ರೇಸ್ ನಲ್ಲಿ ಮೂವರು.. ತೆಲಂಗಾಣ ಸಿಎಂ ಯಾರು? – ತೆಲಂಗಾಣದಲ್ಲೂ ಡಿಕೆಶಿ ಗೇಮ್ ಪ್ಲ್ಯಾನ್!
ತೆಲಂಗಾಣದಲ್ಲಿ ಕಾಂಗ್ರೆಸ್ ಅಕ್ಷರಶ: ಕಮಾಲ್ ಮಾಡಿದೆ. ಕೆಸಿಆರ್ ತಲೆಗೆ ಹತ್ತಿದ್ದ ಅಹಂಕಾರವನ್ನ ಕಾಲಿಗೆ ಇಳಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಸಿಆರ್ರನ್ನ ರನ್ಔಟ್ ಮಾಡಿ ಮನಗೆ ಕಳುಹಿಸಿದೆ. ನಿಜಕ್ಕೂ ಇಷ್ಟು ಬೇಗ ಕೆಸಿಆರ್ ಅಧಿಕಾರ ಕಳೆದುಕೊಳ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾಕಂದ್ರೆ ತೆಲಂಗಾಣವೆಂಬ ರಾಜ್ಯ ರಚನೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿ, ತಮ್ಮ ಕನಸಿನ ರಾಜ್ಯ ನಿರ್ಮಾಣ ಮಾಡಿ ಸಿಎಂ ಪಟ್ಟಕ್ಕೇರಿದ್ದ ಕೆಸಿಆರ್ ತಮ್ಮ ರಾಜ್ಯವನ್ನ ಆಳಿದ್ದು ಕೇವಲ 9 ವರ್ಷಗಳಷ್ಟೇ. ಅಷ್ಟರಲ್ಲೇ ಕೆಸಿಆರ್ ಕೈನಿಂದ ಕಾಂಗ್ರೆಸ್ ಅಧಿಕಾರ ಕಸಿದುಕೊಂಡು ಬಿಟ್ಟಿದೆ. ಚಂದ್ರಶೇಖರ್ ರಾವ್ಗೆ ನಿಜಕ್ಕೂ ಗರ್ವಭಂಗವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ರಹಸ್ಯವೇನು? ಕಾಂಗ್ರೆಸ್ ಗೆಲುವಿನಲ್ಲಿ ಕರ್ನಾಟಕ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪಾತ್ರವಿದ್ಯಾ? ತೆಲಂಗಾಣದಲ್ಲಿ ಪಕ್ಷವನ್ನ ಈ ಮಟ್ಟಕ್ಕೆ ಕಟ್ಟಿ ಬೆಳೆಸಿದ ಕೈ ಕಲಿ ಯಾರು? ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಹಾಗೆಯೇ ತೆಲಂಗಾಣದಲ್ಲಿ ಬಿಜೆಪಿ ಮತ್ತು ಬಿಆರ್ಎಸ್ನ ಭವಿಷ್ಯವೇನು? ಈ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಖೇಲ್ ಖತಂ? – ಲೋಕಸಭೆಯಲ್ಲಿ ಏನಾಗುತ್ತೆ?
2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 19 ಕ್ಷೇತ್ರಗಳನ್ನ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಕಾಂಗ್ರೆಸ್ 64 ಸ್ಥಾನಗಳನ್ನ ಗೆದ್ದು ತೆಲಂಗಾಣದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಹೇಗೆ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪಕ್ಷವನ್ನ ಕಟ್ಟಿ, ಬಿಜೆಪಿಯನ್ನ ಮಣಿಸುವಲ್ಲಿ ಯಶಸ್ವಿಯಾದ್ರೋ ಅದೇ ರೀತಿ ತೆಲಂಗಾಣದಲ್ಲೂ ಒಬ್ಬ ಡಿಕೆ ಶಿವಕುಮಾರ್ ಕಾಂಗ್ರೆಸ್ನ್ನ ಅಧಿಕಾರಕ್ಕೆ ತಂದಿದ್ದಾರೆ. ಕೆಸಿಆರ್ ವಿರುದ್ಧ ಮೀಸೆ ತಿರುಗಿಸಿ ಗೆದ್ದ ತೆಲಂಗಾಣದ ಡಿಕೆ ಶಿವಕುಮಾರ್ ಮತ್ಯಾರೂ ಅಲ್ಲ ಅನುಮುಲ ರೇವಂತ್ ರೆಡ್ಡಿ. ತೆಲಂಗಾಣ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ ಅಕ್ಷರಶ: ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ರೋಲ್ನ್ನೇ ನಿಭಾಯಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಡಿಕೆಶಿ ಯಾವ ರೀತಿ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಆಗಿದ್ರೋ, ಅದೇ ರೀತಿ ರೇವಂತ್ ರೆಡ್ಡಿ ತೆಲಂಗಾಣ ಕಾಂಗ್ರೆಸ್ ಎದುರಿಸಿದ್ದ ಟ್ರಬಲ್ಗಳನ್ನ ಶೂಟೌಟ್ ಮಾಡಿದ್ದಾರೆ. ಪ್ರಚಾರದುದ್ದಕ್ಕೂ ರೇವಂತ್ ರೆಡ್ಡಿ ಕಾಂಗ್ರೆಸ್ನ ಫೇಸ್ ಆಗಿದ್ರು. ಆದ್ರೆ ಹಾದಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಯಾಕಂದ್ರೆ ತೆಲಂಗಾಣ ಕಾಂಗ್ರೆಸ್ನೊಳಗೂ ಸಾಕಷ್ಟು ಭಿನ್ನಮತಗಳಿದ್ವು. ಹಲವು ಬಣಗಳಿದ್ದವು. ಕೆಲ ಸ್ಥಳೀಯ ನಾಯಕರಂತೂ ನಿರಂಕುಶವಾದಿ, ತಮ್ಮ ಬೆಂಬಲಿಗರಿಗಷ್ಟೇ ಮಣೆ ಹಾಕ್ತಾರೆ ಅಂತೆಲ್ಲಾ ರೇವಂತ್ ರೆಡ್ಡಿ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ್ರು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರೇವಂತ್ ರೆಡ್ಡಿ ಸಂಪೂರ್ಣವಾಗಿ ತೆಲಂಗಾಣ ಜನತೆಯನ್ನೇ ನಂಬಿಕೊಂಡಿದ್ರು. ರಾಜ್ಯದುದ್ದಕ್ಕೂ ಜನರ ಮಧ್ಯೆ ಓಡಾಡಿದ್ರು. ಪ್ರತಿದಿನ ಕನಿಷ್ಠ ನಾಲ್ಕು ರ್ಯಾಲಿಗಳನ್ನ ನಡೆಸ್ತಿದ್ರು. ಈ ಮೂಲಕ ತಮ್ಮನ್ನ ತಾವು ಸ್ಟೇಟ್ ಲೀಡರ್ ಆಗಿ ಪ್ರಾಜೆಕ್ಟ್ ಮಾಡಿಕೊಂಡ್ರು. ಇದ್ರ ಜೊತೆಗೆ ಹೈಕಮಾಂಡ್ ಜೊತೆಗೂ ಉತ್ತಮ ಬಾಂಡ್ ಇಟ್ಟುಕೊಂಡಿದ್ರು. ಅದ್ರಲ್ಲೂ ರಾಹುಲ್ ಗಾಂಧಿಗೆ ರೇವಂತ್ ರೆಡ್ಡಿ ಅತ್ಯಂತ ಆಪ್ತ ವ್ಯಕ್ತಿ.
ರೇವಂತ್ ರೆಡ್ಡಿಯ ಪೊಲಿಟಿಕಲ್ ಜರ್ನಿ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ರೇವಂತ್ ರಾಜಕೀಯ ಕೆರಿಯರ್ ಆರಂಭವಾಗಿದ್ದೇ ಎಬಿವಿಪಿಯಿಂದ. ಬಳಿಕ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜಾಯಿನ್ ಆಗ್ತಾರೆ. 2004 ಮತ್ತು 2019ರ ಚುನಾವಣೆಯಲ್ಲಿ ಕೋಡಂಗಲ್ ಕ್ಷೇತ್ರದಲ್ಲಿ ನಿಂತು ಗೆಲ್ತಾರೆ. ಆದ್ರೆ ಲಂಚ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಲೇ ರೇವಂತ್ ರೆಡ್ಡಿ ಟಿಡಿಪಿಗೆ ಗುಡ್ಬೈ ಹೇಳಿ 2017ಕ್ಕೆ ಕಾಂಗ್ರೆಸ್ನ್ನ ಸೇರ್ತಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೋಡಂಗಲ್ನಲ್ಲಿ ಬಿಆರ್ಎಸ್ ಅಭ್ಯರ್ಥಿ ಮುಂದೆ ರೇವಂತ್ ರೆಡ್ಡಿ ಸೋಲ್ತಾರೆ. ಆದ್ರೆ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಕಜ್ಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ತಾರೆ.
ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಇಷ್ಟೊಂದು ಪ್ರಭಾವಿಯಾಗಿ ಬೆಳೆಯೋಕೆ ಇನ್ನೊಂದು ಪ್ರಮುಖ ಕಾರಣ ಇದೆ. ಮುಖ್ಯಂತ್ರಿಯಾಗಿದ್ದ ಕೆಸಿಆರ್ರನ್ನ ರೇವಂತ್ ರೆಡ್ಡಿ ನೇರಾನೇರ ಎದುರು ಹಾಕಿಕೊಂಡಿದ್ರು. ಕಳೆದ ಕೆಲ ವರ್ಷಗಳಿಂದ ಕೆಸಿಆರ್ VS ರೇವಂತ್ ರೆಡ್ಡಿ ಅನ್ನೋದೆ ತೆಲಂಗಾಣ ರಾಜಕೀಯದ ಹೆಡ್ಲೈನ್ ಆಗಿತ್ತು. ಪ್ರತಿ ಬಾರಿಯೂ ಮಾಧ್ಯಮಗಳ ಬಳಿ ಮಾತನಾಡೋವಾಗ ರೇವಂತ್ ರೆಡ್ಡಿ ಕೆಸಿಆರ್ ಕುಟುಂಬದ ವಿರುದ್ಧ ಹರಿಹಾಯ್ತಿದ್ರು. ಬಿಆರ್ಎಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡ್ತಿದ್ರು. ಸ್ಟ್ರೀಟ್ ಪ್ರೊಟೆಸ್ಟ್ ಮತ್ತು ಸಾರ್ವಜನಿಕ ರ್ಯಾಲಿಗಳನ್ನ ಮಾಡೋದ್ರಲ್ಲಿ ರೆಡ್ಡಿಯದ್ದು ಎತ್ತಿದ ಕೈ. ಇಲ್ಲಿ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಯಾವ ಕ್ಯಾಂಪೇನ್ಗಳನ್ನ ಮಾಡಿದ್ರೋ ಸೇಮ್ ಟು ಸೇಮ್ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಕೆಸಿಆರ್ ಕೋಟೆಯೊಳಗೆ ನುಗ್ತಾ ಇದ್ರು. ಏಕಾಂಗಿಯಾಗಿ ಕೆಸಿಆರ್ ಫ್ಯಾಮಿಲಿಯನ್ನ ಎದುರು ಹಾಕಿಕೊಂಡ ರೀತಿಯನ್ನ ನೋಡಿ, ಪಕ್ಷವನ್ನ ಅಧಿಕಾರಕ್ಕೆ ತರೋಕೆ ಸರಿಯಾದ ವ್ಯಕ್ತಿ ಅಂತಾ ಗುರುತಿಸಿ ಹೈಕಮಾಂಡ್ 2021ರಲ್ಲಿ ರೇವಂತ್ ರೆಡ್ಡಿಯನ್ನ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡುತ್ತೆ. ಇದೀಗ ಕಾಂಗ್ರೆಸ್ ಚುನಾವಣೆಯನ್ನ ಗೆದ್ರೂ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಪ್ರಶ್ನೆ ಈಗಲೂ ಇದೆ. ರೇವಂತ್ ರೆಡ್ಡಿಯೇ ಸಿಎಂ ಪೋಸ್ಟ್ ಫೇವರೇಟ್ ಆದ್ರೂ ಕೂಡ, ಮುಖ್ಯಮಂತ್ರಿ ರೇಸ್ನಲ್ಲಿ ಇನ್ನೂ ಇಬ್ಬರಿದ್ದಾರೆ. ಭಟ್ಟಿ ವಿಕ್ರಮಾರ್ಕ ಮಲ್ಲು ಮತ್ತು ಉತ್ತಮ್ ಕುಮಾರ್ ರೆಡ್ಡಿ. ಈ ಪೈಕಿ ವಿಕ್ರಮಾರ್ಕ ಮಲ್ಲು ಕೂಡ ಕೆಸಿಆರ್ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ್ರು. ತೆಲಂಗಾಣದಾದ್ಯಂತ 1,400 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ರು. ಮತ್ತೊಂದೆಡೆ 2021ರವರೆಗೆ ಉತ್ತಮ್ ರೆಡ್ಡಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿದ್ರು. ಉತ್ತಮ್ ರೆಡ್ಡಿ ಮತ್ತು ವಿಕ್ರಮಾರ್ಕ ಮಲ್ಲುಗೆ ರೇವಂತ್ ರೆಡ್ಡಿ ಅಂದ್ರೆ ಅಷ್ಟಕ್ಕಷ್ಟೇ. ಒಳಗಿಂದೊಳಗೆ ಇವರಿಬ್ಬರ ಬಣವನ್ನ ಕೂಡ ರೇವಂತ್ ರೆಡ್ಡಿ ಎದುರಿಸಬೇಕಿತ್ತು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ಗೆ ತೆಲಂಗಾಣದಲ್ಲಿ ಸಿಎಂ ಆಯ್ಕೆಯೂ ಒಂದು ದೊಡ್ಡ ಸವಾಲಾಗಿದೆ. ಆದ್ರೂ ರೇವಂತ್ ರೆಡ್ಡಿಗೆ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ತೆಲಂಗಾಣದಲ್ಲೂ ಡಿಕೆಶಿ ಗೇಮ್ ಪ್ಲ್ಯಾನ್!
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅಂತೂ ರಿಸಲ್ಟ್ಗೂ ಮುನ್ನವೇ ತೆಲಂಗಾಣದಲ್ಲಿ ಬೀಡುಬಿಟ್ಟಿದ್ರು. ತೆಲಂಗಾಣ ಕಾಂಗ್ರೆಸ್ ಎಂಎಲ್ಎಗಳ ರಕ್ಷಣೆಗಾಗಿಯೇ ಡಿಕೆಶಿ ತೆಲಂಗಾಣಕ್ಕೆ ತೆರಳಿದ್ರು. ಯಾಕಂದ್ರೆ ಕೆಸಿಆರ್ ಕಾಂಗ್ರೆಸ್ ಎಂಎಲ್ಎಗಳನ್ನ ಎಲ್ಲಿ ಸೆಳೀತಾರೋ ಅನ್ನೋ ಆತಂಕ ಕಾಂಗ್ರೆಸ್ಗೂ ಇತ್ತು. ಡಿಕೆ ಶಿವಕುಮಾರ್ ಅಂತೂ ನೇರವಾಗಿಯೇ ಕೆಸಿಆರ್ ವಿರುದ್ಧ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನ ಸಂಪರ್ಕಿಸೋಕೆ ಕೆಸಿಆರ್ ಯತ್ನಿಸ್ತಿದ್ದಾರೆ ಅಂತಾ ಹೇಳಿದ್ರು. ಇನ್ನು ಚುನಾವಣೆ ರಿಸಲ್ಟ್ ಬಂದ ಬಳಿಕವೂ ರೇವಂತ್ ರೆಡ್ಡಿಗೆ ಮೊದಲು ಸ್ವೀಟ್ ತಿನ್ನಿಸಿದ್ದೇ ಡಿಕೆ ಶಿವಕುಮಾರ್. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ತೆರೆಮರೆಯಲ್ಲಿ ನಿಂತು ಡಿಕೆಶಿ ಕೆಲಸ ಮಾಡಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಹೆಣೆದ ತಂತ್ರವನ್ನೇ ಕೆಸಿಆರ್ ಕೆಡವೋಕೂ ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು.
ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಚುನಾವಣಾ ಚಾಣಕ್ಯರೊಬ್ಬರು ಕೂಡ ಕೆಲಸ ಮಾಡಿದ್ದಾರೆ. ಸುನಿಲ್ ಕನುಗೋಲು. ಈ ಹಿಂದೆ ಕರ್ನಾಟಕ, ತಮಿಳುನಾಡು ಚುನಾವಣೆಯಲ್ಲೂ ಸುನಿಲ್ ಕನುಗೋಲು ಗ್ರೌಂಡ್ ವರ್ಕ್ ಮಾಡಿ, ಸರ್ವೆ ನಡೆಸಿ ಕಾಂಗ್ರೆಸ್ ಮತ್ತು ಡಿಎಂಕೆ ಪರ ಸ್ಟ್ರ್ಯಾಟಜಿ ಮಾಡಿದ್ರು. ಕರ್ನಾಟಕ, ತಮಿಳುನಾಡು ರೀತಿ ತೆಲಂಗಾಣದಲ್ಲೂ ಕನುಗೋಲುಗೆ ಫ್ರೀಹ್ಯಾಂಡ್ ನೀಡಲಾಗಿತ್ತು. ಸುನಿಲ್ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಆದ್ರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುನಿಲ್ ಸ್ಟ್ರ್ಯಾಟಜಿ ವರ್ಕೌಟ್ ಆಗಿಲ್ಲ. ಅದಕ್ಕೆ ಇನ್ನೊಂದು ಕಾರಣ ಕೂಡ ಇದೆ. ತೆಲಂಗಾಣದಲ್ಲಿ ಸಿಕ್ಕ ಫ್ರೀಹ್ಯಾಂಡ್ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುನಿಲ್ ಕನುಗೋಲುಗೆ ಸಿಕ್ಕಿಲ್ಲ. ಸುನಿಲ್ & ಟೀಂ ನಡೆಸಿದ್ದ ಸರ್ವೆಯನ್ನ ಮಧ್ಯಪ್ರದೇಶದಲ್ಲಿ ಕಮಲ್ನಾಥ್ ಒಪ್ಪಿಕೊಂಡಿರಲಿಲ್ಲ. ಅತ್ತ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸಹಮತ ವ್ಯಕ್ತಪಡಿಸಿರಲಿಲ್ಲ. ಕಮಲ್ನಾಥ್, ಗೆಹ್ಲೋಟ್ ಸ್ವಪ್ರತಿಷ್ಠೆಯ ಪರಿಣಾಮ ಏನಾಯ್ತು ಅನ್ನೋದು ರಿಸಲ್ಟ್ನಲ್ಲೇ ಗೊತ್ತಾಗಿದೆ. ಮುಂದಿನ ಚುನಾವಣೆ ವೇಳೆಗಾದ್ರೂ ಸುನಿಲ್ ಕನುಗೋಲು ಸಲಹೆಯನ್ನ ಕಾಂಗ್ರೆಸ್ ಇನ್ನಷ್ಟು ಗಂಭೀರವಾಗಿ ಪರಿಗಣಿಸಬಹುದೋ ಏನೋ.
ಇನ್ನು ತೆಲಂಗಾಣದಲ್ಲಿ ಕೆಸಿಆರ್ರದ್ದಂತೂ ದುರಂತ ಕಥೆಯಾಗಿಬಿಟ್ಟಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ತೆಲಂಗಾಣ ರಾಜ್ಯ ರಚನೆಯಾಗಿತ್ತು. ಆದ್ರೀಗ ರಾಜ್ಯ ರಚಿಸಿಕೊಟ್ಟ ಅದೇ ಕಾಂಗ್ರೆಸ್ಗೆ ಕೆಸಿಆರ್ ತಮ್ಮ ಕನಸಿನ ರಾಜ್ಯವನ್ನೇ ಬಿಟ್ಟು ಕೊಟ್ಟಿದ್ದಾರೆ. ತಮ್ಮನ್ನ ಸೋಲಿಸೋಕೆ ಸಾಧ್ಯವೇ ಇಲ್ಲ ಅನ್ನೋ ಓವರ್ಕಾನ್ಫಿಡೆನ್ಸ್ ಕೆಸಿಆರ್ಗೆ ಕೊಡಲಿಯೇಟು ಕೊಟ್ಟಿರೋದಂತೂ ಸತ್ಯ. ಕೆಸಿಆರ್ರದ್ದು ಒಂಥರಾ ಚಂದ್ರಬಾಬು ನಾಯ್ಡು ಕಥೆಯಂತಾಗಿದೆ. 2019ರ ಲೋಕಸಭೆ ಚುನಾವಣೆ ವೇಳೆ ಆಂಧ್ರ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅವರು ಮೋದಿ ಸರ್ಕಾರವನ್ನ ಉರುಳಿಸಿದ ದೇಶಾದ್ಯಂತ ಓಡಾಡಿದ್ರು. ಸ್ಥಳೀಯ ಪಕ್ಷಗಳನ್ನೆಲ್ಲಾ ಒಂದುಗೂಡಿಸಿ ಘಟಬಂಧನ್ ಕಟ್ಟೋಕೆ ಮುಂದಾಗಿದ್ರು. ಈ ಭರದಲ್ಲಿ ತಮ್ಮ ರಾಜ್ಯದಲ್ಲಿ ನಡೆಯಲಿದ್ದ ವಿಧಾನಸಭೆ ಚುನಾವಣಾ ತಯಾರಿಯನ್ನೇ ಸೈಡ್ಲೈನ್ ಮಾಡಿದ್ರು. ಅತ್ತ ಮೋದಿಯನ್ನೋ ಸೋಲಿಸೋಕೆ ಆಗಿಲ್ಲ, ಇತ್ತ ಅಧಿಕಾರವನ್ನ ಕೂಡ ಉಳಿಸಿಕೊಳ್ಳೋಕೆ ಆಗಿಲ್ಲ. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್ಮೋಹನ್ ಮುಂದೆ ಸೋತು ಸುಣ್ಣವಾದ್ರು. ಈಗ ಮತ್ತೊಮ್ಮೆ ಘಟಬಂಧನ್ ಸಹವಾಸ ಬೇಡ ಅಂತಾ ಸುಮ್ಮನಾಗಿದ್ದಾರೆ. ಇಲ್ಲಿ ಕೆಸಿಆರ್ ಕೂಡ ಅಷ್ಟೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟೋಕೆ ಭರದ ತಯಾರಿ ನಡೆಸ್ತಿದ್ರು. ಇದಕ್ಕಾಗಿ ತಮ್ಮ ಪಕ್ಷದ ಹೆಸರನ್ನೇ ಬದಲಾಯಿಸಿ, ಬಿಆರ್ಎಸ್ ಅಂತಾ ಮಾಡಿಕೊಂಡು ರಾಷ್ಟ್ರೀಯ ಪಕ್ಷವನ್ನಾಗಿಸಿದ್ರು. ರಾಷ್ಟ್ರೀಯ ಪಕ್ಷ ಮಾಡಿಕೊಂಡ್ರೆ ಏನಂತೆ..ರಾಜ್ಯವನ್ನೇ ಉಳಿಸೋಕೆ ಆಗಿಲ್ಲ. ಇನ್ನು ದೇಶ ಗೆಲ್ಲೋಕೆ ಕೆಸಿಆರ್ಗೆ ಸಾಧ್ಯಾನಾ? ಕಾಲಿನ ಮೇಲೆ ಚಪ್ಪಡಿ ಹಾಕಿಕೊಳ್ಳೋದು ಅಂದ್ರೆ ಇದೇ. ಕೆಸಿಆರ್ ಇನ್ನೂ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ, ಮತ್ತೆ ಜನಸಾಮಾನ್ಯರ ಬಳಿಗೆ ಹೋಗದೆ ಇದ್ದಲ್ಲಿ ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಕೈಯಿಂದಲೂ ಹೊಡೆತ ತಿನ್ನೋದು ಗ್ಯಾರಂಟಿ. ಯಾಕಂದ್ರೆ ತೆಲಂಗಾಣದಲ್ಲಿ ಪ್ರಭಾವಿಯಾಗಿ ಬೆಳೆಯೋ ಮುನ್ಸೂಚನೆಯನ್ನ ಬಿಜೆಪಿ ಈ ಬಾರಿಯ ಎಲೆಕ್ಷನ್ನಲ್ಲೇ ಕೊಟ್ಟಿದೆ. 2018ರ ಚುನಾವಣೆಯಲ್ಲಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಬಾರಿ ತೆಲಂಗಾಣದ 8 ಕ್ಷೇತ್ರಗಳಲ್ಲಿ ಕಮಲ ಅರಳಿಸಿದೆ. ಹೀಗಾಗಿ ಹೆಸರಿಗೆ ರಾಷ್ಟ್ರೀಯ ಪಕ್ಷವಾಗಿರೋ ಬಿಆರ್ಎಸ್ಗೆ ಎರಡು ಅಸಲಿ ರಾಷ್ಟ್ರೀಯ ಪಕ್ಷಗಳೇ ಸೆಡ್ಡು ಹೊಡೆಯುತ್ತಿವೆ. ಕೆಸಿಆರ್ ಪಾಲಿಗೆ ಮುಂದಿನ 5 ವರ್ಷಗಳ ಹೋರಾಟ ಅಕ್ಷರಶ: ಅಳಿವು-ಉಳಿವಿನ ಪ್ರಶ್ನೆಯಾಗೋದ್ರಲ್ಲಿ ಅನುಮಾನವೇ ಇಲ್ಲ. ಇದು ಸದ್ಯದ ತೆಲಂಗಾಣ ರಾಜಕೀಯದ ಕುರಿತ ಕಹಾನಿ..