ಮೂರು ರಾಜ್ಯಗಳಲ್ಲಿ ಗೆದ್ದು ಬೀಗಿದ ಬಿಜೆಪಿ – ಪಕ್ಷದೊಳಗಿನ ಕಚ್ಚಾಟವೇ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ?
ಐದು ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳನ್ನು ಗೆದ್ದುಕೊಂಡಿದ್ದರೆ ಕಾಂಗ್ರೆಸ್ ಕೇವಲ ಒಂದು ರಾಜ್ಯ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ನಾಲ್ಕು ರಾಜ್ಯಗಳ ಫಲಿತಾಂಶ ಮಾತ್ರ ಭಾನುವಾರ ಪ್ರಕಟವಾಗಿದ್ದು ಮಿಜೊರಾಂನಲ್ಲಿ ಸೋಮವಾರ ಮತ ಎಣಿಕೆ ನಡೆಯಲಿದೆ.
ಎರಡು ಕಳೆದುಕೊಂಡ ಕಾಂಗ್ರೆಸ್ – ಮೂರು ಗೆದ್ದ ಬಿಜೆಪಿ!
ಕಾಂಗ್ರೆಸ್ ಈ ಪಂಚರಾಜ್ಯ ಚುನಾವಣೆಗೂ ಮುಂಚಿತವಾಗಿ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ ಈಗ ಅವರೆರಡೂ ರಾಜ್ಯಗಳಾದ ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಕಳೆದು ಕಂಡಿದೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದ ಮಧ್ಯಪ್ರದೇಶದ ಜೊತೆಗೆ ಎರಡು ರಾಜ್ಯಗಳನ್ನು ಗೆದ್ದುಕೊಂಡಿದೆ.
ರಾಜಸ್ಥಾನದಲ್ಲಿ ಬಿಜೆಪಿ ‘ರಾಜ’
ತೀವ್ರ ಹಣಾಹಣಿಯಿಂದ ಕೂಡಿದ್ದ ರಾಜಸ್ಥಾನದಲ್ಲಿ ಬಿಜೆಪಿ ಐದು ವರ್ಷಗಳ ನಂತರ ಮತ್ತೆ ಅಧಿಕಾರದ ಗದ್ದುಗೆ ಏರಿದೆ. 114 ಸೀಟುಗಳಲ್ಲಿ ಗೆದ್ದಿರುವ ಬಿಜೆಪಿ ಅಧಿಕಾರವನ್ನು ಕಾಂಗ್ರೆಸ್ ಕೈಯಿಂದ ಕಿತ್ತು ಕೊಂಡಿದೆ. ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 71 ಸೀಟು ಗೆಲ್ಲಲು ಮಾತ್ರ ಯಶಸ್ವಿಯಾಗಿ ಹೀನಾಯ ಸೋಲು ಅನುಭವಿಸಿದೆ. ಇನ್ನು ಪಕ್ಷೇತರರು 14 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಕಚ್ಚಾಟವೇ ಬಿಜೆಪಿಗೆ ವರದಾನವಾಗಿದೆ.
ಮಧ್ಯಪ್ರದೇಶದಲ್ಲಿ ಕಮಲ ಕಲರವ!
ಕಳೆದ 20 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಈಗ ಮತ್ತೊಮ್ಮೆ ಭಾರಿ ಬಹುಮತದೊಂದಿಗೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದೆ. 2018ರಲ್ಲಿ ಗೆದ್ದು ಒಂದೂವರೆ ವರ್ಷ ಮಾತ್ರ ಆಡಳಿತ ನಡೆಸಿದ್ದ ಕಾಂಗ್ರೆಸ್ ನ ಅಧಿಕಾರದ ಕನಸು ಭಗ್ನವಾಗಿದೆ. ಮಧ್ಯಪ್ರದೇಶದಲ್ಲಿ 167 ಸೀಟು ಗೆದ್ದಿರುವ ಬಿಜೆಪಿ ತನ್ನ ಭದ್ರ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿದೆ. ಆದರೆ ಅಧಿಕಾರದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಕೇವಲ 62 ಸೀಟುಗಳಲ್ಲಿ ಮಾತ್ರ ಗೆಲುವು ಸಿಕ್ಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಹಣಾಹಣಿಯ ರಾಜ್ಯದಲ್ಲಿ ಕೇವಲ ಒಂದು ಸೀಟು ಮಾತ್ರ ಪಕ್ಷೇತರರ ಪಾಲಾಗಿದೆ.
ಛತ್ತೀಸ್ ಗಢದಲ್ಲಿ ಮತ್ತೆ ಅರಳಿದ ತಾವರೆ!
ಐದು ವರ್ಷಗಳ ನಂತರ ಬಿಜೆಪಿ ಛತ್ತೀಸ್ ಗಢದಲ್ಲಿ ಮತ್ತೆ ಆಧಿಕಾರಕ್ಕೆ ಹಿಂತಿರುಗಿದೆ. ಛತ್ತೀಸ್ ಗಢದ 90 ಕ್ಷೇತ್ರಗಳಲ್ಲಿ 54 ಸೀಟು ಗೆದ್ದಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರದ ಹಿಡಿದಿದೆ. ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಗೆ ಮತದಾರರು ಸೋಲಿನ ಆಘಾತ ನೀಡಿದ್ದಾರೆ. 35 ಸೀಟುಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಕೊಂಡಿದೆ. ಇತರರು ಒಂದು ಸ್ಥಾನ ಮಾತ್ರ ಗೆದ್ದಿದ್ದು ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗ್ತಾರೆಂದು ನೋಡಬೇಕಿದೆ.