ಆಸ್ಪತ್ರೆಯ ಆವರಣದಲ್ಲಿ ಸೀಮಂತ ಕಾರ್ಯಕ್ರಮ – ಸಂಭ್ರಮದ ಜೊತೆ ಜೊತೆಗೆ ತಜ್ಞ ವೈದ್ಯರಿಂದ ಆರೋಗ್ಯದ ಬಗ್ಗೆ ಮಾಹಿತಿ
ಅಮ್ಮನಾಗುವ ಅನುಭವವೇ ಬಲು ಅನನ್ಯ. ಒಡಲಲ್ಲಿ ಪುಟ್ಟ ಕಂದಮ್ಮ ಇದೆ ಎಂದಾಗಲೇ ಮಹಿಳೆಯರಲ್ಲಾಗುವ ಬದಲಾವಣೆಗಳು ಒಂದೆರಡಲ್ಲ. ಹಗಲು ರಾತ್ರಿ ಕಂದನ ಬಗ್ಗೆಯೇ ಆಲೋಚನೆ. ಹೆಜ್ಜೆ ಹೆಜ್ಜೆಗೂ ಮಗುವಿನದ್ದೇ ಚಿಂತನೆ. ಕಂದನಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿ ಸಣ್ಣ ಸಣ್ಣ ವಿಚಾರಗಳಲ್ಲೂ ಖುಷಿ ಪಡುತ್ತಾರೆ. ಹಾಗೂ ಕೆಲವು ಸನ್ನಿವೇಶಗಳನ್ನು ನೆನೆದು ಭಯಭೀತರಾಗುತ್ತಾರೆ. ಇಂತಹ ಗರ್ಭಿಣಿಯರ ಮನಸ್ಥಿತಿ ಅರಿತ ಆಸ್ಪತ್ರೆಯೊಂದು ಸೀಮಂತದ ಜೊತೆ ಗರ್ಭಿಣಿಯರಿಗಿದ್ದ ಕೆಲ ಗೊಂದಲಗಳನ್ನೂ ದೂರ ಮಾಡಿದೆ.
ಇದನ್ನೂ ಓದಿ : ನಿದ್ದೆಯಲ್ಲೇ ಕಳೆದುಹೋಗುವ ಮುನ್ನ ಎಚ್ಚರ! – ಅತಿಯಾಗಿ ನಿದ್ರೆ ಮಾಡಿದ್ರೆ ಆರೋಗ್ಯಕ್ಕೇ ಕುತ್ತು!
ತಾಯ್ತನದ ಖುಷಿಯಲ್ಲಿರುವ ಗರ್ಭಿಣಿಯರಿಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯು ತಮ್ಮ ಆಸ್ಪತ್ರೆ ಆವರಣದಲ್ಲೇ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಆರೈಕೆ ಮತ್ತು ಚಟುವಟಿಕೆ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದರು. ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡುವ ಮೂಲಕ ಬಹುಮಾನಗಳನ್ನೂ ನೀಡಲಾಯ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಯಾಸ್ಮಿನ್ ಇಮ್ದಾದ್ ಅವರು ಗರ್ಭಾವಸ್ಥೆಯಲ್ಲಿ ಮಾನಸಿಕ ಸ್ವಾಸ್ಥ್ಯ ಕುರಿತಂತೆ ಗರ್ಭಿಣಿಯರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಹಾಗೂ ಮಮ್ಮಿ ಮೇಕ್ ಓವರ್ ವಿಷಯ ಕುರಿತಂತೆ ಗರ್ಭಾವಸ್ಥೆಯ ಪರಿವರ್ತನೆ ಹಂತದಲ್ಲಿನ ಯೋಗಕ್ಷೇಮದ ಬಗ್ಗೆ ಡಾ. ಕರೀಷ್ಮಾ ಕಾಗೋಡು ಅವರು ಸಲಹೆಗಳನ್ನ ನೀಡಿದ್ರು.
ಆಸ್ಪತ್ರೆಯ ಡಾ. ಸುಶಾಂತ್ ಶಿವಸ್ವಾಮಿ ಅವರು ಮಾತನಾಡಿ ಮಗುವಿನ ನಿರೀಕ್ಷೆಯಲ್ಲಿರುವ ಪಾಲಕರಿಗೆ ನವಜಾತ ಶಿಶುಗಳ ರಕ್ಷಣೆ, ಆರೈಕೆ ಕುರಿತಂತೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸೀಮಂತ ಕಾರ್ಯಕ್ರಮದ ಬಗ್ಗೆ ಗರ್ಭಿಣಿಯೊಬ್ಬರು ಮಾತನಾಡಿ, ಇದೊಂದು ಭಾವನಾತ್ಮಕ ಸನ್ನಿವೇಶವಾಗಿದ್ದು, ಕುಟುಂಬದಿಂದ ದೂರ ಇರುವ ನಮ್ಮಂಥವರಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ಖುಷಿ ಕೊಟ್ಟಿತು. ಜೊತೆಗೆ ಸರಿಯಾದ ಸಮಯಕ್ಕೆ ವೈದ್ಯರು ನೀಡಿದ ಸಲಹೆಗಳು ಮುನ್ನೆಚ್ಚರಿಕೆ ವಹಿಸಲು ಸಹಕಾರಿಯಾಯಿತು ಎಂದರು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ದಂಪತಿ ಭಾಗವಹಿಸಿದ್ದರು.