‘ಆಕಾಶ ಗಡಿಯ ದಾಟಿ ತಂದಾನು ಬೆಳಕು ಕೋಟಿ’ – ಅಭಿಮಾನಿಗಳ ಮನಗೆದ್ದ ಸಲಾರ್ ಸಾಂಗ್
ಅಭಿಮಾನಿಗಳ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಹಾಡು ಡಿಸೆಂಬರ್ 13ರಂದು ಬಿಡುಗಡೆಯಾಗಿದೆ. ಪ್ರಭಾಸ್ ಹಾಗೂ ಪೃಥ್ವಿರಾಜ್ ಗೆಳೆತನ ಎಷ್ಟು ಗಾಢವಾದದ್ದು ಎಂದು ಸಾರಿ ಹೇಳುವ ಈ ಹಾಡು ಕಿವಿಗೆ ಇಂಪು.. ಮನಸಿಗೆ ತಂಪು ನೀಡುತ್ತಿದೆ. ಹಾಡಿನ ನಡುವೆ ಸಣ್ಣ ವಿಡಿಯೋ ತುಣುಕುಗಳನ್ನು ಸಹ ಬಳಸಲಾಗಿದೆ. ಹಾಡಿನಲ್ಲಿ ಪ್ರಭಾಸ್ ಪಾತ್ರದ ಒಳ್ಳೆಯತನದ ಜೊತೆಗೆ ಆ ಪಾತ್ರ ಗೆಳೆತನಕ್ಕೆ ನೀಡುವ ಗೌರವದ ಬಗ್ಗೆ ತೋರಿಸಲಾಗಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: ಉಗ್ರಂ + ಕೆಜಿಎಫ್ = ಸಲಾರ್? – ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಬಗ್ಗೆ ಜನ ಹೇಳೋದೇನು..?
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದಲ್ಲಿ ಗೆಳೆತನವೇ ಹೈಲೆಟ್ಸ್. ‘ಸಲಾರ್’ ಸಿನಿಮಾ ಗೆಳೆತನದ ಸುತ್ತ ಸುತ್ತುವುದು ಈಗಾಗಲೇ ಅಭಿಮಾನಿಗಳಿಗೆ ಮನದಟ್ಟಾಗಿದೆ. ಆದರೆ, ಡಿಸೆಂಬರ್ 13ರಂದು ರಿಲೀಸ್ ಆಗಿರುವ ‘ಆಕಾಶ ಗಡಿಯ ದಾಟಿ ತಂದಾನು ಬೆಳಕು ಕೋಟಿ’ ಹಾಡಂತೂ ಅಭಿಮಾನಿಗಳ ಮನಗೆದ್ದಿದೆ. ಮೆಲೋಡಿಯಸ್ ಆಗಿರುವ ಈ ಹಾಡು ಪದೇ ಪದೇ ಕೇಳುವಂತಿದೆ.
‘ಕೆಜಿಎಫ್’ ಸಿನಿಮಾದಲ್ಲಿದ್ದ ಮದರ್ ಸೆಂಟಿಮೆಂಟ್ ಹಾಡಿನಂತೆಯೇ ‘ಸಲಾರ್’ನಲ್ಲಿ ಗೆಳೆತನದ ಸೆಂಟಿಮೆಂಟ್ ಹಾಡನ್ನು ಪ್ರಶಾಂತ್ ನೀಲ್ ಬಳಸಿದ್ದಾರೆ. ಹಾಡಿನ ನಡುವೆ ಬಳಸಲಾಗಿರುವ ವಿಡಿಯೋ ತುಣುಕಿನಲ್ಲಿ, ಪ್ರಭಾಸ್, ತಮ್ಮ ಗೆಳೆಯ ಪೃಥ್ವಿರಾಜ್ ಸುಕುಮಾರನ್ ಅನ್ನು ಎಷ್ಟು ಕಾಳಜಿ ಮಾಡುತ್ತಾನೆ ಎಂಬುದನ್ನು ತೋರಿಸಲಾಗಿದೆ. ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಯಾವುದೋ ಕಾರಣಕ್ಕೆ ಬಹಳ ಡಿಸ್ಟರ್ಬ್ ಆಗಿರುವ ಹಾಗೆಯೂ ತೋರಿಸಲಾಗಿದೆ. ಹಾಡು ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಇಲ್ಲೂ ಕೆಜಿಎಫ್ ರವಿ ಬಸ್ರೂರು ಮ್ಯೂಸಿಕ್ ಮ್ಯಾಜಿಕ್ ಮಾಡಿದೆ. ಸಲಾರ್ ಫಸ್ಟ್ ಸಾಂಗ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.
‘ಸಲಾರ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ನಾಯಕಿಯಾಗಿ ಶೃತಿ ಹಾಸನ್ ನಟಿಸಿದ್ದಾರೆ. ಜಗಪತಿ ಬಾಬು, ಕನ್ನಡದ ಮಧು ಗುರುಸ್ವಾಮಿ, ಗರುಡ ರಾಮಚಂದ್ರ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಹೊಂಬಾಳೆಯ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.
‘ಸಲಾರ್ ಸಿನಿಮಾದಲ್ಲಿ ಮಲಯಾಳಂನ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಹೊಸಬಗೆಯ ಪಾತ್ರ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ವಿಶೇಷವೆಂದರೆ ತಮ್ಮ ಪಾತ್ರಕ್ಕೆ ಐದೂ ಭಾಷೆಗಳಲ್ಲಿ ತಾವೇ ಡಬ್ ಮಾಡಿದ್ದಾರಂತೆ ಪೃಥ್ವಿರಾಜ್.