ಬದುಕಿನ ಅದೊಂದು ಸತ್ಯದಿಂದ ದೂರವಾಗಿದ್ದರು ನಟಿ ಲೀಲಾವತಿ – ಆ ವಿಚಾರ ನನ್ನೊಂದಿಗೆ ಮಣ್ಣಾಗಲಿ ಎಂದಿದ್ದೇಕೆ ವಿನೋದ್‌ರಾಜ್..!
ಮಹಾನ್ ನಟಿ ಲೀಲಾವತಿಯವರು ಕನ್ನಡ ಚಿತ್ರರಂಗದ ಆಸ್ತಿ. ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಪಂಚದಲ್ಲಿ ಅಮ್ಮ-ಮಗನ ಬಾಂಧವ್ಯ ಹೇಗಿರಬೇಕು ಎಂಬುದನ್ನು ಲೀಲಾವತಿ ಮತ್ತು ವಿನೋದ್ ರಾಜ್ ಅವರನ್ನು ನೋಡಿ ಕಲಿಯಬೇಕು. ಎಷ್ಟೇ ಕಷ್ಟ ಬಂದರೂ ಎಂಥದ್ದೇ ಸನ್ನಿವೇಶದಲ್ಲೂ ಇಬ್ಬರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ, ಇಂದಿಗೂ ಕನ್ನಡಿಗರ ಮನದಲ್ಲಿ ಮೂಡುತ್ತಿರುವುದು ಅದೊಂದೇ ಪ್ರಶ್ನೆ. ಲೀಲಾವತಿಯವರು ಯಾಕೆ ಗಂಡನ ಹೆಸರನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ವಿನೋದ್‌ರಾಜ್ ತಂದೆಯ ಬಗ್ಗೆ ಯಾಕೆ ಹೇಳಿಕೊಳ್ಳುವುದಿಲ್ಲ ಎನ್ನುವುದು.
ಇದನ್ನೂ ಓದಿ: ನಟರಿಗಿಂತಲೂ ಹೆಚ್ಚು ಸಂಭಾವನೆ.. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – ಲೀಲಾವತಿ ಬದುಕಿನ ಏಳುಬೀಳಿನ ಸತ್ಯ
ಪತ್ರಕರ್ತ ರವಿಬೆಳೆಗೆರೆಯವರು ವರನಟ ಡಾ. ರಾಜ್ ಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ರಾಜ್ ಲೀಲಾ ವಿನೋದ ಎಂಬ ಪುಸ್ತಕದಲ್ಲಿ ಕೆಲವೊಂದು ವಿಚಾರವನ್ನು ಉಲ್ಲೇಖಿಸಿದ್ದರು. ನಂತರ ಲೀಲಾವತಿಯವರ ಬಳಿ ಕೆಲವೊಂದು ವಿಚಾರವನ್ನು ಕೇಳುತ್ತಾ ಅದನ್ನೂ ದಾಖಲಿಸಿದ್ದರು. ಕೊಲ್ಹಾಪುರದಲ್ಲಿ ಸಂತ ತುಕಾರಾಂ ಚಿತ್ರದ ಚಿತ್ರೀಕರಣದ ವೇಳೆ ರಾಜ್‌ಕುಮಾರ್ ಮತ್ತು ಲೀಲಾವತಿ ತುಂಬಾ ಅನ್ಯೋನ್ಯವಾಗಿದ್ದರು. ಲಕ್ಷ್ಮೀದೇವಿಯ ವಿಗ್ರಹದ ಎದುರು ದೊಡ್ಡವರು ಲಕ್ಷ್ಮೀ ಕಾಸಿರುವ ದಾರವನ್ನು ಕಟ್ಟಿದರು. ಅದು ನನ್ನ ಮತ್ತು ಅವರ ನಡುವಿನ ಸಂತಸದ ದಿನಗಳು ಎಂದು ಲೀಲಾವತಿ ಹೇಳಿಕೊಂಡಿದ್ದರು ಎಂದು ರವಿಬೆಳೆಗೆರೆ ಬರೆದಿದ್ದಾರೆ.
ಕೆಲವೊಂದು ಪತ್ರಿಕೆಗಳಲ್ಲಿ ಲೀಲಾವತಿ ತಾಯಿಯಾಗುತ್ತಿರುವ ಸಂದರ್ಭದಲ್ಲಿ ಎದುರಿಸಿದ ಸಂಕಷ್ಟಗಳನ್ನು ಬರೆದಿದ್ದರು. ವಿನೋದ್ ರಾಜ್, ಎಳೆ ಕಂದನಾಗಿರುವಾಗ ಲೀಲಾವತಿಯವರು ಪಟ್ಟಿರುವ ವೇದನೆ ಅಷ್ಟಿಷ್ಟಲ್ಲ. ಹುಟ್ಟಿದಾಗಿನಿಂದಲೂ ಲೀಲಾವತಿ ಸಾಕಷ್ಟು ಕಷ್ಟ, ನೋವು, ಅವಮಾನ, ಹಿಂಸೆಗಳನ್ನು ಅನುಭವಿಸಿದ್ದರು. ಆದರೆ, ತಮ್ಮ ಪ್ರತಿಭೆಯಿಂದ ಮಹಾನ್ ನಟಿಯಾಗಿ ಬೆಳೆದರು. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೂ ಕೂಡಾ ಲೀಲಾವತಿಯವರಿಗೆ ಸುಖ ಸಂಸಾರ ನಡೆಸಲು ಸಾಧ್ಯವಾಗಲೇ ಇಲ್ಲ. ಮಗ ವಿನೋದ್‌ರಾಜ್ ಹುಟ್ಟಿದ ಸಮಯದಲ್ಲಂತೂ ಲೀಲಾವತಿಯವರು ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ತಮ್ಮ ಮಗನನ್ನು ಅಂಗೈಯಲ್ಲಿ ಬಚ್ಚಿಟ್ಟುಕೊಂಡು ಇಲ್ಲಿಯವರೆಗೂ ಬೆಳೆಸಿದ್ದಾರೆ. ಹೀಗೆ ಸಂದರ್ಶನ ಒಂದರಲ್ಲಿ ಕಹಿ ಘಟನೆಯನ್ನು ನೆನೆದು ಲೀಲಾವತಿಯವರು ಕಣ್ಣೀರು ಹಾಕಿದ್ದರು. ನನ್ನ ಹೊಟ್ಟೆಯಲ್ಲಿ ಒಂದು ಮಗು ಬೆಳೆಯುತ್ತಿದೆ ಎಂದು ತಿಳಿದ ತಕ್ಷಣ ಚಿತ್ರರಂಗ, ಸೀರಿಯಲ್ ಹಾಗೂ ಇನ್ನಿತರ ನಾಟಕ ಮಂಡಳಿಗಳು ನನ್ನನ್ನು ಸಂಪೂರ್ಣವಾಗಿ ದೂರ ಮಾಡಿಬಿಟ್ಟರು. ಆ ಸಂದರ್ಭದಲ್ಲಿ ಯಾರ ನೆರವಿಲ್ಲದೆ ಒಂದು ಹೊತ್ತು ಊಟ ಮಾಡುತ್ತಿದ್ದೆ. ಹೀಗಿರುವಾಗ ವಿನೋದ್ ಹುಟ್ಟಿ ಬಿಟ್ಟ. ಅಂತಹ ಸಂದರ್ಭದಲ್ಲಿ ಅವನನ್ನು ನನ್ನ ಸೆರಗಿನಲ್ಲಿ ಕಟ್ಟಿಕೊಂಡು ನಾನು ಗದ್ದೆಗಿಳಿದು ವ್ಯವಸಾಯ ಮಾಡಿ ಬದುಕು ಸಾಗಿಸುತ್ತಿದ್ದೆ, ಹೀಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಮಾತ್ರವಲ್ಲದೆ ಜನರು ಮಾತಾನಾಡುತ್ತಿದ್ದಂತಹ ಒಂದೊಂದು ಮಾತು ಕೂಡ ನನಗೆ ಬಹಳ ಹಿಂಸೆ ನೀಡುತ್ತಿತ್ತು. ಒಂದು ವರ್ಷದ ಪುಟ್ಟ ಕಂದ ನನ್ನ ಮಗ ವಿನೋದ್ ರಾಜ್ ತೊಟ್ಟಿಲಲ್ಲಿ ಮಲಗಿ ಜೋರಾಗಿ ಹೊಟ್ಟೆ ಹಸಿವಿನಿಂದ ಅಳುತ್ತಿದ್ದ, ಅವನಿಗೆ ತಿನ್ನಿಸಲು ನನ್ನ ಬಳಿ ಏನು ಸಹ ಇರಲಿಲ್ಲ.. ಹೀಗಾಗಿ ಅದೊಂದು ದಿನ ಅವನನ್ನು ಸಾಯಿಸಿ ನಾನು ಕೂಡ ಸತ್ತು ಹೋಗೋಣ ಎಂಬ ನಿರ್ಧಾರ ಮಾಡಿದ್ದೆ. ಅದೇ ಕೋಪದಿಂದ ನಾನು ಆತ ಮಲಗಿದ್ದಂತಹ ತೊಟ್ಟಿಲನ್ನು ಜೋರಾಗಿ ತೂಗಿಬಿಟ್ಟೆ, ಆದರೆ ಅವನು ಅಮ್ಮ ನನ್ನನ್ನು ಆಡಿಸುತ್ತಿದ್ದಾಳೆ ಎಂದು ಕಿಲಕಿಲನೆ ನಗಲು ಶುರುಮಾಡಿದ. ಅವನ ನಗು ನನ್ನಲ್ಲಿ ಚೈತನ್ಯ ಮೂಡಿಸಿ ಪ್ರಪಂಚದಲ್ಲಿ ಇದ್ದು, ಜಯಿಸಬೇಕು ಎಂಬ ಸ್ಫೂರ್ತಿ ತುಂಬಿತ್ತು. ಇನ್ನು ಕೂಡ ವಿನೋದ್ ಒಂದು ವರ್ಷವಿದ್ದಾಗ ಆತ ತೊಟ್ಟಿಲಲ್ಲಿ ಮಲಗಿ ನಗುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದೆ ಹಾಗೆ ಇದೆ. ಅವನ ಮುದ್ದಾದ ನಗುವೆ ಇಂದು ಅವನನ್ನು ನನ್ನನ್ನು ಉಳಿಸಿದೆ ಎಂದು ಭಾವುಕರಾಗಿ ಹೇಳಿದ್ದರು. ಇನ್ನು ಈ ಪ್ರಶ್ನೆ ವಿನೋದ್ ರಾಜ್ ಅವರಿಗೂ ಪದೇಪದೆ ಎದುರಾಗಿತ್ತು. ಲೀಲಾವತಿ ಅಮ್ಮನವರು ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲೂ ಹಲವರು ಈ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಖಡಕ್ಕಾಗೇ ಉತ್ತರಿಸಿದ್ದ ವಿನೋದ್ ರಾಜ್ ಆ ಸತ್ಯ ನನ್ನ ಜೊತೆಯೇ ಮಣ್ಣಾಗಲಿ ಎಂದು ತಿರುಗೇಟು ಕೊಟ್ಟಿದ್ದರು. ಈ ವಿಚಾರವನ್ನು ತಿಳಿಯುವುದರಿಂದ ಏನಾದ್ರು ಜಿಎಸ್ಟಿ ಕಡಿಮೆ ಆಗುತ್ತಾ? ಪೆಟ್ರೋಲ್ ಬೆಲೆ ಕಡಿಮೆ ಆಗುತ್ತಾ? ಈ ಪ್ರಶ್ನೆ ಮಾಡುವವರು ಅವರ ಮನೆಯನ್ನು ಅವರು ನೋಡಿಕೊಳ್ಳಲಿ. ನಾನು ನನ್ನ ತಾಯಿಗೆ ಮಾತು ಕೊಟ್ಟಿದ್ದೇನೆ.. ತನ್ನ ತಾಯಿ ಬೇರೆಯವರಿಗೆ ಮಾತು ಕೊಟ್ಟಿದ್ದಾರೆ.. ನೀವೆ ಅರ್ಥ ಮಾಡಿಕೊಳ್ಳಿ. ಈ ವಿಚಾರ ನನ್ನ ಜತೆಗೆ ಮಣ್ಣಾಗಲಿ ಎನ್ನುವ ಮೂಲಕ ಸಿಟ್ಟು ಹೊರಹಾಕಿದ್ದರು. ಏನೇ ಹೇಳಿ ಒಬ್ಬ ಕಲಾವಿದೆಯಾಗಿ, ಅಮ್ಮನಾಗಿ, ಗಂಡನಿಲ್ಲದೇ ಒಂಟಿ ಜೀವನ ನಡೆಸುವುದು ಕಷ್ಟವೇ. ಒಂದು ಕಡೆ ದೂಷಣೆ, ಮತ್ತೊಂದು ಕಡೆ ಅಮ್ಮನಾಗಿ ಮಗನ ಸಾಕುವ ಜವಾಬ್ದಾರಿ. ಇವೆಲ್ಲವನ್ನೂ ನಿಭಾಯಿಸಿದವರು ನಟಿ ಲೀಲಾವತಿ. ಮಗ ವಿನೋದ್‌ರಾಜ್ ಕೂಡಾ ಅಷ್ಟೇ. ಸದಾ ಕಾಲ ಅಮ್ಮನ ಜೊತೆಯಲ್ಲೇ ಇದ್ದು ಅಮ್ಮನಿಗಾಗಿಯೇ ತನ್ನ ಜೀವವನ್ನು ಮುಡಿಪಾಗಿಟ್ಟವರು. ಈಗ ಅಮ್ಮ ಮಗನ ನಡುವಿನ ಬಂಧದ ಕೊಂಡಿ ಕಳಚಿದೆ. ಹೆಜ್ಜೆ ಹೆಜ್ಜೆಗೂ ಜೋಪಾನ ಮಾಡುತ್ತಿದ್ದ ಅಮ್ಮ ಇನ್ನಿಲ್ಲ. ಪ್ರತೀ ದಿನ ಪ್ರತೀ ಕ್ಷಣ ಜೊತೆಯಲ್ಲಿದ್ದ ಅಮ್ಮನಿಲ್ಲದೆ ವಿನೋದ್ ರಾಜ್ ಇನ್ನು ಒಂಟಿ.