ಆಕಾಶದಲ್ಲಿ ಸಂಭವಿಸಲಿದೆ ಅಪರೂಪದ ವಿದ್ಯಾಮಾನ – 12 ಸೆಕೆಂಡ್‌ ಮಾಯವಾಗಲಿದೆ ಪ್ರಕಾಶಮಾನ ನಕ್ಷತ್ರ!

ಆಕಾಶದಲ್ಲಿ ಸಂಭವಿಸಲಿದೆ ಅಪರೂಪದ ವಿದ್ಯಾಮಾನ – 12 ಸೆಕೆಂಡ್‌ ಮಾಯವಾಗಲಿದೆ ಪ್ರಕಾಶಮಾನ ನಕ್ಷತ್ರ!

ಕತ್ತಲಾಗುತ್ತಿದ್ದಂತೆ ಶುಭ್ರ ಆಕಾಶದಲ್ಲಿ ಗೋಚರಿಸುವ ತಾರೆಗಳನ್ನು ನೋಡುವುದೇ ಚೆಂದ. ಈ ಸುಂದರ ದೃಶ್ಯವನ್ನು ನೋಡಿ ಬೆರಗಾಗದೇ ಇರುವವರು ಇಲ್ಲ. ಆಕಾಶದಲ್ಲಿ ನಡೆಯುವ ವಿಸ್ಮಯಗಳು ವಿಜ್ಞಾನಲೋಕಕ್ಕೂ ಸವಾಲು  ಹುಟ್ಟಿಸುತ್ತವೆ. ಇನ್ನು ನಕ್ಷತ್ರಗಳ ಹುಟ್ಟು, ಸಾವು ಕುರಿತು ಅಧ್ಯಯನ ನಡೆಯುತ್ತಲೇ ಇದೆ. ಮಂಗಳವಾರ ಆಕಾಶ ಮತ್ತೊಂದು ವಿದ್ಯಾಮಾನಕ್ಕೆ ಸಾಕ್ಷಿಯಾಗಲಿದೆ. ಆಕಾಶದತ್ತ ಕಣ್ಣು ಹಾಯಿಸಿದಾಗ ಬರಿಗಣ್ಣಿಗೆ ಎಲ್ಲರಿಗೂ ಕಾಣುವ ನಕ್ಷತ್ರ ಮಾಯವಾಗಲಿದೆ.

ಹೌದು, ಆಕಾಶದಲ್ಲಿ ಬರಿಗಣ್ಣಿಗೆ ಪ್ರಕಾಶಮಾನವಾಗಿ ಕಾಣುವ ನಕ್ಷತ್ರ ಬೆಟಲ್‌ಜ್ಯೂಸ್.  ಈ ನಕ್ಷತ್ರವನ್ನು ತುಂಬಾ ಆಕರ್ಷಕವಾಗಿ ಕಾಣುವ ನಕ್ಷತ್ರ ಪುಂಜವಾದ ಒರೈಯನ್‌ ಅಥವಾ ಮಹಾವ್ಯಾಧದಲ್ಲಿ ಈ ಕೆಂಪು ದೈತ್ಯ ಆರಿದ್ರಾ (ಬೆಟಲ್‌ಜ್ಯೂಸ್) ನಕ್ಷತ್ರವಿದೆ.  ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ ಆಕಾಶದಲ್ಲಿನ ನಕ್ಷತ್ರಗಳು ಬೆಳಕಿನ ಸಮಯದಲ್ಲಿ ಕಾಣೊದಿಲ್ಲ. ಹಗಲಿನ ಸಮಯದಲ್ಲೂ ಕಂಡ ನಕ್ಷತ್ರವೆಂದರೆ ಅದು ಬೆಟಲ್‌ಜ್ಯೂಸ್ ಮಾತ್ರ. ಆದರೆ, ಈ ನಕ್ಷತ್ರವೀಗ ಅಂತ್ಯದ ಅಂಚಿನಲ್ಲಿದೆ. ಈ ಪ್ರಕಾಶಮಾನವಾದ ನಕ್ಷತ್ರ ಮಂಗಳವಾರ 12 ಸೆಕೆಂಡ್‌ಗಳ ಕಾಲ ಕಣ್ಮರೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮುಂದಿನ 20 ವರ್ಷಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳೇ ಕಾಣಲ್ಲ! – ವಿಜ್ಞಾನಿಗಳು ಹೀಗೆ ಹೇಳಿದ್ದೇಕೆ?

ಈ  ಪ್ರಕಾಶಮಾನವಾದ ನಕ್ಷತ್ರ ಕಣ್ಮರೆಯಾಗಲು ಕಾರಣ ಉಲ್ಕಾಶಿಲೆ. ಹೌದು, 319 ಲಿಯೋನಾ ಎನ್ನುವ ಉಲ್ಕಾಶಿಲೆ, ಬೆಟಲ್‌ಜ್ಯೂಸ್‌ ನಕ್ಷತ್ರವನ್ನು ಮುಚ್ಚಲಿದೆ. ಅದರರ್ಥ ಬೆಟಲ್‌ಜ್ಯೂಸ್‌ನ ಗ್ರಹಣ ಸಂಭವಿಸಲಿದೆ. ಸುಮಾರು 12 ಸೆಕೆಂಡ್‌ಗಳವರೆಗೆ ಈ ಗ್ರಹಣ ಸಂಭವಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ರಾತ್ರಿಯ ಆಕಾಶದಲ್ಲಿರುವ 10 ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಬೆಟಲ್‌ಜ್ಯೂಸ್‌ ಅತ್ಯಂತ ಕೊನೆಯದು. ಮಂಗಳವಾರ ಮಧ್ಯರಾತ್ರಿ,  319 ಲಿಯೋನಾ ಉಲ್ಕಾಶಿಲೆ  ಬೆಟಲ್‌ನ್ಯೂಸ್‌ ಸ್ಟಾರ್‌ ಮತ್ತು ಭೂಮಿಯ ನಡುವೆ ಹಾದುಹೋಗುತ್ತದೆ. ಇದರಿಂದಾಗಿ ಈ ನಕ್ಷತ್ರವು 12 ಸೆಕೆಂಡುಗಳವರೆಗೆ ಭೂಮಿಯಿಂದ ಗೋಚರಿಸುವುದಿಲ್ಲ. ತೀರಾ ಅಪರೂಪದಲ್ಲಿ ಸಂಭವಿಸುವ ಬೆಟಲ್‌ಜ್ಯೂಸ್‌ ಗ್ರಹಣವನ್ನು ವೀಕ್ಷಿಸಲು ವಿಜ್ಞಾನಿಗಳು ಕೂಡ ಕಾತರರಾಗಿದ್ದಾರೆ.

ರಾತ್ರಿಯ ಆಕಾಶದಲ್ಲಿ ಈ ರೀತಿಯ ದೃಶ್ಯವು ಬಹಳ ಅಪರೂಪ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರವನ್ನು ಯಾವುದೇ ಉಲ್ಕಾಶಿಲೆಯೊಂದಿಗೆ ಯಾವ ರೀತಿಯಲ್ಲಿ ಆವರಿಸುತ್ತದೆ ಎನ್ನುವ ಕುತೂಹಲ ವಿಜ್ಞಾನಿಗಳಲ್ಲಿದೆ. ಬೆಟಲ್‌ಜ್ಯೂಸ್‌ನ ರಿಂಗ್‌ ಆಫ್‌ ಫೈರ್‌, ವಾರ್ಷಿಕ ಗ್ರಹಣವಾಗಿದೆ. ಆದರೆ, ಈ ಗ್ರಹಣ ಎಎಷ್ಟು ಜನರಿಗೆ ನೋಡಲು ಸಿಗುತ್ತೆ ಎನ್ನುವುದು ಅದೃಷ್ಟದ ಮೇಲೆ ಬಿಟ್ಟಿದ್ದಾಗಿದೆ.

ಏಷ್ಯಾ ಮತ್ತು ದಕ್ಷಿಣ ಯುರೋಪಿನಿಂದಲೂ ಈ ನೋಟ ಕಾಣಸಿಗುತ್ತದೆ ಎಂಬುದು ಸಂತಸದ ಸಂಗತಿ. ಇದಲ್ಲದೆ, ಇದು ಫ್ಲೋರಿಡಾ ಮತ್ತು ಪೂರ್ವ ಮೆಕ್ಸಿಕೊದಿಂದಲೂ ಗೋಚರಿಸುತ್ತದೆ. ಇಂಟರ್ನ್ಯಾಷನಲ್ ಆಕ್ಲೂಷನ್ ಟೈಮಿಂಗ್ ಅಸೋಸಿಯೇಷನ್ ಈ ಘಟನೆಯ ಪ್ರಸಾರಕ್ಕಾಗಿ ವಿಶೇಷ ಪುಟವನ್ನು ರಚಿಸಿದೆ. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ವೀಕ್ಷಣೆಯ ನಿಖರವಾದ ಸಮಯ, ಸ್ಥಾನ ಇತ್ಯಾದಿಗಳನ್ನು ನೀವು ತಿಳಿಯಬಹುದು.

ನೋಡಲು ಕಷ್ಟವಾದರೆ ದೂರದರ್ಶಕದ ಮೂಲಕವೂ ಈ ನೋಟವನ್ನು ನೋಡಬಹುದು. ಇದರ ಹೊರತಾಗಿ, ಇಟಲಿಯ ವರ್ಚುವಲ್ ಟೆಲಿಸ್ಕೋಪ್ ಪ್ರಾಜೆಕ್ಟ್ ಮೂಲಕ ಲೈವ್ ಆಗಿ ವೀಕ್ಷಿಸಬಹುದು. ಇನ್ನು ಬೆಟಲ್‌ಜ್ಯೂಸ್‌ ನಕ್ಷತ್ರ ಆಕಾಶದಲ್ಲಿ ಎಲ್ಲಿ ಕಾಣುತ್ತದೆ ಎನ್ನುವ ಕುತೂಹಲವಿದ್ದರೆ, ಸೂರ್ಯಾಸ್ತದ ಎರಡು ಗಂಟೆಗಳ ನಂತರ, ನೀವು ಆಕಾಶದ ಬಲಭಾಗದ ಕಡೆಗೆ ನೋಡಿದರೆ, ಒರೈಯನ್‌ ನಕ್ಷತ್ರಪುಂಜದಲ್ಲಿರುವ ಅಲ್ನಿಟಾಕ್‌, ಅಲ್ನಿಲಂ ಮತ್ತು ಮಿನಾಟಕ ಆಕಾಶದದಲ್ಲಿ ಕಾಣುತ್ತದೆ. ಅದರೊಂದಿಗೆ ಬೆಟಲ್‌ಜ್ಯೂಸ್‌ ನಕ್ಷತ್ರ ಕೂಡ ಕೊಂಚ ಎಡಭಾಗದಲ್ಲಿ ಕಾಣುತ್ತದೆ.

Shwetha M