ಕೆಮ್ಮು, ಜ್ವರ, ಸುಸ್ತು ಇದ್ದರೆ ನಿರ್ಲಕ್ಷ್ಯ ಬೇಡ – ಕೊರೊನಾ ಕಡಿವಾಣಕ್ಕೆ ಸಜ್ಜಾಯ್ತು ಆರೋಗ್ಯ ಇಲಾಖೆ
ಕೇರಳದಲ್ಲಿ ಕೊವಿಡ್ 19 ಜೆಎನ್.1 ರೂಪಾಂತರಿ ಸೋಂಕಿನ ತೀವ್ರತೆ ಹೆಚ್ಚಾಗ್ತಿರೋದ್ರಿಂದ ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ ಪರೀಕ್ಷೆ ನಡೆಸುವುದು, ವರದಿ ಸಲ್ಲಿಸುವುದು ಅಗತ್ಯವಾಗಿದೆ. ಆದ್ರೆ ನಿರ್ಬಂಧ ಹೇರುವ ಅವಶ್ಯಕತೆಯಿರುವುದಿಲ್ಲ ಎಂದಿದೆ. ಸರ್ಕಾರಿ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಲ್ಲಾ SARI ಪ್ರಕರಣಗಳು ಹಾಗೂ 20 ಐಎಲ್ ಐ ಪ್ರಕರಣಗಳ ಪೈಕಿ 1 ಐಎಲ್ ಐ ಪ್ರಕರಣವನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಹಾಗೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಡಿಸೆಂಬರ್ 3-4ನೇ ವಾರದೊಳಗೆ ಮಾಕ್ ಡ್ರಿಲ್ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ : ದೇಶದಲ್ಲಿ ಕೊರೊನಾ ಕರಿನೆರಳು – ಕರ್ನಾಟಕದಲ್ಲಿ ಹೈಅಲರ್ಟ್, KSRTC, BMTC ಬಸ್ಗಳಲ್ಲಿ ಮಾಸ್ಕ್ ಕಡ್ಡಾಯ!
ಕೊರೊನಾ ವೈರಸ್ ರೂಪಾಂತರಿ ಜೆಎನ್.1 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕ್ರಿಸ್ಮಸ್, ನ್ಯೂ ಇಯರ್ ಸೇರಿದಂತೆ ವರ್ಷಾಂತ್ಯದಲ್ಲಿ ಸೆಲೆಬ್ರೇಷನ್ಸ್ ಜಾಸ್ತಿ ಇರುತ್ತೆ. ಹೀಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲು ಸರ್ಕಾರ ಈಗ್ಲಿಂದಲೇ ಎಚ್ಚೆತ್ತುಕೊಳ್ತಿದೆ. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ, ಕೊರೊನಾ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಚರ್ಚೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸಿದ್ಧವಾಗಿಡಲಾಗಿದೆ. ಹಾಗೇ ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಶೀತ, ಜ್ವರ ಕೆಮ್ಮು ಇರುವವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರಷ್ಟೇ ನಿಷೇಧ, ನಿರ್ಬಂಧ ಇತ್ಯಾದಿ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ.
ಸದ್ಯಕ್ಕೆ ಕರ್ನಾಟಕದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ನಿಜ. ಆದ್ರೆ ಕೇರಳದಲ್ಲಿ ಈಗಾಗಲೇ ಇಬ್ಬರನ್ನು ಬಲಿ ಪಡೆದಿರುವ ವೈರಸ್ ತೀವ್ರವಾಗಿ ಹರಡುತ್ತಿದೆ. ಕೇರಳದಲ್ಲಿ ಒಂದೇ ದಿನದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, 33 ರಿಂದ ಒಮ್ಮೆಲೆ 768 ಕ್ಕೆ ಹೆಚ್ಚಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಕೆಮ್ಮು, ಜ್ವರ, ಸುಸ್ತು, ನೆಗಡಿ, ಮೂಗು ಸೋರುವಿಕೆ, ಅತಿಸಾರ ಮತ್ತು ತಲೆನೋವು ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಕಣ್ಣೂರಿನ ಪಾನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೀ ವೈರಸ್ ಹಾವಳಿ ಮಿತಿ ಮೀರುವ ಸಾಧ್ಯತೆಯೂ ಇದೆ.
ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣ ಹೊಂದಿರೋದ್ರಿಂದ ಮಾಸ್ಕ್ ಧರಿಸಬೇಕು. ಇದ್ರಿಂದ ಕೆಮ್ಮುವಾಗ, ಸೀನುವಾಗ ವೈರಾಣುಗಳು ಬೇರೆಯವರಿಗೆ ಹರಡದಂತೆ ತಡೆಯಬಹುದು. ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ರೋಗ ಲಕ್ಷಣ ಇದ್ದರೆ ಕೇವಲ ಮಾತ್ರೆಗಳನ್ನ ತೆಗೆದುಕೊಂಡು ನುಂಗದೆ ಅಥವಾ ಕಷಾಯಗಳನ್ನ ಮಾಡಿಕೊಂಡು ಮನೆಯಲ್ಲೇ ಕೂರದೆ ವೈದ್ಯರನ್ನು ಸಂಪರ್ಕ ಮಾಡಬೇಕು. ಹಾಗೂ ಮದುವೆ, ಶುಭ ಸಮಾರಂಭಗಳು ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನ ಕಡಿಮೆ ಮಾಡಬೇಕು. ಎಲ್ಲದಕ್ಕಿಂತ ಮೇನ್ ಆಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಹಾಗೂ ಯಾರಿಗಾದರೂ ಕೊರೊನಾ ಪಾಸಿಟಿವ್ ಅಥವಾ ರೋಗಲಕ್ಷಣಗಳು ಇರುವವರು ಇದ್ದಾಗ ಅವರಿಂದ ಅಂತರ ಕಾಯ್ದುಕೊಳ್ಳವೇಕು. ಅವರನ್ನು ತಬ್ಬಿಕೊಳ್ಳೋದಾಗ್ಲಿ, ಕೈ ಕುಲುಕೋದಾಗ್ಲಿ ಮಾಡಬಾರದು. ನೀರಿನ ಬಾಟಲಿ, ಆಹಾರ, ಕರ್ಚೀಫ್, ಟವೆಲ್ ಸೇರಿದಂತೆ ಯಾವ ವಸ್ತುಗಳನ್ನೂ ಸೋಂಕಿತರ ಜೊತೆ ಹಂಚಿಕೊಳ್ಳಬಾರದು. ಹಾಗೂ ಸೋಪಿನಿಂದ ಕೈತೊಳೆದುಕೊಳ್ಳುತ್ತಿರಬೇಕು. ಆದ್ರೆ ಪದೇ ಪದೇ ಕಣ್ಣು, ಬಾಯಿ ಮುಟ್ಟಿಕೊಳ್ಳಬಾರದು. ಹಾಗೂ ಎಲ್ಲೆಂದರಲ್ಲಿ ಉಗುಳಬಾರದು.
ಅಲ್ಲದೆ ಈಗ ಚಳಿಗಾಲ ಆಗಿರುವುದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಮನೆಯಲ್ಲಿ ಪುಟ್ಟ ಮಕ್ಕಳು, ಹಿರಿಯರು, ವಯಸ್ಸಾದವರು ಗರ್ಭಿಣಿಯರು ಇದ್ದರೆ ಚಳಿಗಾಲದ ಸಂದರ್ಭ ದಲ್ಲಿ ಬಹಳ ಹುಷಾರಾಗಿರಬೇಕು. ಯಾಕೆಂದ್ರೆ ಈ ಸಮಯದಲ್ಲಿ ದೇಹದ ರೋಗ ನಿರೋಧಕ ಶಕ್ತಿಯ ಅಥವಾ ಇಮ್ಯೂನಿಟಿ ಪವರ್ ಬಹಳ ಬೇಗನೇ ಕಡಿಮೆ ಆಗಿಬಿಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇಷ್ಟು ದಿನ ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್ ಅವಶ್ಯಕತೆ ಇರಲಿಲ್ಲ. ಆದ್ರೆ ಇನ್ಮುಂದೆ ಇದೆಲ್ಲವನ್ನೂ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅಂತಿಮವಾಗಿ ಸರ್ಕಾರ ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕೂಡ ಜನ ಜಾಗರೂಕತೆಯಿಂದ ಇರಬೇಕಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಸೋಂಕಿನ ನಿಯಂತ್ರಣವೂ ಕಷ್ಟವಾಗುತ್ತದೆ.