ಅಪ್ಪಾ.. ಅಪ್ಪಾ.. ಎಲ್ಲಿದ್ದೀಯಪ್ಪಾ.. ತಂದೆಯನ್ನು ಹುಡುಕಿಕೊಡುವಂತೆ ಕೈ ಮುಗಿದ ಪುಟ್ಟಸ್ವಾಮಿ – ಅಪ್ಪನ ಕಾಣದೆ ಕಂಗಾಲಾದ ಕಂದನ ಮನಮಿಡಿಯುವ ದೃಶ್ಯ
5 ದಿನಗಳಿಂದ ಶಬರಿಮಲೆಯಲ್ಲಿ ಯಾತ್ರಿಗಳ ದಂಡು ಜಾಸ್ತಿಯಾಗುತ್ತಿದೆ. ಶಬರಿಮಲೆಯಲ್ಲಿ ಭಕ್ತರ ದಂಡು ಮಿತಿಮೀರುತ್ತಿದೆ. ಈ ವೇಳೆ ಕಂಡು ಬಂದಿರುವ ದೃಶ್ಯವೊಂದು ಎಂಥವರ ಕಣ್ಣಲ್ಲೂ ನೀರು ತರಿಸುತ್ತಿದೆ. ರಶ್ ಹೆಚ್ಚಾದ ಕಾರಣ ಅಪ್ಪನ ಕೈಯಿಂದ ತಪ್ಪಿಸಿಕೊಂಡು ದಾರಿ ತಪ್ಪಿದ ಮಗುವೊಂದು ಅಪ್ಪಾ.. ಅಪ್ಪಾ ಅಂತಾ ಕೂಗಿ ಕರೆಯುವ ದೃಶ್ಯ ನಿಜಕ್ಕೂ ಮನಕಲುಕುವಂತಿದೆ. ಕಣ್ಣೀರು ಹಾಕುತ್ತಾ ಅಪ್ಪನನ್ನು ಕರೆಯುವ ಪುಟ್ಟ ಮಗುವಿನ ಕರುಳಿನ ಕರೆಗೆ ಕೊನೆಗೂ ಅಯ್ಯಪ್ಪನೇ ಪೊಲೀಸರ ರೂಪದಲ್ಲಿ ಬಂದಿರಬೇಕು.
ಶರಣಂ ಅಯ್ಯಪ್ಪಾ.. ತಂದೆ ಶರಣಂ ಅಯ್ಯಪ್ಪಾ.. ನನ್ನ ಅಪ್ಪನನ್ನು ಹುಡುಕಿಕೊಡಪ್ಪಾ ಎಂಬಂತೆ ನಾಲ್ಕೂ ದಿಕ್ಕುಗಳಿಗೂ ಕೇಳುವಂತೆ ಆಕ್ರಂದನ ಮಾಡುತ್ತಿದ್ದಾನೆ ಪುಟ್ಟ ಸ್ವಾಮಿ. ಅಪ್ಪಾ.. ಅಪ್ಪಾ ಅಂತಾ ಕಣ್ಣೀರು ಹಾಕುತ್ತಾ ತಂದೆಯನ್ನು ಕೂಗುತ್ತಿದ್ದಾನೆ. ದಾರಿ ಕಾಣದೆ, ಎಲ್ಲಿಗೆ ಹೋಗಬೇಕು ಅಂತಾ ಗೊತ್ತಾಗದೆ ಅಪ್ಪನಿಗಾಗಿ ಕರೆಯುತ್ತಿರುವ ಪುಟ್ಟಸ್ವಾಮಿಯ ಕರೆಗೆ ಪೊಲೀಸರು ಕೂಡಾ ಓಡೋಡಿ ಬರುತ್ತಾರೆ. ಇಂಥಾ ಒಂದು ಮನಮಿಡಿಯುವ ದೃಶ್ಯ ಕಂಡುಬಂದಿದ್ದು ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ. ಪುಟ್ಟಸ್ವಾಮಿಯ ಕರುಳಿನ ಕರೆಗೆ ಸ್ವತಃ ಅಯ್ಯಪ್ಪನೇ ಪೊಲೀಸರ ರೂಪದಲ್ಲಿ ಬಂದು ತಂದೆಯನ್ನು ಹುಡುಕಿಕೊಟ್ಟಿರಬೇಕು. ಅಷ್ಟೊಂದು ರಶ್ ಇದ್ದರೂ ಕೂಡಾ ಬಾಲಕನ ಕಣ್ಣಿಗೆ ತಂದೆ ಕಾಣಿಸಿಕೊಳ್ಳುತ್ತಾರೆ. ಅಳುತ್ತಲೇ ಪುಟ್ಟಸ್ವಾಮಿ ಅಪ್ಪನನ್ನು ಕಂಡು ಸಮಾಧಾನ ಗೊಳ್ಳುವ ದೃಶ್ಯ ಭಾವುಕತೆಗೆ ಸಾಕ್ಷಿಯಾಗಿತ್ತು.
ಕಳೆದ ಕೆಲವು ದಿನಗಳಿಂದ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ದೇವಾಲಯದ ಆಡಳಿತ ಮಂಡಳಿ ಭಕ್ತಾದಿಗಳಿಗಾಗಿ ಯಾವುದೇ ಸರಿಯಾದ ವ್ಯವಸ್ಥೆಯನ್ನು ಜಾರಿಗೊಳಿಸದ ಕಾರಣ ನೂಕುನುಗ್ಗಲು ಕೂಡಾ ಹೆಚ್ಚಾಗಿದೆ. ಈ ನಡುವೆ ಶಬರಿಮಲೆಯಲ್ಲಿ ನಡೆದಂತಹ ಮನಕಲಕುವ ಘಟನೆಯ ವಿಡಿಯೋವೊಂದು ಹರಿದಾಡುತ್ತಿದೆ. ಶಬರಿಮಲೆಗೆ ದೇವರ ದರ್ಶನಕ್ಕೆಂದು ತಂದೆಯೊಂದಿಗೆ ಬಂದಿದ್ದ, ಪುಟ್ಟ ಅಯ್ಯಪ್ಪ ಸ್ವಾಮಿ ಮಾಲಾಧಾರಿ, ನೂಕುನುಗ್ಗಲಿನ ನಡುವೆ ತಂದೆಯಿಂದ ಬೇರ್ಪಟ್ಟಿದ್ದಾನೆ. ತಂದೆಯನ್ನು ಕಾಣದೆ ಕಣ್ಣೀರಿಡುತ್ತಾ, ಅಪ್ಪಾ ಎಲ್ಲಿದ್ದೀಯಾ ಎಂದು ಜೋರಾಗಿ ಕೂಗಾಡಿದ್ದಾನೆ. ಮಗುವಿನ ಈ ಅಸಹಾಯಕ ಪರಿಸ್ಥಿತಿ ಹೃದಯ ಹಿಂಡುವಂತಿತ್ತು.
@sabarimala_edits ಎಂಬ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ, ಶಬರಿಮಲೆಯಲ್ಲಿ ದೇವರ ದರ್ಶನಕ್ಕೆಂದು ಬಂದಂತಹ ಪುಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿ ತನ್ನ ತಂದೆಯಿಂದ ಬೇರ್ಪಟ್ಟು, ತಂದೆಗಾಗಿ ಜೋರಾಗಿ ಅಳುತ್ತಿರುವ ದೃಶ್ಯವನ್ನು ಕಾಣಬಹುದು. ವಿಡಿಯೋದಲ್ಲಿ ಶಬರಿಮಲೆಯಲ್ಲಿ ನೂಕುನುಗ್ಗಲಿನ ಕಾರಣ, ಬಸ್ಸಿನ ಒಳಗಡೆಯೇ ನಿಂತಿದ್ದ ಪುಟ್ಟ ಬಾಲಕನೊಬ್ಬ ತನ್ನ ತಂದೆ ಕಾಣಿಸುತ್ತಿಲ್ಲವೆಂದು ಗಾಬರಿಗೊಂಡು ಕಣ್ಣೀರಿಡುತ್ತಾ ಅಪ್ಪಾ ಅಪ್ಪಾ…. ಎಂದು ಜೋರಾಗಿ ಕೂಗಿ ಕರೆಯುತ್ತಾನೆ. ಮಗುವಿನ ಈ ಅಸಹಾಯಕ ಸ್ಥಿತಿಯನ್ನು ನೋಡಲಾರದೆ ಅಲ್ಲಿಗೆ ಪೋಲಿಸರೊಬ್ಬರು ಬಂದು, ಏನೆಂದು ವಿಚಾರಿಸುತ್ತಾರೆ. ಆ ಸಂದರ್ಭದಲ್ಲಿ ಆ ಬಾಲಕ ಕಣ್ಣೀರಿಡುತ್ತಾ, ಅಪ್ಪ ಎಲ್ಲಿ ಎಂದು ಪೋಲಿಸರ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ಮನಕಲಕುವ ದೃಶ್ಯವನ್ನು ಕಾಣಬಹುದು. ಈ ಒಂದು ದೃಶ್ಯ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ. ಅದಾದ ಕೆಲವೇ ಹೊತ್ತಿನಲ್ಲಿ ಮಗುವಿನ ತಂದೆ ಕೂಡ ಸಿಕ್ಕಿದ್ದು, ತಂದೆಯನ್ನು ನೋಡಿದ ಬಳಿಕ ಮಗು ಕೈಬೀಸಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.