿವೇಶನದಲ್ಲಿ ಸಂಸತ್ ಭವನದ ಎದುರಿಗೆ ವಿರೋಧ ಪಕ್ಷಗಳ ಸಂಸದರು ಉಪರಾಷ್ಟ್ರಪತಿಗಳನ್ನು ಅವಹೇಳನ ಮಾಡುವಾಗ ರಾಹುಲ್ ಗಾಂಧಿ ಅವರು ನಗುತ್ತಾ ತಮ್ಮ ಮೊಬೈಲ್ನಲ್ಲಿ ಈ ಕೃತ್ಯದ ವಿಡಿಯೋ ಮಾಡುತ್ತಿದ್ದರು. ಇದು ಕೂಡ ವ್ಯಾಪಕ ಟೀಕೆಗೆ ಒಳಗಾಗಿತ್ತು.
ಹೀಗೇ ಹೇಳ್ತಾ ಹೋದ್ರೆ ರಾಹುಲ್ ವಿರುದ್ಧ ಆಪಾದನೆಗಳ ಪಟ್ಟಿಯೇ ಬೆಳೆಯುತ್ತೆ. ರಾಜಕಾರಣಿಗಳ ವ್ಯಕ್ತಿತ್ವ, ವರ್ತನೆ, ನಡೆ, ನುಡಿ, ಮಾತು, ಕೃತಿ ಎಲ್ಲವನ್ನೂ ಜಾಣ ಮತದಾರ ಪರಿಗಣಿಸುತ್ತಾನೆ. ಇದೇ ಕಾರಣಕ್ಕೆ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್ ಗಾಂಧಿ ಪ್ರಧಾನಿ ಆಗಿದ್ರೂ ರಾಹುಲ್ ಗಾಂಧಿಗೆ ಇನ್ನೂ ಆ ಭಾಗ್ಯ ಧಕ್ಕಿಲ್ಲ. ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆಯವರ ಅಪಾರ ಅನುಭವ ಮತ್ತು ನಡೆ, ನುಡಿಯೂ ವಿಪಕ್ಷಗಳ ನಾಯಕರ ಮೆಚ್ಚುಗೆಗೆ ಕಾರಣವಾಗಿದೆ. ಐದು ದಶಕಗಳ ರಾಜಕಾರಣದಲ್ಲಿ ಒಮ್ಮೆಯೂ ಪಕ್ಷಾಂತರ ಮಾಡಿದವರಲ್ಲ. ತಮ್ಮ ನೇರ ನಡೆಯಿಂದಲೇ ನೆಹರು-ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ದಲಿತ ನಾಯಕನಾಗಿ ಬೆಳೆದಿದ್ರೂ ಸಿಎಂ ಪಟ್ಟ ಕನಸಾಗಿಯೇ ಉಳಿದಿದೆ. ಬೀದರ್ನ ಒಂದು ಪುಟ್ಟ ಗುಡಿಸಲಲ್ಲಿ ಹುಟ್ಟಿ ಬೆಳೆದ ಖರ್ಗೆ ಇವತ್ತು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪ್ರಧಾನಿ ಅಭ್ಯರ್ಥಿ ರೇಸ್ನಲ್ಲಿದ್ದಾರೆ. ಆದ್ರೆ 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ, ಯಾರು ಪ್ರಧಾನಿ ಆಗ್ತಾರೆ ಅನ್ನೋದನ್ನ ನಿರ್ಧರಿಸೋದು ಮತದಾರ ಅನ್ನೋದನ್ನ ಮರೆಯುವಂತಿಲ್ಲ.