ಮಗನ ಸಾವಿಗೆ ಸಿಗದ ನ್ಯಾಯ – 7 ಬಾರಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೇಡು ತೀರಿಸಿಕೊಂಡ ತಂದೆ!
ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಛತ್ತೀಸ್ಗಢದ ಸಾಜಾ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ತನ್ನ ಮಗನ ಸಾವಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ತಂದೆಯೊಬ್ಬರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಏಳು ಬಾರಿ ಸ್ಪರ್ಧಿಸಿ ಗೆದ್ದಿದ್ದ ಹಾಲಿ ಸಚಿವರನ್ನೇ ಸೋಲಿಸಿದ ಕುತೂಹಲಕಾರಿ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಸಜಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವರ್ ಸಾಹು ಎನ್ನುವವರು ಈ ಬಾರಿ ಛತ್ತೀಸ್ಗಢ ವಿಧಾನಸಭೆ ಚುನಾವಣೆಯಲ್ಲಿ ತನ್ನ ಮಗನ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದರು. ಇದೀಗ ಅವರಿಗೆ ಭರ್ಜರಿ ಗೆಲುವಾಗಿದೆ. ಅದೂ ಕೂಡಾ ಆ ರಾಜ್ಯದ ಸಚಿವ, 7 ಬಾರಿ ಚುನಾವಣೆ ರವೀಂದ್ರ ಚೌಬೆ ಅವರನ್ನೇ ಸೋಲಿಸಿ ಮನೆಗೆ ಕಳಿಸಿದ್ದಾರೆ. ಸಚಿವ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚೌಬೆ ಅವರ ವಿರುದ್ಧ ಬರೋಬ್ಬರಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಖೇಲ್ ಖತಂ? – ಲೋಕಸಭೆಯಲ್ಲಿ ಏನಾಗುತ್ತೆ?
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈತ ಈಶ್ವರ್ ಸಾಹು. ಛತ್ತೀಸಗಢ ರಾಜ್ಯದ ಬಿಜೆಪಿ ಅಭ್ಯರ್ಥಿ. 7 ಬಾರಿ ಗೆದ್ದಿದ್ದ ಕಾಂಗ್ರೆಸ್ ಶಾಸಕ ರವೀಂದ್ರ ಚೌಬೆ ಅವರನ್ನು ಸಾಹು ಸೋಲಿಸಿದ್ದಾರೆ. ಈ ವ್ಯಕ್ತಿಯ ಮಗ ಗುಂಪು ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದರು. ಆ ಗಲಭೆಕೋರರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇಂದು ಸಾಹು ಪ್ರಜಾಪ್ರಭುತ್ವ ಯುದ್ಧದಲ್ಲಿ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಏನಿದು ಘಟನೆಯ ಹಿನ್ನೆಲೆ?
ಅಂದ ಹಾಗೆ, 2023 ಏಪ್ರಿಲ್ 8 ರಂದು ಛತ್ತೀಸ್ಗಢದ ಸಜಾ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಮಕ್ಕಳ ಜಗಳದಿಂದ ಆರಂಭವಾಗಿ ನಂತರ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಗಲಾಟೆ ತಾರಕಕ್ಕೇರಿ ಬೆಂಕಿ ಹಚ್ಚುವಂತಹ ಘಟನೆಗಳೂ ನಡೆದಿದ್ದವು. ಈ ಘಟನೆಯ ನಾಲ್ಕು ದಿನಗಳ ನಂತರ, ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಈಶ್ವರ್ ಸಾಹು ಅವರ ಮಗ ಭುವನೇಶ್ವರ ಸಾಹು ಕೊಲೆಯಾಗಿದ್ದರು.
ಈ ಕೊಲೆ ಪ್ರಕರಣ ನಡೆದ ನಂತರ ಬಿಜೆಪಿ ತೀವ್ರವಾಗಿ ಪ್ರತಿಭಟನೆ ಆರಂಭಿಸಿತ್ತು. ಇದು ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸರ್ಕಾರದ ವಿರುದ್ಧ ಜನಾಕ್ರೋಶ ಎದುರಾಗಿತ್ತು. ಆಗ ಅಂದಿನ ಛತ್ತೀಸ್ಗಢ ಕಾಂಗ್ರೆಸ್ ಸರ್ಕಾರ ಭುವನೇಶ್ವರ್ ಸಾಹು ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿತ್ತು. ಆದರೆ ಸಂತ್ರಸ್ತ ಕುಟುಂಬ ಅದನ್ನು ಪಡೆಯಲು ನಿರಾಕರಿಸಿತು. ಮೃತ ಯುವಕನ ಕುಟುಂಬ ನಮಗೆ ನ್ಯಾಯ ಬೇಕು, ಹಣ ಮತ್ತು ಸರ್ಕಾರಿ ಉದ್ಯೋಗವಲ್ಲ ಎಂದು ಹೇಳಿದ್ದರು.
ಇದಾದ ನಂತರ ಬಿಜೆಪಿ ಮೃತ ಯುವಕನ ತಂದೆ ಈಶ್ವರ್ ಸಾಹು ಅವರಿಗೆ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲುವಂತೆ ಮಾಡಿತ್ತು. ಸದ್ಯ ಈಶ್ವರ್ ಸಾಹು ಅವರು 40 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಮಗನಿಗೆ ತಂದೆ ನ್ಯಾಯ ಕೊಡಿಸಿದ್ದಾರೆ ಎಂದು ಸಾಕಷ್ಟು ಮಂದಿ ಕೊಂಡಾಡುತ್ತಿದ್ದಾರೆ.
ಬಿಜೆಪಿ ಮುಖಂಡ ಬಿಎಲ್ ಸಂತೋಷ್ ಸೇರಿದಂತೆ ಹಲವು ನಾಯಕರು ಈಶ್ವರ್ ಸಾಹು ಅವರ ಗೆಲುವಿನ ಹಿನ್ನೆಲೆಯ ಬಗ್ಗೆ ಪೋಸ್ಟ್ ಹಾಕುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.