ಸಂಸತ್ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ 8 ಲೋಕಸಭೆ ಸಿಬ್ಬಂದಿ ಅಮಾನತು!
ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇಬ್ಬರು ಸಂಸತ್ ಒಳಗೆ ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ, ಐವರನ್ನು ಬಂಧಿಸಲಾಗಿದೆ. ಮತ್ತೊರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಭಾರಿ ಭದ್ರತಾ ಲೋಪ ಪ್ರರಕಣಕ್ಕೆ ಸಂಬಂಧಿಸಿದಂತೆ 8 ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಕಲಾಪ ನಡೆಯುತ್ತಿರುವ ವೇಳೆ ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ಆರೋಪಿಗಳು ಸಂಸದರ ಬಳಿ ಜಿಗಿದು ಹಳದಿ ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದಾರೆ. ಈ ಘಟನೆ ಈಗ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ 8 ಲೋಕಸಭಾ ಸಿಬ್ಬಂದಿಯನ್ನು ಗುರುವಾರ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಗಳಾದ ಸಾಗರ್ ಶರ್ಮಾ, ಡಿ. ಮನೋರಂಜನ್, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ವಿವಿಧ ರಾಜ್ಯಗಳಿಂದ ಬಂದವರು ಎಂದು ಹೇಳಲಾಗುತ್ತಿದೆ. ಕಳೆದ 18 ತಿಂಗಳುಗಳಲ್ಲಿ ಹಲವಾರು ಬಾರಿ ಭೇಟಿಯಾಗಿ ಸಂಸತ್ ಭವನದ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ. ಈ ನಾಲ್ವರೂ “‘ಭಗತ್ ಸಿಂಗ್ ಫ್ಯಾನ್ ಕ್ಲಬ್” ಹೆಸರಿನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಂಪರ್ಕ ಹೊಂದಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.