ಶಬರಿಮಲೆ ದೇಗುಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ – ಜನಸಂದಣಿ ನಿರ್ವಹಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಕೇರಳದ ಶಬರಿಮಲೆ ಯಾತ್ರೆ ಈಗಾಗಲೇ ಆರಂಭವಾಗಿದೆ. ಸಾವಿರಾರು ಭಕ್ತರು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷ ಕೂಡ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ದೇವರ ದರ್ಶನಕ್ಕೆ ಗಂಟೆಗಟ್ಟೆಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೇ ಸರತಿ ಸಾಲಿನಲ್ಲಿ ನೂಕುನುಗ್ಗಲು ಸಂಭವಿಸುತ್ತಿದೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಧಾರಿತ ಸಮನ್ವಯ ಮತ್ತು ಜನಸಂದಣಿ ನಿರ್ವಹಣಾ ಕ್ರಮಗಳಿಗೆ ಕರೆ ನೀಡಿದ್ದಾರೆ.
ತೆಕ್ಕಾಡಿಯಲ್ಲಿ ನಡೆದ ವಿಶೇಷ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದ ಕೇರಳ ಸಿಎಂ, ದೇವಾಲಯದ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಯಾತ್ರಾರ್ಥಿಗಳಿಗೆ ಯಾವುದೇ ಹಾನಿಯಾಗದಂತೆ ಸರಿಯಾದ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: ನೀವು ದಿಂಬಿನ ಕವರ್ ವಾಶ್ ಮಾಡಲ್ವಾ? – ಎಚ್ಚರ.. ಇದ್ರಿಂದಾಗಿ ನಿಮ್ಮ ಆರೋಗ್ಯವೇ ಹಾಳಾಗಬುಹುದು!
ಅಂಕಿಅಂಶಗಳ ಪ್ರಕಾರ, ಮಂಡಲ ಪೂಜೆಯ ಮೊದಲ 19 ದಿನಗಳಲ್ಲಿ ಸರಾಸರಿ ದೈನಂದಿನ ಯಾತ್ರಿಕರ ಸಂಖ್ಯೆ 62,000 ಆಗಿತ್ತು, ಇದು ಡಿಸೆಂಬರ್ 6ರಿಂದ ಪ್ರಾರಂಭವಾದ ನಾಲ್ಕು ದಿನಗಳಲ್ಲಿ 88,000ಕ್ಕೆ ಏರಿತ್ತು. ಇದು ಭಾರೀ ಜನದಟ್ಟಣೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ದರ್ಶನ (ಪೂಜೆ) ಸಮಯವನ್ನು ಇದೀಗ ಒಂದು ಗಂಟೆ ವಿಸ್ತರಿಸಲಾಗಿದೆ. ಹೆಚ್ಚುವರಿಯಾಗಿ, ಸ್ಪಾಟ್ ಬುಕಿಂಗ್ ಅನ್ನು ಕೇವಲ ಅಗತ್ಯ ವಿಚಾರಗಳಿಗೆ ಮಾತ್ರ ಸೀಮಿತಗೊಳಿಸಬೇಕೆಂದು ಮುಖ್ಯಮಂತ್ರಿ ಶಿಫಾರಸ್ಸು ಮಾಡಿದ್ದಾರೆ.
ಶಬರಿಮಲೆಯಲ್ಲಿ ದರ್ಶನವನ್ನು ಸುಗಮಗೊಳಿಸುವ ಉದ್ದೇಶದಿಂದ ಹಿಂದಿನ ಸಮಾಲೋಚನಾ ಸಭೆಗಳನ್ನು ಉಲ್ಲೇಖಿಸಲಾಗಿದೆ. ಆ ಅಧಿವೇಶನಗಳಲ್ಲಿ ಮಾಡಿದ ನಿರ್ಧಾರಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಲಾಯಿತು. ಮಹಿಳೆಯರು ಮತ್ತು ಮಕ್ಕಳಿಗಾಗಿ ಸಿದ್ಧಪಡಿಸಲಾದ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ.
ಮೊದಲೇ ನಿರ್ಧರಿಸಿದ ಪಾರ್ಕಿಂಗ್ ವೇಳಾಪಟ್ಟಿಯನ್ನು ಅನುಸರಿಸುವಂತೆ ಸಿಎಂ ಒತ್ತಿ ಹೇಳಿದ್ದು, ಕಟ್ಟುನಿಟ್ಟಾದ ಸಂಚಾರ ನಿಯಂತ್ರಣ ಕ್ರಮಗಳಿಗೆ ಕರೆ ನೀಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷದಲ್ಲಿ ಶಬರಿಮಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ತೀರ್ಥಯಾತ್ರೆಗೆ ಬಂದಿದ್ದ ಮಗುವಿನ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಈ ವೇಳೆ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.