ಯುವನಿಧಿ ಯೋಜನೆ ಜಾರಿ ದಿನಾಂಕ ಮುಂದೂಡಿದ ಸರ್ಕಾರ!
ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಈಗಾಗಲೇ ನಾಲ್ಕು ಗ್ಯಾರಂಟಿಗಳು ಜಾರಿಯಾಗಿವೆ. ಮತ್ತೊಂದು ಮಹತ್ವಾಕಾಂಕ್ಷಿ ಗ್ಯಾರಂಟಿ ಯುವನಿಧಿ ಯೋಜನೆ 2024ರ ಜನವರಿಯಲ್ಲಿ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಇದೀಗ ಯುವನಿಧಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಹೌದು, 2024ರ ಜನವರಿಯಲ್ಲಿ ಯುವನಿಧಿ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಅವಕಾಶವನ್ನು ನೀಡಲಾಗುವುದು ಎಂದು ಹೇಳಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಸರ್ಕಾರ ಮಂದೂಡಿದ್ದು, ಬೇರೊಂದು ದಿನಾಂಕವನ್ನು ನಿಗದಿಪಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಪೋನ್ ಸದ್ದು! – ಯಾದಗಿರಿಯಿಂದ ಪಾಕಿಸ್ತಾನಕ್ಕೆ ಕಾಲ್!
ಈ ಹಿಂದೆ ಸರ್ಕಾರ ಡಿಸೆಂಬರ್ 21ರಂದು ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಿಸಲು ಚಿಂತನೆ ನಡೆಸಿತ್ತು. ಆದರೆ, ಕಾರಣಾಂತರಗಳಿಂದ ಅರ್ಜಿ ಸಲ್ಲಿಕೆಯನ್ನು ಮುಂದೂಡಿದ್ದು, ಡಿಸೆಂಬರ್ 26ಕ್ಕೆ ನಿಗದಿಪಡಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಲು ಅರ್ಹರು. ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೊಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ. ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಹೊಂದಿರುವವರಿಗೆ 1,500 ಆರ್ಥಿಕ ನೆರವು ನೀಡಲಾಗುತ್ತದೆ. ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ನಿಗದಿ ಮಾಡಿದ್ದರೆ, ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಸಿಗಲಿದೆ. ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನಿರುದ್ಯೋಗಿ ಯುವಕರಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?
ಯುವನಿಧಿಗೆ ಅರ್ಜಿ ಸಲ್ಲಿಸಲು ಮೊದಲು ಅಭ್ಯರ್ಥಿ ಕರ್ನಾಟಕದವರಾಗಿರಬೇಕು. ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ, ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ(ಅನ್ವಯಿಸಿದಲ್ಲಿ), ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣಪತ್ರ ದಾಖಲೆಯನ್ನೊಳಗೊಂಡ ಸ್ವಯಂ ಘೋಷಣಾ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.