ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಭೀಕರ ದುರಂತ – ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಮುಂದುವರಿದ ಕಾರ್ಯಾಚರಣೆ

ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಭೀಕರ ದುರಂತ – ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಮುಂದುವರಿದ ಕಾರ್ಯಾಚರಣೆ

ವಿಜಯಪುರದಲ್ಲಿ ಗೋದಾಮಿನ ಸಂಸ್ಕರಣಾ ಘಟಕದಲ್ಲಿ  ಮೆಕ್ಕೆಜೋಳ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ರಾಶಿಯೊಳಗೆ ಸಿಲುಕಿದ್ದ ಐವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ಮೂವರು ಕೂಡಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾರ್ಮಿಕರ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಾವು ಗೆದ್ದು ಬಂದ  41 ಕಾರ್ಮಿಕರು – ಉತ್ತರಕಾಶಿ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

ಸೋಮವಾರ ರಾತ್ರಿ ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದಲ್ಲಿನ ರಾಜಗುರು ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಸುಮಾರು 200 ಟನ್ ಮೆಕ್ಕೆಜೋಳ ಕುಸಿದಿತ್ತು. ಇದರಿಂದ ಮೆಕ್ಕೆಜೋಳ ರಾಶಿಯೊಳಗೆ 10 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆದಿದ್ದು, ರಾಶಿಯೊಳಗೆ ಸಿಲುಕಿದ್ದ ಐವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಬಿಹಾರ ಮೂಲದ ಗುಲಾರ್ ಚಂದ್ (50), ಕೃಷ್ಣಕುಮಾರ್ (22), ರಾಮ್ ಬಾಲಕ್ (52), ಲುಖೋ ಜಾಧವ್(45), ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ(29), ಸಂಬೂ ಮುಖಿಯಾ (26) ಮೃತ ಕಾರ್ಮಿಕರು. ಸೋನುಕುಮಾರ್ ಎಂಬುವರನ್ನು ರಕ್ಷಿಸಲಾಗಿದೆ.

ರಾಶಿಯೊಳಗೆ ಇನ್ನೂ 6 ರಿಂದ 7 ಜನ ಕಾರ್ಮಿಕರು ಸಿಲುಕಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಎರಡು ಎಸ್‌ಡಿಆರ್‌ಎಫ್‌ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಇದೀಗ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಕೂಡ ಆಗಮಿಸಿದೆ. ರಾಜಗುರು ಗೋದಾಮು ಬಳಿ ಶವ ತೆಗೆದುಕೊಂಡು ಹೋಗುತ್ತಿದ್ದ ಌಂಬುಲೆನ್ಸ್ ತಡೆದ ಬಿಹಾರ ಮೂಲದ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮೊದಲು ಪರಿಹಾರ ಘೋಷಿಸಿ ನಂತರ ಶವ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರ ಜೊತೆ ಬಿಹಾರ ಮೂಲದ ಕಾರ್ಮಿಕರು ವಾಗ್ವಾದ ನಡೆಸಿದರು. ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಮತ್ತು ಎಸ್ಪಿ ಋಷಿಕೇಷ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.

ಗೋದಾಮುಗಳಲ್ಲಿ ಇಟ್ಟಿದ್ದ ನೂರಾರು ಜೋಳದ ಚೀಲಗಳು ವಾಲಿ ಕೆಳಗೆ ಬಿದ್ದು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿತ್ತು. ಎಲ್ಲಾ ಕಾರ್ಮಿಕರು ಬಿಹಾರ ಮೂಲದವರು ಎಂದು ವರದಿಯಾಗಿದೆ. ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ, ಮಾಹಿತಿ ಪಡೆದುಕೊಂಡಿದ್ದರು. ಮೃತದೇಹಗಳ ಶವಪರೀಕ್ಷೆ ನಡೆಸಿ ಸ್ಥಳೀಯ ಆಡಳಿತವನ್ನು ಸಂಪರ್ಕಿಸುವ ಮೂಲಕ ಆಯಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದು ಸಚಿವರು ಹೇಳಿದ್ದರು. ಘಟನೆಯ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ವಿಷಯ ತಿಳಿಸಿರುವುದಾಗಿ ತಿಳಿಸಿದ ಸಚಿವರು, ಸಂತ್ರಸ್ತರ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಕಾರ್ಮಿಕರು ಬೇರೆ ರಾಜ್ಯದವರಾಗಿದ್ದರೂ, ಮಾನವೀಯ ಆಧಾರದ ಮೇಲೆ, ಸಂತ್ರಸ್ತರ ಕುಟುಂಬಗಳಿಗೆ ಸ್ವಲ್ಪ ಆರ್ಥಿಕ ನೆರವು ಪಡೆಯಲು ನಾವು ಪ್ರಯತ್ನಿಸುತ್ತೇವೆ. ಅದೇ ಸಮಯದಲ್ಲಿ ಮಾಲೀಕರಿಗೆ ಪರಿಹಾರವನ್ನು ನೀಡುವ ಜವಾಬ್ದಾರಿಯೂ ಇದೆ. ಆ ನಿಟ್ಟಿನಲ್ಲಿ ಸಂತ್ರಸ್ತರಿಗೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಈ ಹಿಂದೆಯೂ ಇದೇ ಗೋದಾಮಿನಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಮಾಲೀಕರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಪ್ರಸ್ತುತ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.

Sulekha