ಕೃಷ್ಣ ಜನ್ಮಭೂಮಿಯೋ.. ಶಾಹಿ ಮಸೀದಿಯೋ – ಸಮೀಕ್ಷೆಯಿಂದ ಬಯಲಾಗುತ್ತಾ ಜಾಗದ ರಹಸ್ಯ!
ಉತ್ತರ ಪ್ರದೇಶದ ಮಥುರಾದ ಶ್ರೀಕೃಷ್ಣ ಜನ್ಮ ಸ್ಥಳವೂ ಭಾರೀ ಚರ್ಚೆಯಲ್ಲಿದೆ. ಭಗವಾನ್ ಶ್ರೀಕೃಷ್ಣನ ದೇವಾಲಯವನ್ನು ನಾಶಗೊಳಿಸಿ ಆ ಜಾಗದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಮಸೀದಿಯನ್ನು ಕೆಡವಿ ಆ ಜಾಗವನ್ನು ಶ್ರೀಕೃಷ್ಣ ದೇಗುಲದ ಟ್ರಸ್ಟ್ ಗೆ ನೀಡಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಹಸಿರು ನಿಶಾನೆ ತೋರಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಮಥುರಾದಲ್ಲಿರುವ ಶ್ರೀಕೃಷ್ಣ ದೇಗುಲ ಮತ್ತು ಶಾಹಿ ಮಸೀದಿ ವಿಚಾರವಾಗಿ ಹಿಂದಿನಿಂದಲೂ ವಿವಾದ ಇದೆ. ದೇಗುಲದ ಜಾಗದಲ್ಲಿ ಮಸೀದಿಯನ್ನು ಕಟ್ಟಿದ್ದು, ಹೀಗಾಗಿ ದೇವಸ್ಥಾನವನ್ನು ಪುನರ್ ನಿರ್ಮಿಸಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. 2020ರಲ್ಲಿ ಹಿಂದು ಪರ ಕಕ್ಷಿದಾರರೊಬ್ಬರು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಪ್ರಕರಣದಲ್ಲಿ ರಾಮಮಂದಿರ ನಿರ್ಮಿಸಲು ಸುಪ್ರೀಂಕೋರ್ಟ್ 2019ರಲ್ಲಿ ನೀಡಿದ್ದ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ಮಥುರಾ ಶ್ರೀಕೃಷ್ಣ ಜನ್ಮಸ್ಥಾನದ ವಿಚಾರದಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಅರ್ಜಿಯನ್ನು ಜಿಲ್ಲಾ ಕೋರ್ಟ್ ವಜಾಗೊಳಿಸಿತ್ತು. ಈ ಆದೇಶದ ಅನಂತರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಪೋನ್ ಸದ್ದು! – ಯಾದಗಿರಿಯಿಂದ ಪಾಕಿಸ್ತಾನಕ್ಕೆ ಕಾಲ್!
1951ರಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು ಪುನರ್ ನಿರ್ಮಿಸಲು ಮತ್ತು ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಇದಾದ ಬಳಿಕ 1958 ರಲ್ಲಿ ಶ್ರೀ ಕೃಷ್ಣ ಜನ್ಮ ಸ್ಥಾನ್ ಸೇವಾ ಸಂಘ ಎಂಬ ಸಂಘಟನೆಯನ್ನು ರಚಿಸಲಾಯಿತು. ಆದರೆ ಈ ಸಂಸ್ಥೆಯು ಕಾನೂನುಬದ್ದವಾಗಿ ಭೂಮಿಯನ್ನು ಹೊಂದಿಲ್ಲದಿದ್ದರೂ, ಟ್ರಸ್ಟ್ಗೆ ನಿಯೋಜಿಸಲಾದ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿತ್ತು. 1964ರಲ್ಲಿ ಈ ಸಂಸ್ಥೆಯು ಇಡೀ ಭೂಮಿಯ ಮೇಲೆ ಹಕ್ಕು ಸಾಧಿಸಲು ಸಿವಿಲ್ ಮೊಕದ್ದಮೆ ಹೂಡಿತ್ತು. ಆದರೆ 1968ರಲ್ಲಿ ಸ್ವತಃ ಮುಸ್ಲಿಮರ ಜತೆ ಒಪ್ಪಂದದ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಂಡಿತು. ಈ ಒಪ್ಪಂದದ ಪ್ರಕಾರ ಮುಸ್ಲಿಂ ಕಡೆಯವರು ಕೆಲವು ಪ್ರದೇಶವನ್ನು ದೇವಾಲಯಕ್ಕೆ ಬಿಟ್ಟುಕೊಟ್ಟರು. ಬದಲಾಗಿ ಅವರಿಗೆ ಹತ್ತಿರದ ಕೆಲವು ಸ್ಥಳಗಳನ್ನು ನೀಡಲಾಯಿತು.
ಹೀಗೆ ಒಪ್ಪಂದದ ವಿಚಾರ ಉಲ್ಲೇಖವಾಗಿದ್ರೂ ಕೂಡ ಸಂಪೂರ್ಣ ಜಾಗ ಶ್ರೀಕೃಷ್ಣ ದೇಗುಲಕ್ಕೆ ಸೇರಿದ್ದು ಎಂಬ ವಾದವಿದೆ. ಮಸೀದಿಯ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದು, ಮಸೀದಿಯೊಳಗೆ ಹಲವು ದೇವಾಲಯಗಳಿರುವ ಬಗ್ಗೆ ಸಂಕೇತಗಳಿವೆ. ಅಲ್ಲದೆ, ಮಸೀದಿಯ ಕೆಳಗೆ ದೇವತೆಯ ಗರ್ಭಗುಡಿ ಮತ್ತು ಹಿಂದೂ ವಾಸ್ತುಶಿಲ್ಪದ ಪುರಾವೆಗಳು ಇವೆ. ಇದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಹಿಂದೂ ಸಮುದಾಯದ ಕೆಲವರು ಬಯಸಿದ್ದು, ಇದಕ್ಕಾಗಿ ಒಂದು ವರ್ಷದ ಹಿಂದೆಯೇ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಈದ್ಗಾ ಮಸೀದಿಯ ಕುರಿತು ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸೇನೆ ಒತ್ತಾಯಿಸಿತ್ತು. ಅಲ್ಲದೆ ದೇಗುಲ ಮತ್ತು ಮಸೀದಿ ಇರುವ ಜಾಗದ ಬಗ್ಗೆಯೂ ಹಲವು ಗೊಂದಲಗಳಿವೆ.
1935ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ 13.37 ಎಕರೆ ಭೂಮಿಯನ್ನು ಬನಾರಸ್ನ ರಾಜಾ ಕೃಷ್ಣ ದಾಸ್ಗೆ ಮಂಜೂರು ಮಾಡಿತ್ತು. 1951 ರಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಈ ಟ್ರಸ್ಟ್ ಅನ್ನು 1958 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು 1977 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಹೆಸರಿನಲ್ಲಿ ನೋಂದಾಯಿಸಲಾಗಿದೆ. 1968 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ಸಮಿತಿಯ ನಡುವಿನ ಒಪ್ಪಂದದಲ್ಲಿ ಟ್ರಸ್ಟ್ ಈ 13.37 ರ ಮಾಲೀಕತ್ವವನ್ನು ಪಡೆದಿದೆ. ಎಕರೆಗಟ್ಟಲೆ ಜಮೀನು ಮತ್ತು ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿ ನಿರ್ವಹಿಸುತ್ತಿದೆ. ಇನ್ನು ಮಸೀದಿಯು ಮಥುರಾ ನಗರದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದ ಸಂಕೀರ್ಣದ ಪಕ್ಕದಲ್ಲಿಯೇ ಇದೆ. ಈ ಜಾಗವನ್ನ ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಔರಂಗಜೇಬನು ಶ್ರೀ ಕೃಷ್ಣನ ಜನ್ಮಸ್ಥಳದ ಮೇಲೆ ನಿರ್ಮಿಸಲಾದ ಪ್ರಾಚೀನ ಕೇಶವನಾಥ ದೇವಾಲಯವನ್ನು ನಾಶಪಡಿಸಿದನು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. 1669-70ರ ದಶಕದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ವಿಷಯದ ಕುರಿತು ನಿರಂತರವಾಗಿ ವಾದ- ಪ್ರತಿವಾದಗಳು ನಡೆಯುತ್ತಲೇ ಇವೆ. ಇದೀಗ ಪುನಃ ಆ ಜಾಗದ ಕುರಿತು ಪ್ರಶ್ನೆ ಎದ್ದಿದ್ದು ಕೋರ್ಟ್ನಲ್ಲಿ ವಾದ – ಪ್ರತಿವಾದಗಳು ನಡೆಯುತ್ತಿವೆ. ಇದೀಗ ಮಥುರಾ ನ್ಯಾಯಾಲಯವು ಶಾಹಿ ಈದ್ಯಾ ಸಂಕೀರ್ಣದಲ್ಲಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಆಯುಕ್ತರನ್ನು ನೇಮಿಸಿದೆ. ಮಸೀದಿ ಮತ್ತು ಪಕ್ಕದ ದೇವಸ್ಥಾನದ ವಿವಾದದ ಬಗ್ಗೆ ಈಗಾಗಲೇ ಲಿಖಿತ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಸಮೀಕ್ಷೆ ಬಳಿಕ ಕೋರ್ಟ್ ಗೆ ಸಲ್ಲಿಕೆಯಾಗುವ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ.