ಸಸ್ಯಕಾಶಿಯಲ್ಲಿ ಜ. 18 ರಿಂದ ಫಲಪುಷ್ಪ ಪ್ರದರ್ಶನ – ಈ ಬಾರಿ ಮೈದಳೆಯಲಿದೆ ವಿಶ್ವಗುರು ಬಸವಣ್ಣನ ಪ್ರತಿಕೃತಿ!
ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಫಲಪುಷ್ಪ ಪ್ರದರ್ಶನ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಲಿದೆ. ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿಶ್ವಗುರು ಬಸವಣ್ಣನವರ ಪುಷ್ಪ ಪ್ರತಿಕೃತಿ ಮೈದಳೆಯಲಿದೆ!
ಹೌದು, ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬಸವಣ್ಣನವರ ಕುರಿತಾದ ಆಕರ್ಷಣೆಗಳನ್ನು ಪುಷ್ಪಕೃತಿಗಳಲ್ಲಿ ನಿರ್ಮಿಸಲು ರಾಜ್ಯ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಜನವರಿ 18 ರಿಂದ 28 ರವರೆಗೆ ಅಂದರೆ ಬರೋಬ್ಬರಿ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ವ್ಯಕ್ತಿಯ ಹತ್ತಿರದಿಂದಲೇ ಪಾಸ್ ಆಯ್ತು ದೈತ್ಯ ಹುಲಿ! – ಅಬ್ಬಬ್ಬಾ.. ಬೆಚ್ಚಿ ಬೀಳಿಸುವ ದೃಶ್ಯವಿದು!
12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಸಮಾಜ ಸುಧಾರಕರಾದ ಬಸವಣ್ಣನವರು ಲಿಂಗ ತಾರತಮ್ಯದೊಂದಿಗೆ ಮೂಢನಂಬಿಕೆಗಳನ್ನು ನಿರಾಕರಿಸಿದರು. ಮಹಿಳೆಯರಿಗೂ ಸಮಾನತೆಯನ್ನು ಪ್ರತಿಪಾದಿಸಿದವರು ಬಸವಣ್ಣ. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ. ಹೀಗಾಗಿ, ಈ ಬಾರಿ ಬಸವಣ್ಣ ಮತ್ತು ‘ವಚನ ಸಾಹಿತ್ಯ’ ಕುರಿತಂತೆ ಪುಷ್ಪ ದರಿಗಳನ್ನು ನಿರ್ಮಿಸಲಾಗುತ್ತಿದೆ.
ಇದರೊಂದಿಗೆ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆ. ಪ್ರದರ್ಶನ ಸಂಬಂಧ ತಜ್ಞರು, ಸಂಶೋಧಕರು, ವಚನ ಸಾಹಿತಿಗಳು, ಪ್ರಾಧ್ಯಾಪಕರು ಮತ್ತಿತರರ ಸಲಹೆ, ಮಾರ್ಗದರ್ಶನ ಪಡೆಯುವ ಕಾರ್ಯದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಡಾ. ಎಂ. ಜಗದೀಶ್, ಉಪ ನಿರ್ದೇಶಕಿ ಜಿ. ಕುಸುಮಾ ಮತ್ತಿತರರು ತೊಡಗಿದ್ದಾರೆ.
ಬಸವಣ್ಣನವರ ಪ್ರತಿಮೆಯನ್ನು ತಾಳೆಗರಿಗಳಲ್ಲಿ ಬರೆಯುತ್ತಿರುವುದು ಅಥವಾ ಅಶ್ವಾರೂಢ ಪ್ರತಿಮೆಯೋ ಇಲ್ಲವೇ ಎಲ್ಲಾಧರ್ಮದ ಶರಣರು, ಕವಿಗಳು ಸೇರುತ್ತಿದ್ದ ಸಾಮಾಜಿಕ-ಧಾರ್ಮಿಕ ಸಂಸತ್ತಾದ 12ನೇ ಶತಮಾನದ ಅನುಭವ ಮಂಟಪ ನಿರ್ಮಿಸುವುದು ಹೀಗೆ ನಾನಾ ಆಯಾಮಗಳ ಕುರಿತು ಚರ್ಚಿಸಲಾಗಿದೆ.
‘ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಆಯೋಜಿಸುವ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ಚಳಿಗಾಲದಲ್ಲಿಸಾಕಷ್ಟು ಅಪರೂಪದ ಹಾಗೂ ಆಕರ್ಷಕ ಹೂವುಗಳ ಲಭ್ಯತೆಯಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಇವುಗಳನ್ನು ಸಂಗ್ರಹಿಸಿ ತಂದು ಪ್ರದರ್ಶಿಸಲಾಗುವುದು. ಈ ಮೂಲಕ ವಚನ ಪ್ರಬುದ್ಧತೆಯನ್ನು ಸಾರಲಾಗುವುದು’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಡಾ. ಎಂ. ಜಗದೀಶ್ ತಿಳಿಸಿದ್ದಾರೆ.