ಸಂಸತ್ತಿನಲ್ಲಿ ಅತೀ ಹೆಚ್ಚು ಸಂಸದರು ಈ ಹಿಂದೆ ಅಮಾನತು ಆಗಿದ್ದು ಯಾವ ಕಾರಣಕ್ಕೆ – ಇಲ್ಲಿದೆ ಅಚ್ಚರಿಯ ಮಾಹಿತಿ   

ಸಂಸತ್ತಿನಲ್ಲಿ ಅತೀ ಹೆಚ್ಚು ಸಂಸದರು ಈ ಹಿಂದೆ ಅಮಾನತು ಆಗಿದ್ದು ಯಾವ ಕಾರಣಕ್ಕೆ – ಇಲ್ಲಿದೆ ಅಚ್ಚರಿಯ ಮಾಹಿತಿ   

ಇತಿಹಾಸದಲ್ಲೇ ಕಂಡು ಕೇಳರಿಯದ ಪ್ರಮಾಣದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಲಾಗಿದೆ. ವಿಪಕ್ಷ ಸದಸ್ಯರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಸದಸ್ಯರನ್ನು ಸಸ್ಪೆಂಡ್​ನಲ್ಲಿ ಇಡಲಾಗಿದೆ.   ಇದರೊಂದಿಗೆ ಸಂಸದರ ಅಮಾನತು ದಾಖಲೆಗಳೆಲ್ಲ ಮುರಿದು ಬಿದ್ದಿವೆ. ಅಮಾನತು, ವಿಪಕ್ಷಗಳ ಗದ್ದಲ, ಕೋಲಾಹಲದ ನಡುವೆಯೇ ದೂರಸಂಪರ್ಕ ಮಸೂದೆಯಂತಹ ಪ್ರಮುಖ ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಕೇಂದ್ರಾಡಳಿತ ಪ್ರದೇಶ ಪುದುಚೆರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡುವ ಮಸೂದೆಗಳಿಗೆ ಹೆಚ್ಚಿನ ಚರ್ಚೆಯಿಲ್ಲದೆಯೇ ಅಂಗೀಕಾರ ಪಡೆದಿದೆ. ವಿಪಕ್ಷಗಳ ಅರ್ಧಕ್ಕಿಂತಲೂ ಹೆಚ್ಚು ಸದಸ್ಯರು ಅಮಾನತು ಆಗಿರೋದು ಇತಿಹಾಸದಲ್ಲೇ ಇದೇ ಮೊದಲು. ಈ ಹಿಂದೆ, ಪಿಆರ್‌ಎಸ್ ಶಾಸಕಾಂಗ ಸಂಶೋಧನೆಯ ವರದಿಯ ಪ್ರಕಾರ, 1989 ರಲ್ಲಿ 63 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈ ಮೂಲಕ 1989ರಲ್ಲಿ ಒಂದೇ ದಿನದಲ್ಲಿ ಅಮಾನತುಗೊಂಡ ಸಂಸದರ ದಾಖಲೆ ಮುರಿದಿದೆ. ಅಷಕ್ಕೂ ಈ ಹಿಂದೆ ಯಾವ ಕಾರಣಕ್ಕಾಗಿ ಸಂಸದರನ್ನು ಅಮಾನತು ಮಾಡಲಾಗಿತ್ತು ಅನ್ನೋದನ್ನ ನೋಡೋಣ.

ಇದನ್ನೂ ಓದಿ : ಲೋಕಸಭೆ ಕಲಾಪದಲ್ಲಿ ಮುಂದುವರಿದ ಭದ್ರತಾ ಉಲ್ಲಂಘನೆ ಪ್ರಕರಣದ ಗದ್ದಲ – ಮತ್ತೆ ವಿರೋಧ ಪಕ್ಷದ ಇಬ್ಬರು ಸದಸ್ಯರು ಅಮಾನತು!

1989ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಒಂದೇ ದಿನದಲ್ಲಿ 63 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ತನಿಖೆಗಾಗಿ ರಚಿಸಲಾದ ನ್ಯಾಯಮೂರ್ತಿ ಠಕ್ಕರ್ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತಿತ್ತು. ಬೋಫೋರ್ಸ್ ವಿಚಾರದಲ್ಲಿ ಪ್ರತಿಪಕ್ಷಗಳು ರಾಜೀವ್ ಸರ್ಕಾರದ ವಿರುದ್ಧ  ಕೋಲಾಹಲ ಸೃಷ್ಟಿಸಿದ್ದವು. ಈ ವೇಳೆ ಒಂದೇ ದಿನ 63 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಇದು ಇಷ್ಟೊಂದು ಸಂಸದರನ್ನು ಅಮಾನತುಗೊಳಿಸಿದ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಆದ್ರೆ ಡಿಸೆಂಬರ್ 18 ರಂದು ಒಂದೇ ದಿನ 79 ಸಂಸದರನ್ನು ಅಮಾನತುಗೊಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದೆ. ಇನ್ನು 2019ರದಲ್ಲಿ 45 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಅಂದಿನ ಸ್ಪೀಕರ್ ಸುಮಿತ್ರಾ ಮಹಾಜನ್, ಟಿಡಿಪಿ ಮತ್ತು ಎಐಎಡಿಎಂಕೆಯ 45 ಸಂಸದರನ್ನ ಅಮಾನತು ಮಾಡಿದ್ದರು. ಹಾಗೂ 2015ರಲ್ಲಿ ಕಲಾಪ ನಡೆಯುವ ವೇಳೆ ಪ್ರತಿಭಟನೆ ನಡೆಸಿದ್ದಕ್ಕೆ ಹಾಗೂ ಭಿತ್ತಿಪತ್ರ ತೋರಿ, ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ 25 ಸಂಸದರನ್ನ ಲೋಕಸಭೆಯಲ್ಲಿ ಅಮಾನತುಗೊಳಿಸಲಾಗಿತ್ತು.

ಅಷ್ಟಕ್ಕೂ ಇಲ್ಲಿ ವಿಪಕ್ಷಗಳ ವಾದ ಇರೋದು ಇಷ್ಟೇ. ಸಂಸತ್ತಿನ ಭದ್ರತಾ ಲೋಪ ವಿಷಯದ ಬಗ್ಗೆ ಸದನದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹೇಳಿಕೆ ನೀಡುವಂತೆ  ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಆರೋಪಿಗಳಿಗೆ ಪಾಸ್ ಸೌಲಭ್ಯ ಕಲ್ಪಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಆದ್ರೆ ಪ್ರತಿಪಕ್ಷಗಳು ಸಂಸತ್ತಿನ ಕಲಾಪವನ್ನು ನಿಲ್ಲಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿವೆ ಎಂಬುದು ಆಡಳಿತ ಪಕ್ಷದ ವಾದ. ಇದೇ ಕಾರಣಕ್ಕೆ ಧ್ವನಿ ಎತ್ತಿದವರನ್ನೆಲ್ಲಾ ಅಮಾನತು ಮಾಡಲಾಗುತ್ತಿದೆ. ಆದ್ರೆ ವಿಪಕ್ಷ ಸದಸ್ಯರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರ ಹಾಕಿದ್ದಾರೆ. ಲೋಕಸಭೆಯಲ್ಲಿ ಭದ್ರತಾ ಲೋಪ ಆಗಿರುವುದು ತುಂಬಾ ಗಂಭೀರವಾದ ವಿಷಯ. ವಿಪಕ್ಷಗಳ ಸದಸ್ಯರ ನಡವಳಿಕೆ ನೋಡಿದ್ರೆ ಭದ್ರತಾ ಲೋಪ ಎಸಗಿದವರನ್ನು ಬೆಂಬಲಿಸುವಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದುರ್ನಡೆತೆಯ ಗಂಭೀರ ಆರೋಪದ ಮೇಲೆ ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ವಿಪಕ್ಷಗಳ ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಈ ಸದಸ್ಯರು ಚಳಿಗಾಳಿಲದ ಅಧಿವೇಶನದ ಉಳಿದ ಅವಧಿಗೆ ಹಾಜರಾಗುವಂತಿಲ್ಲ. ಹಾಗೂ ಅಮಾನತುಗೊಂಡ ಸದಸ್ಯರು ಸಮಿತಿಗಳ ಚೇಂಬರ್‌ಗೆ ಪ್ರವೇಶಿಸಲು ಅಥವಾ ಸಭೆಗಳಿಗೆ ಹಾಜರಾಗಲು ಸಾಧ್ಯವಿಲ್ಲ. ಹಾಗೂ ಕಲಾಪದಲ್ಲಿ ಚರ್ಚೆಗೆ ಸೂಚನೆ ನೀಡಲು ಅರ್ಹರಾಗಿರುವುದಿಲ್ಲ. ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವ ಹಕ್ಕನ್ನು ಕೂಡ ಕಳೆದುಕೊಳ್ಳುತ್ತಾರೆ. ಒಟ್ಟಾರೆ 6 ಜನರ ತಂಡ ಲೋಕಸಭೆ ಮೇಲೆ ನಡೆಸಿದ ದಾಳಿ ಬಿರುಗಾಳಿ ಎಬ್ಬಿಸಿದೆ. ವಿಪಕ್ಷ ನಾಯಕರು ಭದ್ರತಾ ಲೋಪವನ್ನೇ ಅಸ್ತ್ರ ಮಾಡಿಕೊಂಡು ಆಡಳಿತ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಶಿಸ್ತಿನ ಆರೋಪ ನೀಡಿ ಸಂಸದರನ್ನು ಸ್ಪೀಕರ್ ಅಮಾನತು ಮಾಡ್ತಿದ್ದಾರೆ. ಆದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ ಆಡಳಿತ ಮತ್ತು ವಿಪಕ್ಷಗಳ ಗದ್ಧಲದ ನಡುವೆ ಕಲಾಪ ಹಾಳಾಗುತ್ತಿರೋದು ನಿಜಕ್ಕೂ ದುರಂತ.

Shantha Kumari