ಪನ್ನುನ್ ಹತ್ಯೆ ಯತ್ನದ ಹಿಂದೆ ಭಾರತದ ಕೈವಾಡ ಆರೋಪ – ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ ಕೇಂದ್ರ ಸರ್ಕಾರ
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಯತ್ನದ ಹಿಂದೆ ಭಾರತದ ಬೇಹುಗಾರಿಕಾ ಅಧಿಕಾರಿ ಕೈವಾಡ ಇದೆ ಎಂದು ಅಮೆರಿಕ ಆರೋಪಿಸಿದೆ. ಅಮೆರಿಕದ ಅತ್ಯಂತ ಗಂಭೀರ ಆರೋಪದ ಬೆನ್ನಲ್ಲೇ ಭಾರತ ಈ ಬಗ್ಗೆ ವಿಚಾರಣೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಈ ಸಮಿತಿ ಕ್ರಿಮಿನಲ್ ಗಳು, ಭಯೋತ್ಪಾದಕರು ಹಾಗು ಇತರ ಇಂತಹ ಆರೋಪ ಹೊತ್ತವರ ನಡುವೆ ಇರಬಹುದಾದ ನಂಟುಗಳ ಬಗ್ಗೆ ತನಿಖೆ ನಡೆಸಲಿದೆ ಎಂದೂ ಪ್ರಕಟಣೆ ಹೇಳಿದೆ. ನವೆಂಬರ್ 18 ರಂದು ಈ ಸಮಿತಿ ರಚನೆಯಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಈ ಉನ್ನತ ಮಟ್ಟದ ಸಮಿತಿಯನ್ನು ಯಾವ ಇಲಾಖೆಯವರು ಮುನ್ನಡೆಸಲಿದ್ದಾರೆ ಎಂದು ಅದು ಹೇಳಿಲ್ಲ. ಆದರೆ ಭಾರತದ ಬೇಹು ಇಲಾಖೆ ಅಧಿಕಾರಿ ಈ ಹತ್ಯೆಯ ಸೂತ್ರಧಾರಿ ಎಂದು ಅಮೆರಿಕ ಮಾಡಿರುವ ಆರೋಪದ ಬಗ್ಗೆ ವಿದೇಶಾಂಗ ಇಲಾಖೆ ಯಾವುದೇ ಹೇಳಿಕೆ ನೀಡಿದ ವರದಿ ಬಂದಿಲ್ಲ. ಇದು ನಮ್ಮ ರಾಷ್ಟ್ರೀಯ ಭದ್ರತೆಗೂ ಸಮಸ್ಯೆ ತಂದೊಡ್ಡಲಿರುವುದರಿಂದ ಇಂತಹ ಮಾಹಿತಿಗಳನ್ನು ಭಾರತ ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ನಿ ಹೇಳಿದ್ದಾರೆ.
ಭಾರತ ಮೂಲದ ಈಗ ಅಮೆರಿಕ ಪ್ರಜೆಯಾಗಿರುವ ಗುರುಪತ್ವಂತ್ ಸಿಂಗ್ ಸಿಖ್ಖರಿಗೆ ಪ್ರತ್ಯೇಕ ದೇಶ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದಾನೆ. ಈತನನ್ನ ನ್ಯೂಯಾರ್ಕ್ ನಲ್ಲಿ ಹತ್ಯೆ ಮಾಡಲು ನಿಖಿಲ್ ಗುಪ್ತಾ ಭಾರತದಲ್ಲೇ ಇದ್ದು ಸಂಚು ರೂಪಿಸಿದ್ದ ಎಂದು ಅಮೆರಿಕಾದ ಅಟಾರ್ನಿ ಡೇಮಿಯನ್ ವಿಲಿಯಮ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಪನ್ನುನ್ ಹತ್ಯೆಗೆ 1 ಲಕ್ಷ ಅಮೆರಿಕನ್ ಡಾಲರ್ ಪಾವತಿಸಲು ಗುಪ್ತಾ ಒಪ್ಪಿಕೊಂಡಿದ್ದ. ಕಳೆದ ಜೂನ್ ತಿಂಗಳಲ್ಲಿ 15 ಸಾವಿರ ಡಾಲರ್ ಹಣವನ್ನ ಹಂತಕನಿಗೆ ಮುಂಗಡ ಪಾವತಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಈ ಗುರುಪತ್ವಂತ್ ಸಿಂಗ್ ಯಾರು..? ಈತನ ಹತ್ಯೆಗೆ ಭಾರತದ ಬೇಹುಗಾರಿಕಾ ಅಧಿಕಾರಿ ಯಾಕೆ ಯತ್ನಿಸಬೇಕು ಅನ್ನೋದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.
ಇದನ್ನೂ ಓದಿ : ಪಂಚರಾಜ್ಯ ಚುನಾವಣಾ ಸಮೀಕ್ಷೆ – ಯಾವ ರಾಜ್ಯದಲ್ಲಿ ಯಾವ ಪಕ್ಷ ಮೈಲುಗೈ ಸಾಧಿಸಲಿದೆ ? ಇಲ್ಲಿದೆ ಸಂಪೂರ್ಣ ವಿವರ..
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನಾಗಿರುವ ಗುರುಪತ್ವಂತ್ ಸಿಂಗ್ ಪನ್ನುಗೆ ಪಂಜಾಬ್ ರಾಜ್ಯವನ್ನು ಖಲಿಸ್ತಾನ ದೇಶ ಮಾಡುವುದು ಇವನ ಮೂಲ ಉದ್ದೇಶವಾಗಿದೆ. ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ದ್ವೇಷ, ಭೀತಿ ಹರಡುವ ಕೆಲಸ ಮಾಡ್ತಿರುವ ಈಗ ಭಯೋತ್ಪಾದಕ ಕೃತ್ಯಗಳ ಮೂಲಕ ಭಾರತದ ತನಿಖಾ ಸಂಸ್ಥೆಗಳಿಗೂ ಮೋಸ್ಟ್ ವಾಂಟೆಡ್ ಆಗಿದ್ದಾನೆ. 2019ರಿಂದಲೂ ಗುರುಪತ್ವಂತ್ ಸಿಂಗ್ ಪನ್ನು ಎನ್ ಐಎ ವಾಂಟೆಡ್ ಲಿಸ್ಟ್ನಲ್ಲಿ ಇದ್ದಾನೆ. ತನ್ನ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಹೆಸರಲ್ಲಿ ಇಂಟರ್ನೆಟ್ ಮೂಲಕವೂ ದ್ವೇಷ ಬಿತ್ತುತ್ತಿರುವ ಈತ ಮತಾಂಧತೆ ಹರಡುವ ಕೆಲಸ ಮಾಡ್ತಿದ್ದಾನೆ. ಯುವಕರು ಭಯೋತ್ಪಾದಕ ಕೃತ್ಯ ಎಸಗಲು ಪ್ರಚೋದನೆ ನೀಡುತ್ತಿದ್ದಾನೆ. ಇದೇ ಕಾರಣಕ್ಕೆ 2019ರಲ್ಲೇ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ಹಾಗೇ ಅಮೃತಸರದಲ್ಲಿನ ಆತನ ಆಸ್ತಿಯನ್ನು ಎನ್ ಐಎ ಇತ್ತೀಚೆಗಷ್ಟೇ ಮುಟ್ಟುಗೋಲು ಹಾಕಿಕೊಂಡಿತ್ತು. ಅಲ್ಲದೆ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಸುವುದಾಗಿಯೂ ಹಾಗೂ ಸಿಖ್ ಸಮುದಾಯದವರು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ ಎಂದು ವಿಡಿಯೋ ಬಿಡುಗಡೆ ಮಾಡಿದ್ದ. ಇದೇ ಕಾರಣಕ್ಕೆ ಪನ್ನುನ್ ವಿರುದ್ಧ 2021ರ ಫೆಬ್ರವರಿ 3ರಂದು ಎನ್ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್ 29ರಂದು ಸರ್ಕಾರ ಘೋಷಣೆ ಮಾಡಿದೆ. ಹೊರದೇಶಗಳಲ್ಲಿ ಇದ್ದುಕೊಂಡೇ ಈತ ಭಾರತದಲ್ಲಿ ಭೀತಿ ಸೃಷ್ಟಿಸುವ ಕೆಲಸ ಮಾಡ್ತಿದ್ದಾನೆ.
ಸದ್ಯ ನಿಜ್ಜರ್ ಕೊಲೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಹೇಳಿದ್ದಾಗ ಭಾರತ ಅದನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಹಾಗೇ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಭಾರತದ ಕೆನಡಾ ಹೈ ಕಮಿಷನ್ ನ ಮೂರನೇ ಎರಡರಷ್ಟು ರಾಜತಾಂತ್ರಿಕರನ್ನೂ ದೇಶ ಬಿಟ್ಟು ಹೋಗುವಂತೆ ಹೇಳಿತ್ತು. ಆದ್ರೀಗ ಅಮೆರಿಕ ಸರ್ಕಾರದ ಬೆನ್ನಲ್ಲೇ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದೆ. ಕೆನಡಾ ಆರೋಪ ಮಾಡಿದ್ದ ವಿಧಾನಕ್ಕೂ ಅಮೆರಿಕ ಆರೋಪವನ್ನು ತಿಳಿಸಿರುವ ವಿಧಾನಕ್ಕೂ ಇರುವ ವ್ಯತ್ಯಾವೇ ಇದಕ್ಕೆ ಕಾರಣ ಎಂದು ಕೆನಡಾದಲ್ಲಿ ಭಾರತದ ಹೈ ಕಮಿಷನರ್ ಇದಕ್ಕೆ ಕಾರಣ ಕೊಟ್ಟಿದ್ದಾರೆ. ಕೆನಡಾ ಬೆನ್ನಲ್ಲೇ ಅಮೆರಿಕ ಕೂಡ ಹತ್ಯೆ ಸಂಚಿನ ಆರೋಪವನ್ನು ಹೊರಿಸಿರುವುದು, ನೇರವಾಗಿ ಭಾರತದ ಹಿರಿಯ ಬೇಹು ಅಧಿಕಾರಿಯೇ ಅದರ ಸೂತ್ರಧಾರ ಎಂದು ಹೇಳಿರುವುದು ನಿಜವಾಗಿಯೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ. ಹೀಗಾಗಿ ಭಾರತದ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.